ಮದ್ದೂರು: ‘ರಾಜ್ಯ ಬಜೆಟ್ ಅನ್ನು ಪಾಕಿಸ್ತಾನ್ ಬಜೆಟ್‌ಗೆ ಹೋಲಿಸುತ್ತಾರಲ್ಲ ಅವರಿಗೇನೂ ಮಾನ ಮರ್ಯಾದೆ ಇಲ್ವಾ’ ಎಂದು ಶಾಸಕ ಕೆ. ಎಂ ಉದಯ್ ಪ್ರಶ್ನಿಸಿದರು.
ತಾಲ್ಲೂಕಿನ ಚಿನ್ನನದೊಡ್ಡಿ, ಕೆಸ್ತೂರು, ಅಡಗನಹಳ್ಳಿ, ಚಿಕ್ಕಂಕನಹಳ್ಳಿ, ಹೂತಗೆರೆ, ನವಿಲೆ ಆಂಕನಾಥಪುರ ರಸ್ತೆ, ಹರಕನಹಳ್ಳಿ ಮಲ್ಲನಾಯಾಕನಹಳ್ಳಿ ಸೇರಿದಂತೆ ಹಲವು ಕಡೆ ಶನಿವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಬಗ್ಗೆ ಬಿಜೆಪಿ ಕೆಲವು ನಾಯಕರು ಹಲಾಲ್ ಬಜೆಟ್, ಪಾಕಿಸ್ತಾನ್ ಬಜೆಟ್ ಎಂದೆಲ್ಲಾ ಟೀಕಿಸಿರುವುದರ ಬಗ್ಗೆ ಸುದ್ದಿಗಾರರು ಕೇಳಲಾದ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
‘₹ 4.9 ಲಕ್ಷ ಕೋಟಿ ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ₹ 4.5 ಸಾವಿರ ಘೋಷಣೆ ಮಾಡಿರುವುದು ತಪ್ಪಾ ಎಂದು ಪ್ರಶ್ನಿಸಿದ ಅವರು, ಮುಸಲ್ಮಾನರೂ ಮನುಷ್ಯರಲ್ಲವಾ, ಪಂಚರ್ ಸೇರಿದಂತೆ ಹಲವು ಕಠಿಣ ಕೆಲಸಗಳನ್ನು ಅವರೇ ಬೇಕಲ್ಲವಾ? ಸಮಾಜವೆಂದ ಮೇಲೆ ಒಕ್ಕಲಿಗರು, ವಿಶ್ವಕರ್ಮ, ಭಜಂತ್ರಿಗಳು, ಕುಂಬಾರರು ಸೇರಿದಂತೆ ಹಲವಾರು ಸಮುದಾಯದವರೆಲ್ಲರೂ ಇದ್ದಾಗ ಮಾತ್ರ ಒಂದು ಸಮಾಜವಲ್ಲವಾ’ ಎಂದು ಪ್ರಶ್ನಿಸಿದರು.
‘ವಿರೋಧ ಪಕ್ಷದವರು ಎಂದ ಮಾತ್ರಕ್ಕೆ ಎಲ್ಲವನ್ನೂ ವಿರೋಧಿಸುವುದೇ ಅವರ ಕೆಲಸ ಎಂದು ಕೊಂಡುಬಿಟ್ಟಿದ್ದಾರೆ. ಮೊದಲೇ ನಿರುದ್ಯೋಗಿಗಳಾಗಿರುವ ಅವರು ನಮ್ಮ ಸರ್ಕಾರವು ಯಶಸ್ವಿಯಾಗಿ ಆಡಳಿತವನ್ನು ನೀಡುತ್ತಿರುವುದನ್ನು ಸಹಿಸಲಾಗದೆ ಹೀಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ’ ಎಂದು ಕಿಡಿಕಾರಿದರು.
ಪಟ್ಟಣದ ಪೇಟೆ ಬೀದಿ ವಿಸ್ತರಣೆವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸುಮಾರು 25 ವರ್ಷಗಳಿಂದ ಈ ವಿಷಯದಲ್ಲಿ ಯಾರೂ ಈ ಕೆಲಸ ಮಾಡೋಕೆ ಆಗಿರಲಿಲ್ಲ. ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿದ ಪರಿಣಾಮ ಘೋಷಣೆಯಾಗಿದೆ. ಇದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.
ಮನ್‌ಮುಲ್ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಹೆಸರು ಮತ್ತೆ ಮುನ್ನೆಲೆಗೆ ಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಮೊದಲೇ ಹೇಳಿದ ಹಾಗೆ ನನ್ನ ಕ್ಷೇತ್ರದಲ್ಲೇ ನನಗೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಪುರುಸೊತ್ತಿಲ್ಲ ಹಾಗಾಗಿ ಆ ಬಗ್ಗೆ ನಾನು ಆಕಾಂಕ್ಷಿತನಲ್ಲ’ ಎಂದರು.
ಈ ವೇಳೆ ಮನ್‌ಮುಲ್ ನಿರ್ದೇಶಕ ಹರೀಶ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಶಂಕರಲಿಂಗೇಗೌಡ, ಚಾಕನಕೆರೆ ಕುಮಾರ್, ಸಿಪಾಯಿ ಶ್ರೀನಿವಾಸ್, ಕದಲೂರು ರವಿ, ತಿಮ್ಮೆಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.