ADVERTISEMENT

ಮಂಡ್ಯದಲ್ಲಿ ಜೆಡಿಎಸ್‌ನಷ್ಟೇ ಬಿಜೆಪಿಯೂ ಬಲಿಷ್ಠ: ಪ್ರೀತಂಗೌಡ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 4:45 IST
Last Updated 5 ಫೆಬ್ರುವರಿ 2026, 4:45 IST
ಪ್ರೀತಂ ಗೌಡ
ಪ್ರೀತಂ ಗೌಡ   

ಮಂಡ್ಯ: ‘ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ವಿಚಾರ ಇರಬೇಕೋ ಬೇಡವೋ ಎನ್ನುವುದನ್ನು ರಾಷ್ಟ್ರ ನಾಯಕರು ತೀರ್ಮಾನ ಮಾಡುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ನಷ್ಟೇ ಬಿಜೆಪಿಯೂ ಬಲಿಷ್ಠವಾಗಿದೆ. ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರೋಣ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿದರು. 

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ತಾ.ಪಂ, ಗ್ರಾ.ಪಂ. ಚುನಾವಣೆ ಬಗ್ಗೆ ಕಾರ್ಯಕರ್ತರಿಗಾಗಿ ಪಕ್ಷ ಸಂಘಟನೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಜೊತೆಗೆ ಮಂಡ್ಯದಲ್ಲಿಯೂ ಮಾಡಿಕೊಂಡು ಚುನಾವಣೆ ಸಿದ್ಧತೆ ಬಗ್ಗೆ ಹೇಳಲಾಗುತ್ತಿದೆ ಎಂದರು.

‘ಮೈತ್ರಿ ತೀರ್ಮಾನ ಈ ಸಭೆಯಲ್ಲಿ ತೀರ್ಮಾನ ಆಗುವುದಲ್ಲ, ರಾಷ್ಟ್ರೀಯ ಮಟ್ಟದಲ್ಲಿ ಈ ಮೈತ್ರಿ ವಿಚಾರ ಚರ್ಚೆ ಅಂತಿಮವಾಗುತ್ತದೆ. ಬಿಜೆಪಿಗೆ ಪ್ರತಿ ಬೂತ್‌ನಲ್ಲಿ ತನ್ನದೇ ಆದ ಛಾಪು-ಶಕ್ತಿ ಇದೆ. ಹಿಂದೆ ಹಾಗೂ ಇಂದಿನ ಸ್ಥಿತಿ ಬೇರೆ ಬೇರೆ ಇದೆ. ನಾವೆಲ್ಲರೂ ಬಿಜೆಪಿಗೆ ಶಕ್ತಿಯಾಗಿದ್ದೇವೆ’ ಎಂದು ತಿಳಿಸಿದರು.

ADVERTISEMENT

ನಾರಾಯಣಗೌಡಗೆ ಟಿಕೆಟ್‌:

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಇತ್ತು. ಮಂಡ್ಯ ಜಿಲ್ಲೆ ಸೇರಿ ಎಲ್ಲ ಕಡೆ ಬಿಜೆಪಿ ಸ್ವಂತ ಶಕ್ತಿ ಮೇಲೆ ಚುನಾವಣೆ ಮಾಡುತ್ತದೆ. ಪ್ರತ್ಯೇಕವಾಗಿ ಚುನಾವಣೆ ಎದುರಿಸಲು ನಾವು ಸಿದ್ಧ. ಮೈತ್ರಿ ಮಾನದಂಡದ ಪ್ರಕಾರ ನಾವು ನಡೆಯೋಣ. ಅವರು ಮುಖ್ಯಮಂತ್ರಿ, ಇವರು ಮುಖ್ಯಮಂತ್ರಿ ಅನ್ನೋದನ್ನು ನಿಲ್ಲಿಸಬೇಕು. ಮುಂದಿನ ಚುನಾವಣೆಯಲ್ಲಿ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಕೆ.ಸಿ. ನಾರಾಯಣ್‌ಗೌಡ ಅವರಿಗೆ ಟಿಕೆಟ್‌ ಎಂದು ಹೇಳಿದರು. 

ಚನ್ನಪಟ್ಟಣದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು ಗೆಲುವು ಪಡೆದಿದ್ದರು. ಆದರೆ ನಿಖಿಲ್ ಕುಮಾರಸ್ವಾಮಿ ಅವರು ಸೋತರು. ಮುಂದೆ ಅವರನ್ನು ಗೆಲ್ಲಿಸಿಕೊಳ್ಳಬೇಕು. ಈಗ ಹಾಸನದಲ್ಲಿ ನೂರಕ್ಕೆ ನೂರರಷ್ಟು ನನಗೆ ಟಿಕೆಟ್ ಸಿಗುತ್ತದೆ. ಮಂಡ್ಯ ಮಾತ್ರ ಜೆಡಿಎಸ್‌ಗೆ ಅಂದರೆ ನಮ್ಮ ಕಾರ್ಯಕರ್ತರ ಕಥೆ ಏನು? ಬಿಜೆಪಿ ಕಾರ್ಯಕರ್ತರನ್ನು ಕುಗ್ಗಿಸುವ ಕೆಲಸ ಯಾರು ಮಾಡಬಾರದು ಎಂದು ತಿಳಿಸಿದರು.

ಎನ್‌ಡಿಎ ನಮಗೆ ಬಹಳ ಮುಖ್ಯವಾಗಿದೆ. 2024ರಲ್ಲಿ ಬಿಜೆಪಿಯಿಂದಲೇ ಜೆಡಿಎಸ್ ಗೆದ್ದಿದೆ. ಏಳು ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲ್ಲು ಬಿಜೆಪಿ ಸಹಾಯ ಬೇಕು. ಎರಡೂ ಪಕ್ಷದವರು ಅರ್ಥ ಮಾಡಿಕೊಂಡು ಒಟ್ಟಿಗೆ ಹೋಗೋಣ. ಎಲ್ಲರು ಸೇರಿ ಗಟ್ಟಿಯಾಗಿ ಚುನಾವಣೆ ಮಾಡೋಣ. ಸ್ಥಳೀಯ ಕಾರ್ಯಕರ್ತರು ಸ್ಥಳೀಯ ಸಂಸ್ಥೆಗೆ ಮೈತ್ರಿ ಬೇಡ ಅಂತ ಹೇಳಿದ್ದಾರೆ. ನಮ್ಮ ಶಕ್ತಿಗೆ ಅನುಗುಣವಾಗಿ ಸ್ವತಂತ್ರವಾಗಿ ಬಿಜೆಪಿ ಸ್ಪರ್ಧೆ ಖಚಿತ ಎಂದರು.

ಕೆ.ಸಿ.ನಾರಾಯಣಗೌಡ

ಹಾಸನದಲ್ಲಿ ನನಗೆ ಟಿಕೆಟ್‌ ಸಿಗಲಿದೆ: ಪ್ರೀತಂಗೌಡ‌ ಕೆ.ಆರ್‌.ಪೇಟೆಯಲ್ಲಿ ಕೆ.ಸಿ.ನಾರಾಯಣಗೌಡರಿಗೆ ಟಿಕೆಟ್‌ ಖಾತ್ರಿ  ಮೈತ್ರಿ ಬಗ್ಗೆ ವರಿಷ್ಠರು ತೀರ್ಮಾನಿಸಲಿದ್ದಾರೆ 

ಬಿಜೆಪಿ ಕಾರ್ಯಕರ್ತರಿಗೆ ಎಚ್‌ಡಿಕೆ ಕಾಟ’ ಮಂಡ್ಯ: ‘ನಾವು ಆತ್ಮಪೂರ್ವಕವಾಗಿ ರಾಜಕೀಯ ಶಕ್ತಿಯನ್ನು ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಧಾರೆ ಎರೆದು ಗೆಲ್ಲಿಸಿಕೊಂಡು ಬಂದಿದ್ದೇವೆ. ಆದರೆ ಅದನ್ನು ಮರೆತು ನಮ್ಮ ಕಾರ್ಯಕರ್ತರಿಗೆ ಕಾಟ ಕೊಡುತ್ತಿದ್ದಾರೆ’ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣ್‌ಗೌಡ ಆರೋಪಿಸಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ‘ಲೋಕಸಭಾ ಚುನಾವಣೆಯಲ್ಲಿ ವರಿಷ್ಠರ ಮನವಿಗೆ ಒಟ್ಟಾಗಿ ಇದ್ದೆವು. ನಮಗೆ ನೋವು ಇತ್ತು. ಶಕ್ತಿ ತುಂಬಿ ಚುನಾವಣೆ ಮಾಡಿದ್ದೆವು. ಕುಮಾರಸ್ವಾಮಿ ಸ್ಪಂದಿಸುವ ಕೆಲಸವನ್ನು ಮಾಡುತ್ತಿಲ್ಲ. ನಾವೇ ಒಂದು ತಂಡ ಕಟ್ಟಿಕೊಂಡು ರಾಷ್ಟ್ರೀಯ ನಾಯಕರನ್ನು ಶೀಘ್ರದಲ್ಲಿ ಭೇಟಿ ಮಾಡುತ್ತೇವೆ’ ಎಂದು ತಿಳಿಸಿದರು. ಜೆಡಿಎಸ್ ಕಾರ್ಯಕರ್ತರ ಕಿತಾಪತಿ ನಿಲ್ಲಿಸಬೇಕು. ಕೆ.ಆರ್‌. ಪೇಟೆಯಲ್ಲಿ ನಾನು ತಂದ ಅನುದಾನಕ್ಕೆ ಪೂಜೆ ಮಾಡುತ್ತಿದ್ದಾರೆ.ಈಗಿರುವ ಶಾಸಕರ ಹತ್ತಿರ ನಮ್ಮ ಕಾರ್ಯಕರ್ತರನ್ನು ಕಳುಹಿಸಿದರೆ ಶಾಲು ಹಾರ ಹಾಕಿ ಪಾರ್ಟಿಗೆ ಸೇರಿಸಿಕೊಳ್ಳುತ್ತಾರೆ. ನಾನು ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಘೋಷಣೆ ಮಾಡೋದನ್ನು ನಿಲ್ಲಿಸಬೇಕು ಎಂದು ಖಾರವಾಗಿ ನುಡಿದರು. ‘ನಮ್ಮ ಪಕ್ಷದ ಗೌರವಕ್ಕಾಗಿ ಬಾಯಿ ಮುಚ್ಚಿಕೊಂಡು ಇದ್ದೇವೆ. ಇಲ್ಲ ಬೇರೆ ರೀತಿ ಬ್ಲಾಸ್ಟ್ ಮಾಡುತ್ತಿದ್ದೆ. ನಿಮ್ಮ ತಂದೆ ಗೆಲುವಿಗೆ ಎಷ್ಟು ಕಷ್ಟ ಪಟ್ಟಿದ್ದೀವಿ ಎನ್ನುವುದನ್ನು ನಿಖಿಲ್ ಅವರು ಅರ್ಥ ಮಾಡಿಕೊಳ್ಳಬೇಕು’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.