ADVERTISEMENT

ಮಂಡ್ಯ: ತೋಟದ ಮನೆಯಲ್ಲಿ ಸಿಲುಕಿದ ಅಂಧ ಕಲಾವಿದರು!

ಕಲಾ ಸಾಧನಾ ಆರ್ಕೆಸ್ಟ್ರಾ ತಂಡದ ಸದಸ್ಯರು, ಸಂಗೀತ ಕಾರ್ಯಕ್ರಮ ಸ್ಥಗಿತದಿಂದ ಸಂಕಷ್ಟ ಸ್ಥಿತಿ

ಎಂ.ಎನ್.ಯೋಗೇಶ್‌
Published 11 ಮೇ 2020, 19:30 IST
Last Updated 11 ಮೇ 2020, 19:30 IST
ಅಂಚೆಬೀರನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಸಿಲುಕಿರುವ ‘ಕಲಾ ಸಾಧನಾ’ ಆರ್ಕೆಸ್ಟ್ರಾ ತಂಡದ ಸದಸ್ಯರು
ಅಂಚೆಬೀರನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಸಿಲುಕಿರುವ ‘ಕಲಾ ಸಾಧನಾ’ ಆರ್ಕೆಸ್ಟ್ರಾ ತಂಡದ ಸದಸ್ಯರು   

ಮಂಡ್ಯ: ಮದುವೆ ಮನೆ, ಜನ್ಮದಿನ ಸಮಾರಂಭ, ಜಾತ್ರೆ, ಸಂತೆ, ರಸ್ತೆ ಬದಿಯಲ್ಲಿ ಹಾಡುತ್ತಾ ಬದುಕು ಕಟ್ಟಿಕೊಂಡಿದ್ದ ಅಂಧ ಕಲಾವಿದರ ಬಳಗ ಈಗ ಕೊರೊನಾ ಸೋಂಕಿನ ಪರಿಣಾಮದಿಂದಾಗಿ ಸಂಕಷ್ಟ ಸ್ಥಿತಿ ಅನುಭವಿಸುತ್ತಿದ್ದಾರೆ.

ಮಂಡ್ಯ ಮತ್ತು ಹಾಸನ ಜಿಲ್ಲೆ ನಡುವಿನ ಗಡಿ, ಕಿಕ್ಕೇರಿ ಹೋಬಳಿಯ ಅಂಚೆಬೀರನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಸಿಲುಕಿರುವ ಈ ಹಾಡುವ ಹಕ್ಕಿಗಳು ಸಹಾಯದ ನಿರೀಕ್ಷೆಯಲ್ಲಿದ್ದಾರೆ. ‘ಕಲಾ ಸಾಧನಾ’ ತಂಡ ಕಟ್ಟಿಕೊಂಡಿದ್ದ ಇವರು ರಾಜ್ಯದ ವಿವಿಧೆಡೆ ಆರ್ಕೆಸ್ಟ್ರಾ ಕಾರ್ಯಕ್ರಮ ನೀಡುತ್ತಿದ್ದರು. ಚಲನಚಿತ್ರಗೀತೆ, ಭಾವಗೀತೆ, ಭಕ್ತಿ ಗೀತೆಗಳನ್ನು ಹಾಡುತ್ತಾ ಕೇಳುಗರ ಮನಸ್ಸುಗಳಲ್ಲಿ ಆನಂದ ಸೃಷ್ಟಿಸುತ್ತಿದ್ದ ಜೀವಗಳು ಈಗ ನೆರವಿಗಾಗಿ ಹಾತೊರೆಯುತ್ತಿದ್ದಾರೆ.

ಎಚ್‌.ಡಿ.ಕೋಟೆ ತಾಲ್ಲೂಕು ಮೂಲದ ಟಿ.ಸುರೇಶ್‌ ಸಂಪೂರ್ಣವಾಗಿ ಅಂಧರಾಗಿದ್ದು, ಗಾಯನದ ಮೂಲಕವೇ ಜಗತ್ತು ಕಂಡವರು. ಅಂಚೆಬೀರನಹಳ್ಳಿ ಗ್ರಾಮದ ಕಾವೇರಿ ಅವರನ್ನು ಅವರು ವಿವಾಹವಾಗಿದ್ದಾರೆ. ಕಾವೇರಿ ಕೂಡ ಗಾಯಕಿಯಾಗಿದ್ದು, ಕಲಾ ಸಾಧನಾ ತಂಡ ಸದಸ್ಯರು. ಈ ದಂಪತಿಗೆ ಒಂದೂವರೆ ವರ್ಷದ ಗಂಡುಮಗುವಿದೆ. ಪತ್ನಿ ಹಾಗೂ ಮಗುವನ್ನು ನೋಡುವುದಕ್ಕಾಗಿ ಸುರೇಶ್‌ ತಂಡದ ಇತರ ಸದಸ್ಯರೊಂದಿಗೆ ಅಂಚೆಬೀರನಹಳ್ಳಿ ಗ್ರಾಮಕ್ಕೆ ತೆರಳಿದ್ದಾಗ ಲಾಕ್‌ಡೌನ್‌ ಘೋಷಣೆಯಾಯಿತು.

ADVERTISEMENT

ಸುರೇಶ್‌ ಅವರ ಅತ್ತೆ ಮನೆ ಅಂಚೆಬೀರನಹಳ್ಳಿ ಗ್ರಾಮದಿಂದ ಆರ್ಧ ಕಿ.ಮೀ ದೂರ ಇರುವ ತೋಟದಲ್ಲಿದೆ. ಕಳೆದ ಎರಡು ತಿಂಗಳಿಂದ ಅತ್ತೆಯ ಮನೆಯವರೇ ಕಲಾವಿದರನ್ನು ನೋಡಿಕೊಂಡಿದ್ದಾರೆ. ಆದರೆ ಲಾಕ್‌ಡೌನ್‌ ಪರಿಸ್ಥಿತಿ ಮುಂದುವರಿಯುತ್ತಲೇ ಇದ್ದು, ನೋಡಿಕೊಳ್ಳಲಾಗದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅವರು ಸಹಾಯಾಸ್ತಕ್ಕಾಗಿ ಎದುರು ನೋಡುತ್ತಿದ್ದಾರೆ. ಸುರೇಶ್‌ ದಂಪತಿಯ ಜೊತೆಯಲ್ಲಿ ತಬಲಾ ಕಲಾವಿದ ಶಿವರಾಮೇಗೌಡ, ಗಾಯಕ ವಾಸು ಮುಂತಾದವರಿದ್ದಾರೆ.

ಬೆಂಗಳೂರು ವಾಸ: ಈ ಅಂಧ ಕಲಾವಿದರು ಬೆಂಗಳೂರಿನ ಎಚ್‌.ಗೊಲ್ಲಹಳ್ಳಿ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಈಗ ಸಂಗೀತ ವಾದ್ಯಗಳು ಬೆಂಗಳೂರಿನಲ್ಲೇ ಇವೆ. ಕಾರ್ಯಕ್ರಮ ಮುಗಿಸಿ ಅಂಚೆಬೀರನಹಳ್ಳಿಗೆ ತೆರಳಿ ಅಲ್ಲೇ ಸಿಕ್ಕಿಹಾಕಿಕೊಂಡಿದ್ದಾರೆ. ಲಾಕ್‌ಡೌನ್‌ ಘೋಷಣೆಯಾದ ನಂತರ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಹೀಗಾಗಿ ಹಾಡುವ ಹಕ್ಕಿಗಳ ಬದುಕು ಸಂಕಷ್ಟದಲ್ಲಿ ಸಿಲುಕಿದೆ.

‘ನಾವು ಹುಟ್ಟು ಅಂಧರಾದರೂ ಬೇಡಿ ತಿನ್ನುವವರಲ್ಲ. ದೇವರು ಕೊಟ್ಟಿರುವ ಕಲೆಯ ಸಹಾಯದಿಂದ ಹಾಡಿ ತಿನ್ನುವವರು. ಲಾಕ್‌ಡೌನ್‌ಗಿಂತ ಮೊದಲು ನಾವು ಎಂದೂ ಮನೆಯಲ್ಲಿ ಕುಳಿತವರಲ್ಲ. ಕಾರ್ಯಕ್ರಮಗಳು ಇಲ್ಲದಿದ್ದಾಗ ರಸ್ತೆ, ಬಸ್‌ನಿಲ್ದಾಣ, ರೈಲು ನಿಲ್ದಾಣದಲ್ಲೇ ಹಾಡಿ ಕೇಳುಗರಲ್ಲಿ ಆನಂದ ಸೃಷ್ಟಿಸಿ ಅವರು ಕೊಟ್ಟಷ್ಟು ಹಣ ಪಡೆಯುತ್ತಿದ್ದೆವು. ಈಗ ಕೊರೊನಾದಿಂದಾಗಿ ಎಲ್ಲವೂ ಸ್ಥಗಿತಗೊಂಡಿದೆ’ ಎಂದು ಕಲಾವಿದ ಸುರೇಶ್‌ ಬೇಸರ ವ್ಯಕ್ತಪಡಿಸಿದರು. ಸುರೇಶ್‌ ಅವರನ್ನು ಸಂಪರ್ಕಿಸಲು 9036227520 ಸಂಖ್ಯೆಗೆ ಕರೆ ಮಾಡಬಹುದು.

ಮಾಸಾಶನವೂ ಬರುತ್ತಿಲ್ಲ

ಅಂಧತ್ವದ ಜೊತೆ ಅಂಗವೈಕಲ್ಯವೂ ಇವರನ್ನು ಕಾಡುತ್ತಿದೆ. ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಇವರಿಗೆ ಸಹಾಯಧನ ಬರುತ್ತದೆ. ಆದರೆ ಕಳೆದೆರಡು ತಿಂಗಳಿಂದ ಲಾಕ್‌ಡೌನ್‌ ಇದ್ದು, ಇವರಿಗೆ ಹಣ ಬಂದಿಲ್ಲ. ಜೊತೆಗೆ ಬೆಂಗಳೂರಿಗೆ ತೆರಳಲು ಸಾಧ್ಯವಾಗದ ಕಾರಣ ಸಹಾಯಧನ ಪಡೆಯಲೂ ಸಾಧ್ಯವಾಗಿಲ್ಲ.

‘ಕೊರೊನಾ ಸೋಂಕಿನ ಪರಿಸ್ಥಿತಿಯಲ್ಲಿ ಮುಂದಿನ ಗಣೇಶ ಹಬ್ಬದವರೆಗೂ ಸಂಗೀತ ಕಾರ್ಯಕ್ರಮಗಳು ಬರುವ ನಿರೀಕ್ಷೆ ಇಲ್ಲದಾಗಿದೆ. ತಾಲ್ಲೂಕು ಆಡಳಿತ ನಮ್ಮ ಸಹಾಯಧನ ಕೊಡಿಸಲು ಪ್ರಯತ್ನಿಸಬೇಕು’ ಎಂದು ಕಲಾವಿದರು ಒತ್ತಾಯಿಸಿದರು.

ಕಲಾವಿದರಿಗೆ ಸಹಾಯ ಮಾಡಲಾಗುವುದು: ತಹಶೀಲ್ದಾರ್

ಕಲಾವಿದರನ್ನು ಗುರುತಿಸಿ ಅವರಿಗೆ ಸಹಾಯ ಮಾಡಲಾಗುವುದು. ಲಾಕ್‌ಡೌನ್‌ ಇರುವವರೆಗೂ ಅವರಿಗೆ ಅಗತ್ಯ ಆಹಾರ ಸಾಮಗ್ರಿ ಸರಬರಾಜು ಮಾಡಲಾಗುವುದು ಎಂದು ಕೆ.ಆರ್‌.ಪೇಟೆ ತಹಶೀಲ್ದಾರ್ ‌ಎಂ.ಶಿವಮೂರ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.