ADVERTISEMENT

ಖಾದಿ, ಖಾದಿ, ಖಾವಿಗೆ ಕಡಿಮೆಯಾಗುತ್ತಿರುವ ಮಹತ್ವ: ಎ.ಟಿ.ರಾಮಸ್ವಾಮಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 14:29 IST
Last Updated 2 ಜುಲೈ 2021, 14:29 IST
ಕನ್ನಡ ಸೇನೆ ಆಯೋಜಿಸಿದ್ದ  ಎಚ್‌.ಎಸ್‌.ದೊರೆಸ್ವಾಮಿ, ಸಾಹಿತಿ ಸಿದ್ದಲಿಂಗಯ್ಯ ಅವರನ್ನು ಕುರಿತ ವಿಚಾರ ಸಂಕಿರಣದಲ್ಲಿ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿದರು
ಕನ್ನಡ ಸೇನೆ ಆಯೋಜಿಸಿದ್ದ  ಎಚ್‌.ಎಸ್‌.ದೊರೆಸ್ವಾಮಿ, ಸಾಹಿತಿ ಸಿದ್ದಲಿಂಗಯ್ಯ ಅವರನ್ನು ಕುರಿತ ವಿಚಾರ ಸಂಕಿರಣದಲ್ಲಿ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿದರು   

ಮಂಡ್ಯ: ‘ಪ್ರಸ್ತುತ ದಿನಗಳಲ್ಲಿ ಖಾದಿ, ಖಾಕಿ, ಖಾವಿಗೆ ಮಹತ್ವ ಕಡಿಮೆಯಾಗುತ್ತಿದೆ. ಖಾದಿ ಬಟ್ಟೆ ಹಾಕಿದರೆ ಪುಡಾರಿ ಎನ್ನುವ ವಾತಾವರಣ ನಿರ್ಮಾಣವಾಗಿದೆ. ಎಲ್ಲಾ ನಾಟಕೀಯ ಎಂಬ ಭಾವನೆ ಮೂಡಿಸುತ್ತಿದೆ’ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.

ಕನ್ನಡ ಸೇನೆ–ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ನಗರದ ರಕ್ತನಿಧಿ ಕೇಂದ್ರದಲ್ಲಿ ಶುಕ್ರವಾರ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಸಾಹಿತಿ ಸಿದ್ದಲಿಂಗಯ್ಯ ಅವರ ಒಂದು ನೆನಪಿನ ವಿಚಾರ ಸಂಕಿರಣ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಸಮಾಜ ಖಾದಿ-ಖಾವಿ-ಖಾಕಿ ಹಿಂದೆ ಬೀಳುತ್ತಿದೆ. ಇದರಿಂದ ಹೇಗೆ ಸಮಾಜ ಕಟ್ಟಲು ಸಾಧ್ಯ, ನಿಸ್ವಾರ್ಥಸೇವೆ ಮಾಡುವ, ಹೋರಾಟ ಮಾಡುವವರ ಮೇಲೆ ಅಪನಂಬಿಕೆಗಳನ್ನು ಬಿತ್ತುತ್ತಿದ್ದಾರೆ. ವಿವೇಚನಾ ಲಹರಿಯನ್ನು ಸಮಾಜ ಕಳೆದುಕೊಳ್ಳುತ್ತಿದೆ. ಅಮಿಷವೆಂಬ ವಿಷ ಉಣಿಸಿ, ಸಾಮಾಜಿಕ ವ್ಯವಸ್ಥೆಯೇ ಬುಡಮೇಲಾಗುತ್ತಿದೆ. ಆ ವಿಷ ಕೀಳದಿದ್ದರೆ ಸಮಾಜದ ವ್ಯವಸ್ಥೆ ಸರಿಪಡಿಸಲಾಗುವುದಿಲ್ಲ’ ಎಂದರು.

ADVERTISEMENT

‘ನಿಸ್ವಾರ್ಥಸೇವೆ-ಹೋರಾಟಗಳು ಕಣ್ಮರೆಯಾಗುತ್ತಿವೆ, ಸಾಮಾಜಿಕ ವ್ಯವಸ್ಥೆಯಲ್ಲಿ ಬಿತ್ತಿರುವ ವಿಷವನ್ನು ಹೋರಾಟಗಾರರು ಸಮಾಜ ಸುಧಾರಕರು ಕೀಳಬೇಕಿದೆ, ಸಮಾಜವನ್ನು ಹಾಳುಮಾಡುವ ವ್ಯವಸ್ಥೆ ವಿರುದ್ಧ ಯುವ ಸಮುದಾಯ ಪ್ರತಿರೋಧಿ ಒಡ್ಡದಿದ್ದರೆ ಸಂಸ್ಕೃತಿ-ಸಂಸ್ಕಾರ ಧೂಳಿಪಟವಾಗುತ್ತದೆ’ ಎಂದರು.

‘ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ ಸಿದ್ದಲಿಂಗಯ್ಯ ಅವರು ಪ್ರಾಮಾಣಿಕವಾಗಿ ಬದ್ಧತೆಯನ್ನು ತೋರಿಸಿಕೊಟ್ಟವರು. ಸಿದ್ದಲಿಂಗಯ್ಯ ಅವರ ಬರವಣಿಗೆ ತೀವ್ರವಾಗಿತ್ತು. ದಲಿತರು, ಶೋಷಿತರ ಬಡವರ ಧ್ವನಿಯಾಗಿದ್ದರು. ಲೇಖಕರಾಗಿ ಜಾಗೃತಿ ಮೂಡಿಸುತ್ತಿದ್ದರು. ಅವರು ಮಹಾನ್‌ ವ್ಯಕ್ತಿ ಸಾಹಿತಿಯಾಗಿದ್ದರು. ದೊರೆಸ್ವಾಮಿ ಅವರ ಬಗ್ಗೆ ಮಾತುಗಳಲ್ಲಿ ವರ್ಣನೆ ಮಾಡಲಾಗುವುದಿಲ್ಲ’ ಎಂದರು.

‘ಎಚ್‌.ಎಸ್‌.ದೊರೆಸ್ವಾಮಿ ಅವರ ಹೋರಾಟ ಹಂಬಲ-ಆಶಯಗಳು ಈಡೇರಬೇಕು. ಯುವ ಜನತೆ ಜಾಗೃತರಾಗಿ ಪ್ರಗತಿಯತ್ತ ಮುನ್ನಗ್ಗಬೇಕು. ಸಾಹಿತಿ ಸಿದ್ದಲಿಂಗಯ್ಯ ಅವರ ಸಾಹಿತ್ಯ ಲೋಕಮಾನ್ಯರಿಗೆ ತಿಳಿಯಬೇಕು. ನಾಡುಕಟ್ಟುವ ಅವರ ಚಿಂತನೆಗಳು ಸಕಾರಗೊಳ್ಳಲು ಎಲ್ಲರೂ ಮುಂದಾಗಬೇಕು. ಹೋರಾಟಗಳಿಂದ ಮಾತ್ರ ಅನಿಷ್ಟ ಪದ್ದತಿಗಳನ್ನು ನಿಯಂತ್ರಿಸಲು ಸಾಧ್ಯ, ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ, ಯುವಜನತೆ ಸನ್ನದ್ದರಾಗಬೇಕು, ಸೇವಾಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

ಜಿಲ್ಲಾ ಘಟಕದ 50 ಪದಾಧಿಕಾರಿಗಳು ಮತ್ತು ಪೋಷಕರು ರಕ್ತದಾನ ಮಾಡಿ ಪ್ರಮಾಣ ಪತ್ರ ಪಡೆದುಕೊಂಡರು.

ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್.ಕುಮಾರ್, ಉಪಾಧ್ಯಕ್ಷ ಮುನಿರಾಜುಗೌಡ, ಪ್ರಧಾನಕಾರ್ಯದರ್ಶಿ ಮುನೇಗೌಡ, ಕಾರ್ಯಾಧಕ್ಷ ಮುನಿಕೃಷ್ಣ, ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಸಾಹಿತಿ ಪ್ರೊ.ಹುಲ್ಲುಕೆರೆ ಮಹದೇವ್, ನಗರ ಸಭೆ ಸದಸ್ಯೆ ಸೌಭಾಗ್ಯ, ಮಂಜುನಾಥ್, ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.