ADVERTISEMENT

ಹುತಾತ್ಮ ಯೋಧ ಎಂ.ಬಿ. ಮಾದೇಗೌಡ ಅವರಿಗೆ ಸಕಲ ಸರ್ಕಾರಿ ಗೌರವ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 8:38 IST
Last Updated 14 ಜನವರಿ 2026, 8:38 IST
   

ಮಂಡ್ಯ: ಗಡಿ ಭದ್ರತಾ ಪಡೆ (ಬಿ.ಎಸ್.ಎಫ್) ಯೋಧರಾದ ನಗರದ ತಾವರೆಗೆರೆ ಬಡಾವಣೆ ನಿವಾಸಿ ಎಂ.ಬಿ. ಮಾದೇಗೌಡ (44) ಅವರು ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಪಾರ್ಥಿವ ಶರೀರ ಬುಧವಾರ ಬೆಳಿಗ್ಗೆ ಮಂಡ್ಯ ನಗರಕ್ಕೆ ಆಗಮಿಸಿದ ಸಂದರ್ಭ ಜಿಲ್ಲಾಡಳಿತದಿಂದ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. 

ಮಹಾರಾಷ್ಟ್ರ ರಾಜ್ಯದ ಚಾಕೂರ್‌ ಜಿಲ್ಲೆಯ ಲಾಥೋರ್‌ ಬಿ.ಎಸ್‌.ಎಫ್‌ ತರಬೇತಿ ಕೇಂದ್ರದಿಂದ ಮಂಡ್ಯ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್‌) ಮೈದಾನಕ್ಕೆ ಬುಧವಾರ ಬೆಳಿಗ್ಗೆ ಪಾರ್ಥಿವ ಶರೀರವನ್ನು ತರಲಾಯಿತು. ಪೊಲೀಸ್‌ ಪಡೆಯಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಹುತಾತ್ಮ ಯೋಧನಿಗೆ ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶೋಭಾರಾಣಿ, ಶಾಸಕ ಪಿ.ರವಿಕುಮಾರ್‌ ಅವರು ಪುಷ್ಪಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದರು. 

ಮೃತರ ಪತ್ನಿ ಎಸ್.ಶಿಲ್ಪಾ, ಪುತ್ರ, ಪುತ್ರಿ ಹಾಗೂ ಕುಟುಂಬಸ್ಥರು ಯೋಧನನ್ನು ನೆನೆದು ಕಣ್ಣೀರು ಹಾಕಿದರು. ‘ಬಿಎಸ್‌ಎಫ್‌ನವರು ಮಹಾರಾಷ್ಟ್ರದಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಸೇನೆಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ’ ಎಂದು ಮೃತರ ಪತ್ನಿ ಶಿಲ್ಪಾ ಹೇಳಿದರು. ಶಾಸಕ ಮತ್ತು ಜಿಲ್ಲಾಧಿಕಾರಿಯವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ADVERTISEMENT

ನಂತರ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಪೊಲೀಸ್‌ ಮೈದಾನದಿಂದ ವಾಹನದ ಮೂಲಕ ಮೆರವಣಿಗೆ ನಡೆಸಿ, ಯತ್ತಗದಹಳ್ಳಿ ಸ್ಮಶಾನದ ಅಂತ್ಯಕ್ರಿಯೆ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಸಾರ್ವಜನಿಕರಿಂದ ಅಂತಿಮ ದರ್ಶನ ಮುಗಿದ ನಂತರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.