ADVERTISEMENT

ಮೈಷುಗರ್‌ಗೆ ಕಹಿ, ಮಿಮ್ಸ್‌ಗೆ ಸಿಹಿ!

ರೈತ ಮುಖಂಡರ ಅಸಮಾಧಾನ, ಮಂಡ್ಯ ಅಭಿವೃದ್ಧಿಗೆ ₹ 50 ಕೋಟಿ ವಿಶೇಷ ಪ್ಯಾಕೇಜ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 14:09 IST
Last Updated 5 ಜುಲೈ 2018, 14:09 IST
ಮೈಷುಗರ್‌ ಕಾರ್ಖಾನೆಯ ಹೊರನೋಟ
ಮೈಷುಗರ್‌ ಕಾರ್ಖಾನೆಯ ಹೊರನೋಟ   

ಮಂಡ್ಯ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ನಗರದ ಐತಿಹಾಸಿಕ ಮೈಷುಗರ್‌ ಕಾರ್ಖಾನೆ ಪುನಶ್ಚೇತನದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಮಿಮ್ಸ್‌ ಆಸ್ಪತ್ರೆ ಮೇಲ್ದರ್ಜೆಗೇರಿಸಲು ₹ 30 ಕೋಟಿ ಹಣ ಮೀಸಲಿಟ್ಟಿರುವುದು ಸಮಾಧಾನ ತಂದಿದೆ.

ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಜಯಗಳಿಸಿರುವ ಕಾರಣ ಜಿಲ್ಲೆಗೆ ಹೆಚ್ಚು ಮಹತ್ವ ಸಿಗಬಹುದು ಎಂದು ಜನರು ನಿರೀಕ್ಷೆ ಮಾಡಿದ್ದರು. ಎಲ್ಲಾ ಕ್ಷೇತ್ರಗಳ ಜೆಡಿಎಸ್‌ ಶಾಸಕರು, ಮುಖ್ಯಮಂತ್ರಿಗಳು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಾರೆ ಎಂದೇ ಹೇಳಿಕೊಂಡಿದ್ದರು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ನಂತರ ಮೈಷುರಗ್‌ ಕಾರ್ಖಾನೆಗೆ ಭೇಟಿ ನೀಡಿ ಕಾರ್ಖಾನೆ ಪುನಶ್ಚೇತನದ ಬಗ್ಗೆ ಮಾತನಾಡಿದ್ದರು. ಮಂಡ್ಯ ಕ್ಷೇತ್ರ ಶಾಸಕ ಎಂ.ಶ್ರೀನಿವಾಸ್‌, ಮೂರು ತಿಂಗಳೊಳಗೆ ಮೈಷುಗರ್‌ ಕಾರ್ಯಾರಂಭ ಮಾಡಲಿದೆ, ಆರಂಭಿಕವಾಗಿ ಮುಖ್ಯಮಂತ್ರಿಗಳು ₹ 30 ಕೋಟಿ ಬಿಡುಗಡೆ ಮಾಡುತ್ತಾರೆ ಎಂದು ಹೇಳಿದ್ದರು. ಆದರೆ ಬಜೆಟ್‌ನಲ್ಲಿ ಕಾರ್ಖಾನೆ ಬಗ್ಗೆ ಒಂದು ಮಾತೂ ಆಡದಿರುವುದು ರೈತ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

ಮಿಮ್ಸ್‌ ಆಸ್ಪತ್ರೆಯನ್ನು 800 ಹಾಸಿಗೆ ಸಾಮರ್ಥ್ಯಕ್ಕೇರಿಸಲು ₹ 30 ಕೋಟಿ ನಿಗದಿ ಮಾಡಿರುವುದು ಜಿಲ್ಲೆಯ ಪಾಲಿಗೆ ಸಮಾಧಾನಕರ ವಿಚಾರವಾಗಿದೆ. ಜಿಲ್ಲೆಗೆ ದೊಡ್ಡಾಸ್ಪತ್ರೆಯಾಗಿರುವ ಮಿಮ್ಸ್‌ ಹಲವು ಮೂಲಭೂತ ಸಮಸ್ಯೆ ಎದುರಿಸುತ್ತಿದೆ. ನಾಲ್ಕು ಜಿಲ್ಲೆಯ ರೋಗಿಗಳು ಇಲ್ಲಿಗೆ ಬರುವ ಕಾರಣ ಸಮರ್ಪಕ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುವ ಸ್ಥಿತಿ ಇತ್ತು.

ADVERTISEMENT

ಗಗನ ಚುಕ್ಕಿ, ಭರಚುಕ್ಕಿ: ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿ ಹಾಗೂ ಮೈಸೂರು ಜಿಲ್ಲೆಯ ಭರಚುಕ್ಕಿ ಜಲಪಾತಗಳ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ₹ 5 ಕೋಟಿ ಹಣ ಮೀಸಲಿಡಲಾಗಿದೆ. ವಿಶ್ವಪ್ರಸಿದ್ಧ ಗಗನಚುಕ್ಕಿ ಜಲಪಾತ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು ಕಾಯಕಲ್ಪ ನೀಡುವ ಬೇಡಿಕೆ ಬಹುಕಾಲದಿಂದ ಇತ್ತು. 2008ರಿಂದಲೂ ಜಲಪಾತ ವೀಕ್ಷಣೆಗೆ ಕೇಬಲ್‌ ಕಾರ್‌ ಅಳವಡಿಕೆಯ ಕುರಿತು ಚಿಂತಸಲಾಗಿತ್ತು. ಆದರೆ ಯೋಜನೆ ಕಾರ್ಯಗತಗೊಂಡಿರಲಿಲ್ಲ. ಈಗ ಮುಖ್ಯಮಂತ್ರಿಗಳು ನಿಗದಿ ಮಾಡಿರುವ ಹಣ ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ನಡುವೆ ಹಂಚಿಕೆಯಾಗಲಿದೆ.

ಡಿಸ್ನಿ ಲ್ಯಾಂಡ್‌ ಮಾದರಿಯಲ್ಲಿ ಕೆಆರ್‌ಎಸ್‌: ಕೆಆರ್‌ಎಸ್‌ ಜಲಾಶಯವನ್ನು ಡಿಸ್ನಿ ಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲು ಮುಖ್ಯಮಂತ್ರಿಗಳು ₹ 5 ಕೋಟಿ ಅನುದಾನ ಮೀಸಲಿಟ್ಟಿದ್ದಾರೆ. ಇದರಿಂದ ವಿಶ್ವಪ್ರಸಿದ್ಧ ಬೃಂದಾವನ ಹೊಸರೂಪ ಪಡೆಯಲಿದೆ. ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿ ಹಾಗೂ ಇತರ ಕೆರೆಗಳಿಗೆ ಕೆಆರ್‌ಎಸ್‌ ನೀರು ಪೂರೈಸಲು ₹ 30 ಕೋಟಿ ಮೀಸಲಿಟ್ಟಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಹಣ ಬಿಡುಗಡೆಯಾಗಿದೆ ಎನ್ನಲಾಗಿತ್ತು. ಆದರೆ ಕಡೆ ಕ್ಷಣದಲ್ಲಿ ಯೋಜನೆ ಸ್ಥಗಿತಗೊಂಡಿತ್ತು. ಈಗ ಯೋಜನೆ ಜಾರಿಗೆ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ, ಚಿಕ್ಕಅಂಕನಹಳ್ಳಿ, ಕೆ.ಶೆಟ್ಟಿಹಳ್ಳಿ ಸೇರಿ 16 ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆಗೆ ₹ 24 ಕೋಟಿ ಹಣ ಮೀಸಲಿಡಲಾಗಿದೆ. ಗಾಮನಹಳ್ಳಿ ಹಾಗೂ ಇತರ 13 ಗ್ರಾಮಗಳ ಕುಡಿಯುವ ನೀರಿನ ಯೋಜನೆ ಜಾರಿಗೆ ₹ 18.90 ಕೋಟಿ ನಿಗದಿ ಮಾಡಲಾಗಿದೆ. ಜೊತೆಗೆ ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ₹ 50 ಕೋಟಿ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ.

ಜಿಲ್ಲೆಗೆ ಸಿಕ್ಕಿದ್ದೇನು (ಕೋಟಿಗಳಲ್ಲಿ)
ಮಂಡ್ಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ₹ 50
ಮಿಮ್ಸ್‌ ಆಸ್ಪತ್ರೆ ಮೇಲ್ದರ್ಜೆಗೇರಿಸಲು ₹ 30
ದುದ್ದ ವ್ಯಾಪ್ತಿಯ ಕೆರೆ, ಕುಡಿಯುವ ನೀರಿಗೆ ₹ 30
ಮಹದೇವಪುರ ಸೇರಿ 16 ಗ್ರಾಮಗಳ ಕುಡಿಯುವ ನೀರು ₹ 24
ಗಾಮನಹಳ್ಳಿ ಸೇರಿ 13 ಗ್ರಾಮಗಳ ಕುಡಿಯುವ ನೀರಿಗೆ ₹ 18.90
ಡಿಸ್ನಿ ಮಾದರಿಯಲ್ಲಿ ಕೆಆರ್‌ಎಸ್‌ ಅಭಿವೃದ್ಧಿಗೆ ₹ 5
ಗಗನಚುಕ್ಕಿ ಭರಚುಕ್ಕಿ ಅಭಿವೃದ್ಧಿಗೆ ₹ 5
ಮಂಡ್ಯ ಜಿಲ್ಲೆಗೆ ಸಿಕ್ಕದ್ದು ಒಟ್ಟು: ₹ 162.9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.