ADVERTISEMENT

ಪಾಂಡವಪುರ: ಕ್ಯಾನ್ಸರ್ ಅರಿವಿಗಾಗಿ ಓಟದಲ್ಲಿ ಭಾಗಿಯಾದ ಶಾಸಕ ದರ್ಶನ್ ಪುಟ್ಟಣ್ಣಯ್ಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 3:16 IST
Last Updated 9 ಫೆಬ್ರುವರಿ 2026, 3:16 IST
ಪಾಂಡವಪುರ ತಾಲ್ಲೂಕಿನ ಜಯಂತಿ ನಗರದ ಶ್ರೀ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ತೆಯ ಆಯೋಜಿಸಿದ್ದ ‘ಕ್ಯಾನ್ಸರ್ ಅರಿವಿಗಾಗಿ–ಮ್ಯಾರಥಾನ ಓಟ’ದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಓಡಿ ಗಮನ ಸೆಳೆದರು
ಪಾಂಡವಪುರ ತಾಲ್ಲೂಕಿನ ಜಯಂತಿ ನಗರದ ಶ್ರೀ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ತೆಯ ಆಯೋಜಿಸಿದ್ದ ‘ಕ್ಯಾನ್ಸರ್ ಅರಿವಿಗಾಗಿ–ಮ್ಯಾರಥಾನ ಓಟ’ದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಓಡಿ ಗಮನ ಸೆಳೆದರು   

ಪಾಂಡವಪುರ: ಶ್ರೀ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ಭಾನುವಾರ ಪಟ್ಟಣದಲ್ಲಿ ಆಯೋಜಿಸಿದ್ದ ‘ಕ್ಯಾನ್ಸರ್ ಅರಿವಿಗಾಗಿ– ಮ್ಯಾರಥಾನ್ ಓಟ’ದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಓಡಿ ಗಮನ ಸೆಳೆದರು. ಪಟ್ಟಣದ ಐದು ದೀಪ ವೃತ್ತದಿಂದ ಮುಂಜಾನೆ 6 ಗಂಟೆಗೆ ಪ್ರಾರಂಭವಾದ ಮ್ಯಾರಥಾನ್ ಓಟಕ್ಕೆ ಅವರು ಚಾಲನೆ ನೀಡಿ, ತಾವು ಓಡಿದರು.

ಓಟವು ಮೈಸೂರು ಮುಖ್ಯ ರಸ್ತೆ, ಹರಳಹಳ್ಳಿ, ಕೆನ್ನಾಳು ಗೇಟ್, ರೈಲ್ವೆ ನಿಲ್ದಾಣ, ಕೆ.ಆರ್.ಪೇಟೆ ರಸ್ತೆಯ ಮೂಲಕ ಜಯಂತಿ ನಗರದ ಶ್ರೀ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ತನಕ ಸಾಗಿ ಮುಕ್ತಾಯಗೊಂಡಿತು. ಮ್ಯಾರಥಾನ್ ಓಟದಲ್ಲಿ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು, ಯುವಕ–ಯುವತಿಯರು, ರಾಜಕಾರಣಿಗಳು, ಅಧಿಕಾರಿಗಳು ಭಾಗವಹಿಸಿದ್ದರು. ಟಿಎಚ್‌ಓ ಡಾ.ಸಿ.ಎ.ಅರವಿಂದ್, ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಉಮೇಶ್, ರೈತ ಸಂಘದ ರಾಘವ ಪ್ರಕಾಶ್ ಸೇರಿ ಹಲವರು ಭಾಗವಹಿಸಿದ್ದರು.

ಓಟದ ಸ್ಪರ್ಧೆಯಲ್ಲಿ 14 ವರ್ಷದೊಳಗಿನ ಬಾಲಕ–ಬಾಲಕಿಯರಿಗೆ 2 ಕಿ.ಮೀ., 18 ವರ್ಷದೊಳಗಿನ ಬಾಲಕ–ಬಾಲಕಿಯರಿಗೆ 6 ಕಿ.ಮೀ. 30 ವರ್ಷದೊಳಗಿನ ಪುರುಷ–ಮಹಿಳೆಯರಿಗೆ 10 ಕಿ.ಮೀ. ಹಾಗೂ 30 ವರ್ಷ ಮೇಲ್ಪಟ್ಟ ಪುರುಷ–ಮಹಿಳೆಯರಿಗೆ 6 ಕಿ.ಮೀ. ಓಟ ಏರ್ಪಡಿಸಲಾಗಿತ್ತು. ಭಾಗವಹಿಸಿದ್ದ ನಾಲ್ಕು ವಿಭಾಗದ ಓಟಗಾರ, ಓಟಗಾರ್ತಿಯರಿಗೆ ನಗದು ಬಹುಮಾನ ನೀಡಲಾಯಿತು.

ADVERTISEMENT

ಜಾಗೃತರಾಗಿರಿ: ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯ ಡಾ.ಚೇತನ್ ಮಾತನಾಡಿ, ಕ್ಯಾನ್ಸರ್ ಬಂದ ವ್ಯಕ್ತಿಗಳಿಗೆ ಅದು ಎರಡು–ಮೂರು ಹಂತಕ್ಕೆ ಬರುವವರೆಗೂ ಅದರ ಗುಣಲಕ್ಷಣಗಳು ಕಾಣುವುದಿಲ್ಲ. ಹಾಗಾಗಿ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜಂಕ್‌ಫುಡ್‌ನಿಂದ ದೂರವಿದ್ದು ಉತ್ತಮ ಆಹಾರ ಸೇವನೆ ಮಾಡಬೇಕು. ತಂಬಾಕು ಸೇವನೆಯಿಂದ ದೂರವಿರಬೇಕು ಎಂದು ತಿಳಿಸಿದರು.

ಪದ್ಮಶ್ರೀ ಪುರಸ್ಕೃತ ಎಂ.ಅಂಕೇಗೌಡ ಅವರನ್ನು ಸನ್ಮಾನಿಸಲಾಯಿತು. ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ.ಹೊನ್ನರಾಜು, ಮ್ಯಾನೇಜಿಂಗ್ ಟ್ರಸ್ಟಿ ಪಂಚಲಿಂಗೇಗೌಡ, ಕಾರ್ಯದರ್ಶಿ ಪಿ.ಅಕ್ಷಯ್, ಎಸ್‌ಬಿಐ ರೀಜನಲ್ ಮ್ಯಾನೇಜರ್ ವೀರಭದ್ರೇಗೌಡ, ಕಾಂಗ್ರೆಸ್ ಮುಖಂಡ ಕೆ.ಕುಬೇರ ಇದ್ದರು.

ಪಾಂಡವಪುರ ಪಟ್ಟಣದ ಐದು ದೀಪ ವೃತ್ತದಲ್ಲಿ ‘ಕ್ಯಾನ್ಸರ್ ಅರಿವಿಗಾಗಿ–ಮ್ಯಾರಥಾನ್’ ಓಟಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದರು. ಪದ್ಮಶ್ರೀ ಪುರಸ್ಕೃತ ಎಂ.ಅಂಕೇಗೌಡ ಟಿಎಚ್ಒ ಡಾ.ಸಿ.ಎ.ಅರವಿಂದ್ ಪಂಚಲಿಂಗೇಗೌಡ ಪಿಎಸ್‌ಐ ಉಮೇಶ್ ಇದ್ದಾರೆ

ಪತ್ನಿಗೂ ಕ್ಯಾನ್ಸರ್

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ ಜೀವನಕ್ಕೆ ಮಾರಕವಾಗಿರುವ ಕ್ಯಾನ್ಸರ್ ರೋಗದ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಕ್ಯಾನ್ಸರ್ ಕಾಯಿಲೆ ಬರೋದು ಯಾರಿಗೂ ಗೊತ್ತಾಗುವುದೇ ಇಲ್ಲ. ಆರಂಭದಲ್ಲಿ ಅದರ ಗುಣಲಕ್ಷಣಗಳೇ ತಿಳಿಯುವುದಿಲ್ಲ. ನನ್ನ ಪತ್ನಿಗೆ ಕ್ಯಾನ್ಸರ್ ಬಂದಿರುವ ಕಾರಣ ಅದರ ಅನುಭವ ನನಗಿದೆ. ಪ್ರತಿಯೊಬ್ಬರು ಪರೀಕ್ಷೆ ಮಾಡಿಸಿಕೊಂಡು ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಮುಕ್ತರಾಗಬೇಕು. ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯು ಓಟದ ಸ್ಪರ್ಧೆ ಹಾಗೂ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸುತ್ತಿರುವುದು ಪ್ರಶಂಸನೀಯ  ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.