ಚಲುವರಾಯಸ್ವಾಮಿ, ಸಚಿವ
ಮಂಡ್ಯ: ‘ಕೆ.ಆರ್.ಎಸ್ ಅಣೆಕಟ್ಟೆ ಬಳಿ ಕೈಗೊಳ್ಳಲಿರುವ ಅಮ್ಯೂಸ್‌ಮೆಂಟ್ ಪಾರ್ಕ್ ಮತ್ತು ಕಾವೇರಿ ಆರತಿ ಯೋಜನೆಗಳಿಗೆ ಏಕೆ ವಿರೋಧ ವ್ಯಕ್ತವಾಗುತ್ತಿದೆ ಎಂಬುದು ಗೊತ್ತಿಲ್ಲ. ಚರ್ಚೆಗೆ ನಾವು ಸಿದ್ಧರಿದ್ದು, ಸಮಸ್ಯೆಯನ್ನು ನಮಗೆ ಮನದಟ್ಟು ಮಾಡಿಕೊಡಲಿ. ನಿಜವಾಗಿಯೂ ಸಮಸ್ಯೆ ಇದ್ದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿ, ಯೋಜನೆ ನಿಲ್ಲಿಸುವ ತೀರ್ಮಾನ ಮಾಡೋಣ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಬುಧವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಈ ಯೋಜನೆಗಳಿಂದ ಆರ್ಥಿಕತೆ ವೃದ್ಧಿ, ಉದ್ಯೋಗ ಸೃಷ್ಟಿ ಆಗುತ್ತದೆ ಎಂಬುದನ್ನು ರೈತಸಂಘದವರು ಅರ್ಥ ಮಾಡಿಕೊಳ್ಳಲಿ. ಅವರಿಗೆ ಪ್ರತಿಭಟನೆ ನಡೆಸುವ ಹಕ್ಕು ಇದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ರೈತರ ಪರವಾಗಿ ಬಂದು ಚರ್ಚೆ ಮಾಡಲಿ ಎಂದರು.
ಗೃಹಸಚಿವ ಡಾ.ಜಿ.ಪರಮೇಶ್ವರ್ ಶಿಕ್ಷಣ ಸಂಸ್ಥೆಯ ಮೇಲೆ ಇ.ಡಿ ದಾಳಿಗೆ ಪ್ರತಿಕ್ರಿಯಿಸಿ, ‘ಇ.ಡಿ., ಐಟಿ ಇರೋದೇ ರಾಜಕೀಯವಾಗಿ ಬೇರೆ ಪಕ್ಷ ಹಣಿಯಲು ಎಂಬಂತಾಗಿದೆ. ಈಗ ಬಿಜೆಪಿಯವರಿಗೆ ಇವುಗಳೇ ಪ್ರಮುಖ ಅಸ್ತ್ರ. ಪರಮೇಶ್ವರ್ ಅವರ ತಂದೆ ಕಾಲದಿಂದಲೂ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಎಲ್ಲದಕ್ಕೂ ಅವರೇ ಉತ್ತರ ಕೊಡುತ್ತಾರೆ ಎಂದರು.
ಬೆಂಗಳೂರಿನಲ್ಲಿ ಮಳೆ ಅವಾಂತರಕ್ಕೆ ಪ್ರತಿಕ್ರಿಯಿಸಿ, ‘ಬ್ರ್ಯಾಂಡ್ ಬೆಂಗಳೂರು ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಮತ್ತು ಆರ್.ಅಶೋಕ್ ಟೀಕಿಸುತ್ತಾರೆ. ಈ ಹಿಂದೆ ಅವರೇ ಅಧಿಕಾರದಲ್ಲಿದ್ದಾಗ ಬ್ರ್ಯಾಂಡ್ ಬೆಂಗಳೂರು ಮಾಡಿದ್ದರೆ ಈ ತೊಂದರೆಯೇ ಬರುತ್ತಿರಲಿಲ್ಲ. ಈಗ ಟೀಕೆ ಮಾಡುವವರು ಅಧಿಕಾರದಲ್ಲಿದ್ದಾಗ ನಿದ್ದೆ ಮಾಡ್ತಿದ್ರಾ? ಡಿ.ಕೆ.ಶಿವಕುಮಾರ್ ಈ ಯೋಜನೆಗೆ ಈಗ ಚಾಲನೆ ನೀಡಿದ್ದಾರೆ. ಬದಲಾವಣೆ ಕಾಣಬೇಕಾದರೆ, ಹತ್ತು ವರ್ಷವಾದರೂ ಬೇಕು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.