
ಮಂಡ್ಯ: ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಬ್ರಿಡ್ಜ್ ಬಳಿ ಪಟ್ಟಣದ ಒಳಚರಂಡಿಯ ಕೊಳಚೆ ನೀರು ಅನೇಕ ವರ್ಷಗಳಿಂದ ಮಿಶ್ರಣವಾಗುತ್ತಿರುವುದರಿಂದ ಕಾವೇರಿ ನದಿಯ ಒಡಲು ಮಲಿನಗೊಂಡಿದೆ. ಇದನ್ನು ತಡೆಗಟ್ಟುವಂತೆ ನಿರ್ದೇಶನ ನೀಡಿದ್ದರೂ, ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತರು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ಕೊಳಚೆ ನೀರನ್ನು ಸಂಸ್ಕರಿಸದೆ (ಎಸ್.ಟಿ.ಪಿ) ನೇರವಾಗಿ ಸುಮಾರು 200 ವರ್ಷಗಳಿಂದ ಕಾವೇರಿ ನದಿಗೆ ಬಿಡುತ್ತಿರುವುದರಿಂದ ಮಂಡ್ಯ, ಪಾಂಡವಪುರ ಮತ್ತು ಬೆಂಗಳೂರು ನಗರ ಪ್ರದೇಶಗಳಿಗೆ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಕೂಡ ಕಲುಷಿತಗೊಂಡಿರುವ ಆತಂಕ ಎದುರಾಗಿದೆ.
ಕೊಳಚೆ ನೀರು ತಡೆಗಟ್ಟಿ, ಸಮಸ್ಯೆ ಪರಿಹರಿಸಿರುವ ಬಗ್ಗೆ ಶ್ರೀರಂಗಪಟ್ಟಣ ಪುರಸಭೆ ಮುಖ್ಯಾಧಿಕಾರಿ ‘ಅಪೂರ್ಣ ವರದಿ’ ನೀಡಿರುವ ಬಗ್ಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಕಿಡಿಕಾರಿದ್ದಾರೆ. ನ.27ರಂದು ‘ಪ್ರತ್ಯೇಕ ವರದಿ’ ಸಲ್ಲಿಸಬೇಕು. ಇದರ ಮೇಲ್ವಿಚಾರಣೆ ಮತ್ತು ಶಾಶ್ವತ ಪರಿಹಾರವನ್ನು ಕಂಡುಹಿಡಿಯುವ ಕಾರ್ಯವನ್ನು ಜಿಲ್ಲಾಧಿಕಾರಿಗೆ ವಹಿಸಿದ್ದಾರೆ.
ಶ್ರೀರಂಗಪಟ್ಟಣ ಟೌನ್‌ನ ಕೊಳಚೆ ನೀರು ಪಟ್ಟಣದ ದಕ್ಷಿಣ ಭಾಗ ರಾಂಪಾಲ್ ರಸ್ತೆಯಿಂದ ಉತ್ತರ ಭಾಗವಾದ ಚಿಕ್ಕಹೊಳೆ (ವಾಟರ್ ಗೇಟ್) ಮೂಲಕ ಕೃಷಿ ತೋಟಗಳ ಪಕ್ಕದಲ್ಲಿ ಹರಿದು ಬಿದ್ಕೋಟೆಯಿಂದ ವೆಲ್ಲೆಸ್ಲಿ ಸೇತುವೆ ಬಳಿ ನದಿಗೆ ಸೇರುತ್ತಿದೆ. ಈ ಜಾಗದಲ್ಲಿ ಮಂಡ್ಯ ನಗರಕ್ಕೆ ಮತ್ತು ಪಾಂಡವಪುರಕ್ಕೆ ಕುಡಿಯುವ ನೀರನ್ನು ಲಿಫ್ಟ್ ಮಾಡುತ್ತಿದ್ದು, ಚರಂಡಿಯ ಕೊಳಚೆ ನೀರು ಸಂಸ್ಕರಣೆಯಾಗದೆ ಕುಡಿಯುವ ನೀರಿಗೆ ಬಳಕೆಯಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದರು.
ಸ್ವಯಂಪ್ರೇರಿತ ದೂರು: ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮಂಡ್ಯ ಜಿಲ್ಲೆಗೆ ಮೇ ತಿಂಗಳಲ್ಲಿ ಭೇಟಿ ನೀಡಿದ್ದ ಸಂದರ್ಭ, ನದಿಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದಿತ್ತು. ಕೂಡಲೇ ಸ್ವಯಂಪ್ರೇರಿತ ದೂರು (ಸುಮೋಟೊ) ದಾಖಲಿಸಿಕೊಂಡಿದ್ದರು. ಕಟ್ಟುನಿಟ್ಟಿನ ಕ್ರಮ ಕೈಗೊಂಡು, ವರದಿ ನೀಡಲು ಸೂಚಿಸಿದ್ದರು.
ಕೊಳಚೆ ನೀರನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ, ಪರಿಸರ ಅಧಿಕಾರಿ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಮತ್ತು ಸಹಾಯಕ ಎಂಜಿನಿಯರ್, ಪುರಾತತ್ವ ಸಂರಕ್ಷಣಾ ಎಂಜಿನಿಯರ್, ಶ್ರೀರಂಗಪಟ್ಟಣ ತಹಶೀಲ್ದಾರ್ ಅವರನ್ನು ಎದುರುದಾರರನ್ನಾಗಿ ಪರಿಗಣಿಸಿ, ‘ಸ್ವಯಂಪ್ರೇರಿತ ದೂರು’ ದಾಖಲಾಗಿತ್ತು.
ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಮಿಶ್ರಣ ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ದೂರು ದಾಖಲು
ಉಪವಿಭಾಗಾಧಿಕಾರಿ ಗೈರು
ಪಾಂಡವಪುರದ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರು ಸ್ಥಳಕ್ಕೆ ಭೇಟಿ ನೀಡಿ ನ್ಯೂನತೆ ಸರಿಪಡಿಸಿ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿದ್ದರೂ ಗೈರು ಹಾಜರಾಗಿದ್ದಾರೆ. ಆದ್ದರಿಂದ ಎಸಿ ಅವರನ್ನು ಪ್ರತಿವಾದಿಯನ್ನಾಗಿ ಮಾಡಿ ತೆಗೆದುಕೊಂಡ ಕ್ರಮಗಳ ಬಗ್ಗೆ ಅನುಪಾಲನಾ ವರದಿಯೊಂದಿಗೆ ಖುದ್ದಾಗಿ ಹಾಜರಾಗಲು ಉಪಲೋಕಾಯುಕ್ತರು ಆದೇಶಿಸಿದ್ದಾರೆ.
‘ಆರ್ದ್ರ ಬಾವಿ’ಗಳ ಮಾಹಿತಿ ನೀಡಿ
ಶ್ರೀರಂಗಪಟ್ಟಣ ಪುರಸಭಾ ವ್ಯಾಪ್ತಿಯಲ್ಲಿ ಐದು ಆರ್ದ್ರ ಬಾವಿಗಳ (ವೆಟ್ ವೆಲ್ಸ್) ನಿರ್ಮಾಣ ಮತ್ತು ಒಳಚರಂಡಿ ಸಂಸ್ಕರಣಾ ಘಟಕದ (ಎಸ್.ಟಿ.ಪಿ) ಸ್ಥಳ ಸಾಮರ್ಥ್ಯ ನಿರ್ಮಾಣ ಮತ್ತು ಕಾರ್ಯಾಚರಣೆಯ ವಿವರಗಳು ಸೇರಿದಂತೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಡಿಪಿಆರ್ ಮತ್ತು ಕೆಲಸ ಪೂರ್ಣಗೊಂಡ ಸ್ಥಿತಿಯೊಂದಿಗೆ ಹಾಜರುಪಡಿಸಲು ಮುಖ್ಯಾಧಿಕಾರಿಗೆ ಉಪಲೋಕಾಯುಕ್ತರು ನಿರ್ದೇಶಿಸಿದ್ದಾರೆ.
ಕಾಮಗಾರಿ ಪ್ರಗತಿಯಲ್ಲಿದೆ: ಮುಖ್ಯಾಧಿಕಾರಿ
‘ಶ್ರೀರಂಗಪಟ್ಟಣ ಜನವಸತಿ ಪ್ರದೇಶದಿಂದ ಮೂರು ಕಡೆ ಕಾವೇರಿ ನದಿಗೆ ಕೊಳಚೆ ನೀರು ಸೇರುತ್ತಿತ್ತು. ಅದನ್ನು ತಡೆಯಲು ವಾಟರ್ ಗೇಟ್ ಬಳಿ ಜಲ ಮಂಡಳಿ ವತಿಯಿಂದ ‘ತಡೆಗೋಡೆ’ ನಿರ್ಮಿಸಿ ಬಿದ್ಕೋಟೆಯಿಂದ ಗಣೇಶ ದೇವಾಲಯದ ಬಳಿಯ ವೆಟ್ ವೆಲ್ ಕಡೆಗೆ ಕೊಳಚೆ ನೀರು ತಿರುಗಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲಿಂದ ರಿವರ್ ವ್ಯಾಲಿ ಸಂಸ್ಥೆ ಬಳಿಯ ‘ಎಸ್‌ಟಿಪಿ’ ಪ್ಲಾಂಟ್ ಗೆ ಕೊಳಚೆ ನೀರು ಸಾಗಿಸಲಾಗುವುದು’ ಎಂದು ಶ್ರೀರಂಗಪಟ್ಟಣ ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.