ADVERTISEMENT

ಶ್ರೀರಂಗಪಟ್ಟಣ: ಚಾಮುಂಡೇಶ್ವರಿ ವರ್ಧಂತಿ, ದೇವಿಗೆ ಶಾಕಾಂಬರಿ ಅಲಂಕಾರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 14:16 IST
Last Updated 10 ಜುಲೈ 2023, 14:16 IST
ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ, ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ನಿಮಿತ್ತ ದೇವಾಲಯದ ಗರ್ಭಗುಡಿಯನ್ನು ಬಗೆ ಬಗೆಯ ತರಕಾರಿಗಳಿಂದ (ಶಾಕಾಂಬರಿ) ವಿಶೇಷ ಅಲಂಕಾರ ಮಾಡಲಾಗಿತ್ತು
ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ, ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ನಿಮಿತ್ತ ದೇವಾಲಯದ ಗರ್ಭಗುಡಿಯನ್ನು ಬಗೆ ಬಗೆಯ ತರಕಾರಿಗಳಿಂದ (ಶಾಕಾಂಬರಿ) ವಿಶೇಷ ಅಲಂಕಾರ ಮಾಡಲಾಗಿತ್ತು   

ಶ್ರೀರಂಗಪಟ್ಟಣ: ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ನಿಮಿತ್ತ ಪಟ್ಟಣದ ಚಾಮುಂಡೇಶ್ವರಿ ದೇವಾಲಯದಲ್ಲಿ ಸೋಮವಾರ ದೇವಿಗೆ ಶಾಕಾಂಬರಿ ಅಲಂಕಾರ ಮಾಡಿ ಪೂಜಿಸಲಾಯಿತು.

ದೇವಾಲಯದ ಗರ್ಭಗುಡಿಯನ್ನು ಕ್ಯಾರೆಟ್‌, ಮೂಲಂಗಿ, ಹಾಗಲಕಾಯಿ ಇತರ ತರಕಾರಿಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ದೇವಾಲಯದಲ್ಲಿ ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು. ದೇವಾಲಯದ ಪ್ರಧಾನ ಅರ್ಚಕ ಕೆ.ಎಸ್‌. ಲಕ್ಷ್ಮೀಶ್‌ ಶರ್ಮಾ ಮತ್ತು ವೈದಿಕರಾದ ರಘುರಾಮ ಶರ್ಮಾ ಅವರ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಅರ್ಚನೆ, ಸಪ್ತಶತಿ, ಸಹಸ್ರನಾಮ, ಖಡ್ಗಮಾಲಾ ಇತರ ವಿಧಿ, ವಿಧಾನಗಳು ಜರುಗಿದವು. ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಮಹಿಳೆಯರು ಬೆಲ್ಲ ಮತ್ತು ನಿಂಬೆಹಣ್ಣಿನ ಆರತಿ ಬೆಳಗಿದರು. ಪಟ್ಟಣ ಮಾತ್ರವಲ್ಲದೆ ಆಸುಪಾಸಿನ ಗ್ರಾಮಗಳ ಭಕ್ತರು ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ತಾಲ್ಲೂಕಿನ ಪಾಲಹಳ್ಳಿಯಲ್ಲಿ ಕಾವೇರಿ ತೀರದ ವಿಶೇಷಚೇತನರ ಟ್ರಸ್ಟ್ ಇತರ ಸಂಘ, ಸಂಸ್ಥೆಗಳಿಂದ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಭಕ್ತರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈಡುಗಾಯಿ ಸೇವೆ, ಕರ್ಪೂರದ ಸೇವೆಗಳು ನಡೆದವು. ನಂತರ ಪ್ರಸಾದ ವಿತರಣೆ ನಡೆಯಿತು.

ADVERTISEMENT

ತಾಲ್ಲೂಕಿನ ಚಂದಗಾಲು ಗ್ರಾಮದ ಚಾಮುಂಡೇಶ್ವರಿ ದೇವಾಲಯ, ಟಿ.ಎಂ. ಹೊಸೂರು ಗೇಟ್‌ ಬಳಿಯ ಮಹಾಕಾಳಿ ಮಂದಿರ, ಪಟ್ಟಣದ ಕಾಳಿಕಾಂಬಾ ಕಮಠೇಶ್ವರ ದೇವಾಲಯ, ಮಹಾಲಕ್ಷ್ಮಿ ದೇವಾಲಯ, ಗಂಜಾಂ ನಿಮಿಷಾಂಬಾ ದೇವಾಲಯಕ್ಕೂ ಹೆಚ್ಚಿನ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿಯಲ್ಲಿ ಕಾವೇರಿ ತೀರದ ವಿಶೇಷಚೇತನರ ಟ್ರಸ್ಟ್ ಇತರ ಸಂಘ ಸಂಸ್ಥೆಗಳಿಂದ ಸೋಮವಾರ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.