ADVERTISEMENT

ಮಂಡ್ಯ | ಆಷಾಢ ಮಾಸದ ಕಡೆಯ ಶುಕ್ರವಾರ: ಎಲ್ಲೆಡೆ ಚಾಮುಂಡೇಶ್ವರಿ ಆರಾಧನೆ

ವಿಶೇಷ ಅಲಂಕಾರ, ಹೋಮ– ಹವನ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 4:43 IST
Last Updated 19 ಜುಲೈ 2025, 4:43 IST
ಮಂಡ್ಯ ನಗರದ ಬನ್ನೂರು ರಸ್ತೆಯಲ್ಲಿನ ಚಾಮುಂಡೇಶ್ವರಿ ದೇವಾಲಯಕ್ಕೆ ನೂರಾರು ಭಕ್ತರು ತೆರಳಿ ವಿಶೇಷ ಪೂಜೆ ಸಲ್ಲಿಸಿದರು
ಮಂಡ್ಯ ನಗರದ ಬನ್ನೂರು ರಸ್ತೆಯಲ್ಲಿನ ಚಾಮುಂಡೇಶ್ವರಿ ದೇವಾಲಯಕ್ಕೆ ನೂರಾರು ಭಕ್ತರು ತೆರಳಿ ವಿಶೇಷ ಪೂಜೆ ಸಲ್ಲಿಸಿದರು   

ಮಂಡ್ಯ: ಆಷಾಢ ಮಾಸದ ಕಡೆಯ ಶುಕ್ರವಾರದ ಅಂಗವಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿರುವ ಚಾಮುಂಡೇಶ್ವರಿ ಮತ್ತು ಅಮ್ಮನವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ– ಹವನಗಳು ನಡೆದವು. 

ಚಾಮುಂಡೇಶ್ವರಿ ದೇವಿಯ ವರ್ಧಂತಿ ಅಂಗವಾಗಿ ಮಂಡ್ಯ ನಗರದ ವಿವಿಧೆಡೆ ಭಕ್ತರು ರಸ್ತೆ ಬದಿಯಲ್ಲೇ ಚಾಮುಂಡೇಶ್ವರಿ ದೇವಿಯ ಫೋಟೊಗಳನ್ನಿಟ್ಟು ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರವೇರಿಸಿದರು. ನಗರದ ವಿದ್ಯಾನಗರದ ಅನ್ನದಾತೆ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಆಷಾಢೋತ್ಸವ ಹಾಗೂ ಮಹಿಳೆಯರಿಂದ ವಿಶೇಷ ಕಾರ್ಯಕ್ರಮ ನಡೆಯಿತು.

ನಗರದ ಬನ್ನೂರು ರಸ್ತೆಯಲ್ಲಿನ ಚಾಮುಂಡೇಶ್ವರಿ ದೇವಾಲಯಕ್ಕೆ ನೂರಾರು ಭಕ್ತರು ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಿಗ್ಗೆಯಿಂದ ಸಂಜೆವರೆಗೂ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಆಷಾಢ ಮಾಸದ ಶುಕ್ರವಾರ ವ್ರತ ಮಾಡಿ ದೇವಿಯನ್ನು ಸ್ಮರಿಸಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ನೂರಡಿ ರಸ್ತೆಯಲ್ಲಿನ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲೂ ವಿಶೇಷ ಪೂಜೆ ನಡೆಯಿತು.

ADVERTISEMENT

ಅನ್ನದಾತೆ ಅನ್ನಪೂರ್ಣೇಶ್ವರಿಯ ಅರ್ಚಕ ಶಾಂತಕುಮಾರ ಸ್ವಾಮೀಜಿ ನೇತೃತ್ವದಲ್ಲಿ ನಾನಾ ಧಾರ್ಮಿಕ ವಿಧಿವಿಧಾನಗಳು ನಡೆದವು. ಸಂಜೆ ಮಹಿಳೆಯರಿಂದಲೇ ದೇವಿಯ ಮೆರವಣಿಗೆ, ವಿದ್ವಾನ್ ರಾಘವ ಮತ್ತು ತಂಡದಿಂದ ಸ್ಯಾಕ್ಸೋಫೋನ್ ವಾದನ, ಮಹಿಳೆಯರಿಂದ ಮಡಿಲಕ್ಕಿ ತುಂಬುವ ಕಾರ್ಯಕ್ರಮ ಜರುಗಿತು. ಭರತನಾಟ್ಯ ಕಲಾವಿದರಾದ ಜೆ.ಜ್ಯೋತಿ ಮತ್ತು ಜೆ.ಹಂಸವೀಣಾ ಅವರಿಂದ ಭರತನಾಟ್ಯ ಪ್ರದರ್ಶನ ನೀಡಿದರು. ಜೂನಿಯರ್ ವಿಷ್ಣುವರ್ಧನ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಮಂಡ್ಯ ತಾಲೂಕಿನ ತುಂಬಕೆರೆ ಗ್ರಾಮದ ಪಟ್ಟಲದಮ್ಮ ದೇವಸ್ಥಾನದಲ್ಲೂ ಆಷಾಢಮಾಸದ ಶುಕ್ರವಾರದ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆಯೇ ದೇವಾಲಯಕ್ಕೆ ಕುಂಭಕಳಸ ಮತ್ತು ಮೀಸಲು ನೀರು ತರುವ ಪ್ರಕ್ರಿಯೆ ನೆರವೇರಿಸಿ ದೇವಿಯ ವಿಗ್ರಹಕ್ಕೆ ಪಂಚಾಮೃತಾದಿ ಅಭಿಷೇಕ ನೆರವೇರಿಸಲಾಯಿತು. ಬಳಿಕ ದೇವಿಗೆ ತಂಬಿಟ್ಟಿನ ಆರತಿಯೊಂದಿಗೆ ಪಟ್ಟಲದಮ್ಮ ದೇವಿಯ ಪೂಜೆಯ ಮೆರವಣಿಗೆ, ವೀರಗಾಸೆ ಪ್ರದರ್ಶನ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆಯೂ ನಡೆಯಿತು.

ಮಂಡ್ಯ ತಾಲ್ಲೂಕು ಹೊಳಲು ಗ್ರಾಮದ ಪಟ್ಟಲದಮ್ಮದೇವಿ ಮತ್ತು ಚಿತ್ತನಾಳಮ್ಮದೇವಿ ದೇವಸ್ಥಾನಗಳಲ್ಲಿ ಆಷಾಢ ಶುಕ್ರವಾರ ಮಾಸದ ಪೂಜಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.