ಮಂಡ್ಯ: ‘ಬಾಲಕಾರ್ಮಿಕರನ್ನು ರಕ್ಷಣೆ ಮಾಡುವುದರ ಜೊತೆಗೆ ಅವರ ಶೈಕ್ಷಣಿಕ ಹಿತದೃಷ್ಟಿಯಿಂದ ಅವರ ವಿದ್ಯಾಭ್ಯಾಸಕ್ಕೂ ಒತ್ತು ನೀಡಿದರೆ ಮಾತ್ರ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ಸಮಾಜದಿಂದ ದೂರಮಾಡಲು ಸಾಧ್ಯ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಕಾರ್ಮಿಕ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಕಾಯ್ದೆಯಡಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲಕಾರ್ಮಿಕರನ್ನು ಶಾಲೆಗೆ ದಾಖಲು ಮಾಡಿದ ನಂತರ ಅವರ ಶೈಕ್ಷಣಿಕ ಪ್ರಗತಿ ಹಾಗೂ ಹಾಜರಾತಿಯ ಬಗ್ಗೆ ಪ್ರತಿ ಪರಿಶೀಲಿಸಬೇಕು ಇಲ್ಲವಾದಲ್ಲಿ ಅವರು ಪುನಃ ಶಾಲೆ ಬಿಡುವ ಸಾಧ್ಯತೆ ಇರುತ್ತದೆ ಎಂದರು.
ಪತ್ತೆಯಾದ ಬಾಲಕಾರ್ಮಿಕರನ್ನು ಕಾರ್ಮಿಕ ಇಲಾಖೆಯಿಂದ ಶಾಲೆಗೆ ದಾಖಲು ಮಾಡಲಾಗಿದೆ. ಈ 36 ಮಕ್ಕಳ ಮಾಹಿತಿ ವಿದ್ಯಾರ್ಥಿವಾರು ಶಿಕ್ಷಣ ಇಲಾಖೆಯಲ್ಲಿ ಲಭ್ಯವಿರಬೇಕು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ವಿದ್ಯಾರ್ಥಿಗಳ ಬಗ್ಗೆ ವಿಶೇಷ ನಿಗಾ ವಹಿಸಬೇಕು ಎಂದರು.
ಕಾರ್ಮಿಕ ಇಲಾಖೆ ಅವರು ನಗರ ಪ್ರದೇಶದ ಬೇಕರಿ ಹಾಗೂ ಗ್ಯಾರೇಜ್ ಗಳಲ್ಲಿ ಹೆಚ್ಚು ದಾಳಿ ನಡೆಸುತ್ತಾರೆ. ಕಲ್ಲು ಗಣಿಗಾರಿಕೆ, ಸಣ್ಣ ಕೈಗಾರಿಕೆಗಳು, ಗ್ರಾಮೀಣ ಪ್ರದೇಶಗಳಲ್ಲೂ ಹೆಚ್ಚು ದಾಳಿ ನಡೆಸಿ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಮಾತನಾಡಿ, ‘ಕಾರ್ಮಿಕ ಇಲಾಖೆ ಅವರು ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲು ಹೆಚ್ಚು ದಾಳಿ ನಡೆಸಬೇಕು. ದಾಳಿ ಮಾಡಿದ ಬಗ್ಗೆ ಹೆಚ್ಚು ಪ್ರಚಾರ ಕೈಗೊಳ್ಳಿ’ ಎಂದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ-2 ಟಿ. ಲಕ್ಷ್ಮಿ, ಕಾರ್ಮಿಕ ಅಧಿಕಾರಿ ಸವಿತಾ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವರಾಮೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜೂನ್ 12ರಂದು ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಮಂಡ್ಯದ ಕಲಾಮಂದಿರದಲ್ಲಿ ಆಚರಿಸಿ ಹಾಗೂ ಜಿಲ್ಲೆಯ ಹೋಟೆಲ್ ಕ್ವಾರಿ ಹಾಗೂ ಕಾರ್ಖಾನೆಗಳ ಮುಖ್ಯಸ್ಥರಿಗೆ ಕಾರ್ಯಾಗಾರ ಏರ್ಪಡಿಸಿ.– ಕುಮಾರ, ಜಿಲ್ಲಾಧಿಕಾರಿ ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.