
ಮಂಡ್ಯ: ‘ಬಾಲಕಾರ್ಮಿಕ ಪದ್ಧತಿ ಹೋಗಲಾಡಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ಜಾರಿದಳದ ಅಧಿಕಾರಿಗಳು ತಾವು ದಿನನಿತ್ಯ ಓಡಾಡುವ ಜಾಗಗಳಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಬಾಲಕಾರ್ಮಿಕರನ್ನು ಪತ್ತೆ ಹಚ್ಚಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಕುರಿತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2025ರಲ್ಲಿ ಜಿಲ್ಲೆಯಲ್ಲಿ 35ಕ್ಕೂ ಹೆಚ್ಚು ಬಾಲಕಾರ್ಮಿಕರನ್ನು ರಕ್ಷಿಸಲಾಗಿದೆ ಹಾಗೂ ಎಂಟು ಪ್ರಕರಣಗಳಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ. ಬಾಲಕಾರ್ಮಿಕರ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೆ ಅಂತಹ ಜಿಲ್ಲೆಗಳಲ್ಲಿ ಬಾಲಕಾರ್ಮಿಕರು ಕಡಿಮೆ ಇದ್ದಾರೆ ಎಂದು ಅರ್ಥವಲ್ಲ. ಅಧಿಕಾರಿಗಳು ಕೈಗಾರಿಕೆ, ಹೋಟೆಲ್ ಹಾಗೂ ಕ್ರಷರ್‌ಗಳಲ್ಲಿ ಬಾಲಕಾರ್ಮಿಕರು ಇರುವುದನ್ನು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.
ಬಾಲಕಾರ್ಮಿಕರನ್ನು ಪತ್ತೆಹಚ್ಚುವಲ್ಲಿ ಶಿಕ್ಷಣ ಇಲಾಖೆಯ ಪಾತ್ರ ಮಹತ್ವದ್ದು. ಮುಖ್ಯಶಿಕ್ಷಕರು ಶಾಲೆಗೆ ನಿರಂತರ ರಜೆ ಹಾಕಿರುವ ವಿದ್ಯಾರ್ಥಿಗಳು ಹಾಗೂ ಅರ್ಧಕ್ಕೆ ಶಾಲೆ ಬಿಟ್ಟ ವಿದ್ಯಾರ್ಥಿಗಳ ಪಟ್ಟಿ ತೆಗೆದುಕೊಂಡು ಅವರ ಹಿನ್ನೆಲೆಯನ್ನು ಪರಿಶೀಲಿಸಿ, ಆ ಮಕ್ಕಳು ಪ್ರಸ್ತುತ ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕು ಎಂದರು.
ಸಭೆಯಲ್ಲಿ ಕಾರ್ಮಿಕ ಇಲಾಖೆಯ ಉಪನಿರ್ದೇಶಕಿ ಸವಿತಾ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ. ಚಲುವಯ್ಯ, ನಗರಸಭೆ ಪೌರಾಯುಕ್ತ ಪಂಪಾಶ್ರೀ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಂಜುಳಾ ಪಾಲ್ಗೊಂಡಿದ್ದರು.