ADVERTISEMENT

ಪಾಂಡವಪುರ: ಕಲ್ಯಾಣಿಯಲ್ಲಿ ಜಲದ ಕಣ್ಣು ತೆರೆಸಿದ ಬಳಗ

ಪರಿಸರ ಬಳಗದ ಪರಿಶ್ರಮ

ಹಾರೋಹಳ್ಳಿ ಪ್ರಕಾಶ್‌
Published 21 ಮಾರ್ಚ್ 2021, 19:30 IST
Last Updated 21 ಮಾರ್ಚ್ 2021, 19:30 IST
ಪಾಂಡವಪುರ ತಾಲ್ಲೂಕಿನ ಕದಲಗೆರೆ ಗ್ರಾಮದ ಕಲ್ಯಾಣಿಯ ಹೂಳೆತ್ತಿ, ಸ್ವಚ್ಛಗೊಳಿಸಿದ ರೈತ ಸಂಘದ ಪರಿಸರ ಬಳಗ
ಪಾಂಡವಪುರ ತಾಲ್ಲೂಕಿನ ಕದಲಗೆರೆ ಗ್ರಾಮದ ಕಲ್ಯಾಣಿಯ ಹೂಳೆತ್ತಿ, ಸ್ವಚ್ಛಗೊಳಿಸಿದ ರೈತ ಸಂಘದ ಪರಿಸರ ಬಳಗ   

ಪಾಂಡವಪುರ: ತಾಲ್ಲೂಕಿನ ಕದಲಗೆರೆ ಗ್ರಾಮದಲ್ಲಿರುವ, ಹೂಳು ತುಂಬಿ ಬತ್ತಿಹೋಗಿದ್ದ ನೂರಾರು ವರ್ಷಗಳಷ್ಟು ಹಳೆಯದಾದ ಕಲ್ಯಾಣಿಯಲ್ಲಿ ಜಲದ ಕಣ್ಣು ಮೂಡಿದೆ.

ರೈತ ಸಂಘದ ಪರಿಸರ ಬಳಗ ಹಾಗೂ ರೈತ ನಾಯಕ ದಿ.ಕೆ.ಎಸ್‌.ಪುಟ್ಟಣ್ಣಯ್ಯ ಅಭಿಮಾನಿ ಬಳಗ ಕಲ್ಯಾಣಿ ಯನ್ನು ಸ್ವಚ್ಛಗೊಳಿಸಿದರು. ಹೂಳು ತೆಗೆಯುತ್ತಿದ್ದಂತೆ ಕಲ್ಯಾಣಿಯೊಳಗೆ ಅಂತರ್ಜಲ ಉಕ್ಕಿತು. ಗ್ರಾಮಸ್ಥರಲ್ಲಿ ಮಂದಹಾಸ ಮೂಡಿಸಿತು.

ಕದಲಗೆರೆ ಗ್ರಾಮದ ನೂರಾರು ವರ್ಷಗಳಷ್ಟು ಹಳೆಯದಾದ ಕಲ್ಯಾಣಿ ಸಂಪೂರ್ಣ ಹಾಳಾಗಿ, ಗಿಡಗಂಟಿಗಳು ಬೆಳೆದುಕೊಂಡಿತ್ತು. ಶುಕ್ರವಾರ ರೈತ ಸಂಘದ ಪರಿಸರ ಬಳಗ ಹಾಗೂ ಪುಟ್ಟಣ್ಣಯ್ಯ ಅಭಿಮಾನಿಗಳು ಕಲ್ಯಾಣಿ ಸ್ವಚ್ಛತೆ ಕಾರ್ಯಕ್ಕೆ ಮುಂದಾದರು.

ADVERTISEMENT

ಹಾರೆ, ಪಿಕಾಸಿ, ಕುಡುಗೋಲು, ಬಾಂಡ್ಲಿ ಹಿಡಿದು ಕಲ್ಯಾಣಿ ಸುತ್ತಮುತ್ತಲಿನ ಗಿಂಡಗಂಟಿಗಳನ್ನು ಕಿತ್ತೆಸೆದರು. ಕಲ್ಯಾಣಿಯ ಮೆಟ್ಟಿಲುಗಳಲ್ಲಿ ಇದ್ದ ಗಿಡಗಂಟಿಗಳನ್ನೂ ಸ್ವಚ್ಛಗೊಳಿಸಿದರು. ಕಲ್ಯಾಣಿಯ ಆಳಕ್ಕೆ ಇಳಿದು ತುಂಬಿದ್ದ ಮಣ್ಣನ್ನು ಅಗೆದು ಹೊರ ಹಾಕಿದರು. ಒಬ್ಬರಿಗೊಬ್ಬರು ಕೈಜೋಡಿಸಿ, ಶ್ರಮಿಸಿದರು. ಹೊತ್ತು ಏರುತ್ತಿದ್ದಂತೆ ಕೆಲಸ ನಿಲ್ಲಿಸಿ ತಿಂಡಿ ತಿಂದು ಕೆಲ ಹೊತ್ತು ವಿಶ್ರಮಿಸಿದರು.

ಇವರ ಕೆಲಸ ನೋಡಿದ ಗ್ರಾಮಸ್ಥರೂ ಕೈಜೋಡಿಸಿದರು. ಶನಿವಾರ ಬೆಳಿಗ್ಗೆ ಕದಲಗೆರೆ ಕಲ್ಯಾಣಿಯ ಜಲದ ಕಣ್ಣು ತೆರೆದಿತ್ತು. ಅಂತರ್ಜಲ ಕಾಣಿಸಿಕೊಂಡು ನೀರು ಉಕ್ಕಿತು. ಕಲ್ಯಾಣಿಯಲ್ಲಿ ಒಂದಷ್ಟು ನೀರು ಬಂದಿತು. ಹೂಳೆತ್ತಿದ್ದ ಪರಿಸರ ಬಳಗ, ಕೆ.ಎಸ್.ಪುಟ್ಟಣ್ಣಯ್ಯ ಬಳಗದವರಲ್ಲೂ ಸಂಭ್ರಮ ಮೂಡಿತ್ತು. ಕದಲಗೆರೆ ಗ್ರಾಮಸ್ಥರಲ್ಲೂ ಸಂತೃಪ್ತಿಯ ಭಾವ ಸ್ಫುರಿಸಿತು.

‘ನಮ್ಮೂರಿನ ಕಲ್ಯಾಣಿ ನೂರಾರು ವರ್ಷದಷ್ಟು ಹಳೆಯದ್ದಾಗಿದೆ. ಹೂಳು ತುಂಬಿಕೊಂಡು ಗಿಡಗಂಟಿಗಳು ಬೆಳೆದುಕೊಂಡಿತ್ತು. ನೀರಿಲ್ಲದೆ ಬರಿದಾಗಿತ್ತು. ಈ ಕಲ್ಯಾಣಿಯ ಪಕ್ಕದಲ್ಲಿ ಕೊರೆದಿದ್ದ ಬೋರ್‌ವೆಲ್‌ನಲ್ಲೂ ನೀರು ಬಂದಿರಲಿಲ್ಲ. ಆದರೆ ಕಲ್ಯಾಣಿ ಹೂಳು ತೆಗೆದಿದ್ದರಿಂದ ನೀರುಬಂದಿರುವುದು ನಮಗೆ ಸಂತೋಷವಾಗುತ್ತಿದೆ’ ಎಂದು ಗ್ರಾಮಸ್ಥರಾದ ಯೋಗಣ್ಣ, ರಾಮೇಗೌಡ, ಪುಟ್ಟಸ್ವಾಮಿ ಹೇಳಿದರು.

‘ರೈತ ಸಂಘ ಮತ್ತು ಪರಿಸರ ಪ್ರೇಮಿಗಳು ಪರಿಸರ ಬಳಗದ ಹೆಸರಿ ನಲ್ಲಿ ತಾಲ್ಲೂಕಿನಾದ್ಯಂತ ಇಂಥ ಕೊಳ‌, ಕಟ್ಟೆ, ಕೆರೆಗಳ ಹೂಳು ತೆಗೆದು, ಗಿಡಗಂಟಿ ಸ್ವಚ್ಚಗೊಳಿಸುವ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಹೇಳಿದರು.

ಪರಿಸರ ಬಳಗದ ಪ್ರಸನ್ನ ಎಲ್.ಗೌಡ, ನಂದಿನಿ ಜಯರಾಮ್, ಸಂತೋಷ್‌ಕೌಲಗಿ, ಸುಮನಸ್‌ ಕೌಲಗಿ, ಕೆ.ಟಿ.ಗೋವಿಂದೇಗೌಡ, ಮೈಸೂರಿನ ಪರಶುರಾಮೇಗೌಡ, ಪ್ರೊ.ಕಾಳ ಚನ್ನೇಗೌಡ, ಕುಸುಮಾ, ಕಾಡೇನಹಳ್ಳಿ ಸತೀಶ್, ಕೆನ್ನಾಳು ವಿಜಯಕುಮಾರ್, ಚಿಕ್ಕಾಡೆ ಹರೀಶ್, ವೈ.ಎಚ್.ಕೊಪ್ಪಲು ಮಂಜುನಾಥ್, ರಘು ಸೇರಿದಂತೆ ಹಲವರು ಕಲ್ಯಾಣಿಗೆ ಕಾಯಕಲ್ಪ ನೀಡುವ ಕೆಲಸದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.