ADVERTISEMENT

ಮೌಢ್ಯ ತಿರಸ್ಕರಿಸಿ, ಶರಣರ ಸಂದೇಶ ಪಾಲಿಸಿ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 14:46 IST
Last Updated 21 ಡಿಸೆಂಬರ್ 2025, 14:46 IST
<div class="paragraphs"><p>ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ&nbsp;ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು</p></div>

ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು

   

ಮಳವಳ್ಳಿ: ‘ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು ವಿಷಾದನೀಯ ಸಂಗತಿ. ವೈಚಾರಿಕತೆ ಹಾಗೂ ವೈಜ್ಞಾನಿಕ ಶಿಕ್ಷಣ ಪ್ರತಿಯೊಬ್ಬರಿಗೂ ಸಿಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪಟ್ಟಣದಲ್ಲಿ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಜಯಂತಿ ಮಹೋತ್ಸವವನ್ನು ಭಾರತದ ರಾಷ್ಟ್ರಪತಿ ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮ ಎಲ್ಲ ತಾಲ್ಲೂಕುಗಳಲ್ಲಿ ನಡೆಯುತ್ತಿದ್ದು, ಮುಂದಿನ ವರ್ಷ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆಯುವ ಬಗ್ಗೆ ತೀರ್ಮಾನ ಮಾಡಲಾಗಿದೆ ಎಂದರು. 

ADVERTISEMENT

ನಮ್ಮ ಸಮಾಜದಲ್ಲಿ ಅನೇಕ ಜಾತಿಗಳು ಇರುವುದರಿಂದ ಸಮಾಜದಲ್ಲಿ ಅಸಮಾನತೆ ಇದೆ. ಜಾತಿ ವ್ಯವಸ್ಥೆಯಿಂದ ಶಾಂತಿ ಮೂಡಿಬರುವುದಿಲ್ಲ. ಈ ವಿಷಯವನ್ನು ಈ ಹಿಂದೆ ದಾರ್ಶನಿಕರು, ಬಸವಾದಿ ಶರಣರು ಹೇಳುತ್ತಾ ಬಂದಿದ್ದಾರೆ. ಸಮಾಜದಲ್ಲಿ ಜನರ ನಡುವೆ ಪ್ರೀತಿ ಇರಬೇಕು. ಇದೇ ನಮ್ಮ ಸಂಸ್ಕೃತಿ ಆಗಿದೆ. ಜಾತಿ ಹೋಗಬೇಕಾದರೆ ಸಾಮಾಜಿಕ ಹಾಗೂ ಆರ್ಥಿಕ ಶಕ್ತಿ ಬರಬೇಕು. ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಚಲನೆ ಸಿಗುವುದು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಬಂದರೆ ಮಾತ್ರ ಸಿಗುತ್ತದೆ ಎಂದು ಹೇಳಿದರು. 

ಜಯಂತಿಗಳನ್ನು ಆಚರಣೆ ಮಾಡುತ್ತಿರುವುದು ಎಲ್ಲಾ ಒಗ್ಗೂಡಿ ಪ್ರೀತಿಯಿಂದ ಇರಬೇಕು ಎಂಬ ಉದ್ದೇಶದಿಂದ ಮಾತ್ರ ಎಂದು ಅವರು ಹೇಳಿದರು.

ಕಾರ್ಯಕರ್ತನಿಗೆ ಮಾಲೆ ಹಾಕಿದ ಸಿಎಂ: ಶಂಕುಸ್ಥಾಪನೆ ಮುಗಿಸಿ ಹೊರಟಿದ್ದ ಪುರಸಭೆ ನಾಮನಿರ್ದೇಶಿತ ಸದಸ್ಯ ಆನಂದ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕಲು ಮುಂದಾದರು. ಆದರೆ ಹೂವಿನ ಹಾರ ಪಡೆದ ಸಿಎಂ ಅವರು ಆನಂದ್‌ಗೆ ಹಾರ ಹಾಕಿ ಬೆನ್ನುತಟ್ಟಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ‘ಸದಾ ನಾಡಿನ ಕಲ್ಯಾಣದೊಂದಿಗೆ ಜನರ ಆರೋಗ್ಯ, ಶಿಕ್ಷಣಕ್ಕಾಗಿ ಮುಡಿಪಾಗಿಟ್ಟ ಕ್ಷೇತ್ರವಾಗಿ ಸುತ್ತೂರು ಮಠ ರೂಪಿತವಾಗಿದೆ. ಸರ್ಕಾರ ಮಾಡುವಂತಹ ಕೆಲಸಗಳನ್ನು ಮಠ ಮಾಡುತ್ತಿದೆ. ಸುತ್ತೂರು ಕ್ಷೇತ್ರದ ಒಂದು ಸಾಧನೆ ಚರಿತ್ರೆಯಲ್ಲಿ ಉಳಿಯುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರ ಕಲ್ಯಾಣ ಹಾಗೂ ವಿಭಿನ್ನ ರೀತಿಯಲ್ಲಿ ರಾಜ್ಯದ ಅಭಿವೃದ್ಧಿ, ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದಾರೆ’ ಎಂದರು.

‘ಮಠದಿಂದ ಸಾಮರಸ್ಯದ ಸಂದೇಶ’

ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, ‘10ನೇ ಶತಮಾನದಲ್ಲಿಯೇ ಸಮಾಜದಲ್ಲಿ ಸಾಕಷ್ಟು ಕ್ರಾಂತಿಕಾರಿ ಬದಲಾವಣೆ ತಂದಿದ್ದ ಶಿವರಾತ್ರೀಶ್ವರ ಶಿವಯೋಗಿಯವರ ಸೇವೆ ಇಂದಿನ ಎಲ್ಲ ಮಠಗಳಿಗೂ ಮಾದರಿಯಾಗಿದೆ. ಶಿವಯೋಗಿಗಳು ನಾಡಿನ ಜನರನ್ನು ಒಗ್ಗೂಡಿಸಿ ಸೋದರತ್ವ ಬೆಳೆಸಿದ್ದಾರೆ. ಮಠಕ್ಕೆ ಎಲ್ಲಾ ಪಕ್ಷ, ಎಲ್ಲ ಧರ್ಮೀಯರು ಬರುತ್ತಾರೆ. ಸುತ್ತೂರು ಶ್ರೀಗಳು ಭೇದವೆಣಿಸದೆ ಎಲ್ಲರನ್ನೂ ಸಮಭಾವದಿಂದ ಕಾಣುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

‌ಎಲ್ಲ ಸಮುದಾಯದವರನ್ನು ಒಂದೆಡೆ ಸೇರಿಸಿ ಸಾಮರಸ್ಯದ ಸಂದೇಶ ಸಾರುವ ಕೆಲಸ ಮಾಡುತ್ತಿದ್ದಾರೆ. ಜಾತಿ ವಿನಾಶವಾಗದೆ ದೇಶ ಅಭಿವೃದ್ಧಿಯಾಗಲ್ಲ ಎಂದರು. 

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಮಳವಳ್ಳಿ ಐತಿಹಾಸಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ಹಿನ್ನೆಲೆಗಳನ್ನು ಒಳಗೊಂಡ ಇಂಥ ಮಣ್ಣಿನಲ್ಲಿ ಜಯಂತ್ಯುತ್ಸವವು ಬಹಳ ಅಭೂತಪೂರ್ವ ನಡೆದಿದೆ. ಒಂದು ತಾಲ್ಲೂಕು ಕೇಂದ್ರಕ್ಕೆ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಅವರು ಬಂದಿದ್ದು ಅತೀವ ಸಂತಸ ತಂದಿದೆ’ ಎಂದರು. 

ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಕನಕಪುರ ದೇಗುಲ ಮಠದ ಮುಮ್ಮುಡಿ ನಿರ್ವಾಣ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಪ್ರಸನ್ನಾನಂದ ಪುರಿ ಸ್ವಾಮೀಜಿ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಪಿ.ರವಿಕುಮಾರ್‌, ಕೆ.ಎಂ.ಉದಯ್‌, ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್‌, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿ.ಪಂ. ಸಿಇಒ ಕೆ.ಆರ್.ನಂದಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಶೀಲ್ದಾರ್‌ ಎಸ್.ವಿ.ಲೋಕೇಶ್‌, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ಎ.ಎಂ.ಸೋಮಶೇಖರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಇ.ಉಮಾ, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.