
ಮಂಡ್ಯ: ಕಾಂಗ್ರೆಸ್ ಸರ್ಕಾರವು ಸಂವಿದಾನದಡಿಯಲ್ಲಿಯೇ ಜನರಿಗೆ ಆರ್ಥಿಕ ಶಿಕ್ಷಣ ನೀಡಿ ಅವರ ಬದುಕಿನ ಬಗ್ಗೆ ಸಮತೋಲನ ಕಾಪಾಡಿಕೊಂಡು ಬರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ದಲಿತ ಸಮುದಾಯ ಸಂಘಟನೆಗಳ ಅಭಿನಂದನಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕ್ಕೆ ಮಾದರಿಯಾಗಿರುವ ಸಂವಿಧಾನ ಬರೆಯಲು ಬಿ.ಆರ್.ಅಂಬೇಡ್ಕರ್ ಅವರಿಗೆ ಅವಕಾಶ ನೀಡಿದ್ದೇ ನಮ್ಮ ಕಾಂಗ್ರೆಸ್ ಸರ್ಕಾರ. ನಾವು ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಬಿಜೆಪಿ-ಜೆಡಿಎಸ್‌ನವರು ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ, ಎಸ್‌ಸಿ, ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆ ಶೇ.18 ರಷ್ಟು ಅನುದಾನ ಇಟ್ಟಿದ್ದೇ ಕಾಂಗ್ರೆಸ್ ಸರ್ಕಾರ. ಆದರೆ, ನರೇಂದ್ರ ಮೋದಿ ಆಗಲೀ, ಬಿಜೆಪಿಯವರಾಗಲೀ ಇಟ್ಟಿಲ್ಲ ಎಂದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಬಿಜೆಪಿ, ಜೆಡಿಎಸ್ ಪಕ್ಷಗಳು ಟೀಕೆ ಮಾಡುತ್ತಿದ್ದಾರೆ. ಇದರ ಬಗ್ಗೆ ಪ್ರಶ್ನೆ ಮಾಡಲು ನೈತಿಕತೆ ಇಲ್ಲ. ಜಿಲ್ಲೆಯ ಪ್ರತಿಯೊಬ್ಬರೂ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ತಿಳಿಸಬೇಕು. ನಮ್ಮ ಸರ್ಕಾರದ ಮೇಲೆ ನಂಬಿ, ಪ್ರೀತಿ, ವಿಶ್ವಾಸವಿಟ್ಟರೆ ಅಭಿವೃದ್ಧಿ ಹಾಗೂ ಸಮುದಾಯದ ಸಬಲೀಕರಣವಾಗಲಿದೆ ಎಂದು ತಿಳಿಸಿದರು.
ಮೈತ್ರಿ ಪಕ್ಷಗಳನ್ನು ನಂಬಬೇಡಿ ಏಕೆಂದರೆ, ಜಿಲ್ಲೆಯಲ್ಲಿ ಮಹಾನ್ ನಾಯಕರು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲೂ ಇಷ್ಟೊಂದು ಅಧಿಕಾರ ದಲಿತ ಮುಖಂಡರಿಗೆ ಕಲ್ಪಿಸಿರಲಿಲ್ಲ. ಆದರೆ ಈ ಬಾರಿ ನಾಲ್ಕು ಪ್ರಮುಖ ಸ್ಥಾನಗಳಿಗೆ ಅಧಿಕಾರ ನೀಡಲಾಗಿದೆ. ಇದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ಜಿಲ್ಲೆಯ 50 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಲಿತ ಸಮುದಾಯದವರಿಗೆ ಮಾತ್ರ ಇಷ್ಟೊಂದು ಅಧಿಕಾರ ಸಿಕ್ಕಿದೆ. ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಜವಾಬ್ದಾರಿ ವಹಿಸುವುದು ಕಾಂಗ್ರೆಸ್ ಪಕ್ಷ ಮಾಡಿಕೊಂಡು ಬಂದಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಅಧಿಕಾರದಿಂದ ಹೊರಗಿಟ್ಟರೆ ಮಾತ್ರ ದಲಿತರಿಗೆ ಅಧಿಕಾರ ಸಿಗಲಿದೆ, ಇಲ್ಲದಿದ್ದರೆ ಚಿಪ್ಪು ಗ್ಯಾರಂಟಿ ಎಂದರು.
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಅನುಸೂಚಿತ ಜಾತಿ. ಪಂಗಡಗಳ ಆಯೋಗದ ಅಧ್ಯಕ್ಷ ಎಲ್.ಮೂರ್ತಿ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖಡರಾದ ಗುರುಪ್ರಸಾದ್ ಕೆರಗೋಡು, ಸಿ.ಡಿ.ಗಂಗಾಧರ, ಸೋಮಶೇಖರ್ ಕೆರಗೋಡು, ಶೈಲೇಂದ್ರ, ಹನಕೆರೆ ಗಂಗರಾಜು, ನರಸಿಂಹಮೂರ್ತಿ, ಎಂ.ವಿ.ಕೃಷ್ಣ, ಮಧು, ಇದ್ರೀಶ್‌ಖಾನ್, ಕಮಲಮ್ಮ, ಮಹೇಶ್‌ಕೃಷ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.