ADVERTISEMENT

ಮೇಕೆದಾಟು ಪಾದಯಾತ್ರೆ: ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್ ಆಹ್ವಾನ

ಮದ್ದೂರು ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಬಳಿ ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 12:59 IST
Last Updated 28 ಡಿಸೆಂಬರ್ 2021, 12:59 IST
ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ಕಾಂಗ್ರೆಸ್‌ ಮುಖಂಡರು
ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ಕಾಂಗ್ರೆಸ್‌ ಮುಖಂಡರು   

ಮದ್ದೂರು: ‘ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆಯಲಿರುವ ಪಾದಯಾತ್ರೆಯನ್ನು ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಇದು ಪಕ್ಷಾತೀತ ನಡೆಯುತ್ತಿರುವ ಹೋರಾಟವಾಗಿದ್ದು ಕುಮಾರಸ್ವಾಮಿ ಕೂಡ ಭಾಗಿಯಾಗಬಹುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಹ್ವಾನ ನೀಡಿದರು.

ಪಟ್ಟಣದ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಬಳಿ ಮಂಗಳವಾರ ನಡೆದ ಕಾಂಗ್ರೆಸ್‌ನ 137ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

‘ನಮ್ಮ ನೀರಿನ ಹಕ್ಕಿಗಾಗಿ ಮೇಕೆದಾಟು ಪಾದಯಾತ್ರೆ ನಡೆಯಲಿದೆ. ನಮ್ಮ ಪಾಲಿನ ನೀರು, ನಮ್ಮ ಜಮೀನು, ನಮ್ಮ ಹಣ ಬಳಸಿ ಅಣೆಕಟ್ಟೆ ನಿರ್ಮಾಣ ಮಾಡುವುದು ನಮ್ಮ ಹಕ್ಕು. ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಯಾರೇ ಬಂದರೂ ಸ್ವಾಗತವಿದೆ, ಎಚ್‌.ಡಿ.ಕುಮಾರಸ್ವಾಮಿ ಕೂಡ ಹೋರಾಟದಲ್ಲಿ ಪಾಲ್ಗೊಳ್ಳಲಿ’ ಎಂದು ಸ್ವಾಗತ ಕೋರಿದರು.

ADVERTISEMENT

‘ಭಾರತ ದೇಶ 563 ಸಣ್ಣಪುಟ್ಟ ರಾಜ ಮನೆತನಗಳ ಆಡಳಿತದಿಂದ ಚೂರು ಚೂರಾಗಿತ್ತು. ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ, ಪ್ರಜಾಪ್ರಭುತ್ವ ಇರಲಿಲ್ಲ. ಕೃಷಿ, ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ ಯಾವುದೂ ಇರಲಿಲ್ಲ. ಆದರೆ ಇಂದು ನಮ್ಮ ದೇಶ ಎಲ್ಲಾ ರಂಗದಲ್ಲಿ ಅಭಿವೃದ್ಧಿ ಹೊಂದಿದೆ. ಈ ಸಾಧನೆಗೆ ಕಾಂಗ್ರೆಸ್‌ ಕಾರಣ’ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ‘ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಆಹಾರ ಸುರಕ್ಷತಾ ಕಾನೂನು, ಶೈಕ್ಷಣಿಕ ಹಕ್ಕು, ಮಾಹಿತಿ ಹಕ್ಕು ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ ಮೋದಿ ಸರ್ಕಾರ ಅಗತ್ಯವಿಲ್ಲದ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದೆ. ನೋಟು ನಿಷೇಧ, ಜಿಎಸ್‌ಟಿ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಿದೆ’ ಎಂದು ವಾಗ್ದಾಳಿ ನಡೆಸಿದರು.

‘ನಾನು ಮುಖ್ಯಮಂತ್ರಿಯಾಗಿದ್ದಾಗ ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಗುತ್ತಿಗೆಗಳಲ್ಲಿ ಮೀಸಲಾತಿ ಕಾನೂನು ಜಾರಿಗೊಳಿಸಿದ್ದೆ. ಆದರೆ ಈಗಿನ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾದ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ. ಆರ್‌ಎಸ್‌ಎಸ್‌ ಅಜೆಂಡಾಗಳನ್ನು ಜಾರಿಗೊಳಿಸುತ್ತಿರುವ ಬಿಜೆಪಿ ಸರ್ಕಾರ ಸಂವಿಧಾನದ ಜಾಗದಲ್ಲಿ ಮನುಸ್ಮೃತಿಯನ್ನು ಸ್ಥಾಪಿಸಲು ಮುಂದಾಗಿದೆ’ ಎಂದರು.

‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆರ್‌ಎಸ್‌ಎಸ್‌ ನಾಯಕರು ಮತಾಂತರ ನಿಷೇಧ ಮಸೂದೆ ಕುರಿತಂತೆ ಒಂದು ವರದಿ ನೀಡಿದ್ದರು. ಮಧ್ಯಪ್ರದೇಶದಲ್ಲಿ ಜಾರಿಯಾಗಿದ್ದ ಕಾಯ್ದೆಯನ್ನೇ ಹೆಸರು ಬದಲಾವಣೆ ಮಾಡಿ ಕರ್ನಾಟಕದಲ್ಲಿ ಜಾರಿಗೊಳಿಸುವಂತೆ ತಿಳಿಸಿದ್ದರು. ಆ ವರದಿ ನಾನು ಮುಖ್ಯಮಂತ್ರಿಯಾದಾಗ ಸಚಿವ ಸಂಪುಟ ಸಭೆಯ ಮುಂದೆ ಬಂದಿತ್ತು. ಆಗಿನ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಅವರಿಗೆ ಅದನ್ನು ಕೈಬಿಡುವಂತೆ ತಿಳಿಸಿದ್ದೆ. ಆ ಕಾಯ್ದೆ ಜಾರಿಗೊಳಿಸುವ ಉದ್ದೇಶವೂ ನಮಗೆ ಇರಲಿಲ್ಲ’ ಎಂದರು.

ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಮುಖಂಡರು ಸೌಧದ ಒಳಗಿರುವ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ವೀಕ್ಷಿಸಿದರು. ಕಾಂಗ್ರೆಸ್‌, ಸೇವಾದಳ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

ಮೋದಿ ಆಡಳಿತಕ್ಕೆ ಸುಪ್ರೀಂ ಕೋರ್ಟ್‌ ಪ್ರಮಾಣ ಪತ್ರ: ಮೊಯಿಲಿ

ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ಮಾತನಾಡಿ ‘ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶದ ಏಕತೆ, ಸಮಗ್ರತೆ ನಾಶವಾಗುತ್ತಿದೆ. ಕಳೆದ 7 ವರ್ಷಗಳಿಂದ ಕಾನೂನುಗಳಿಗೆ ರಕ್ಷಣೆ ಇಲ್ಲವಾಗಿದೆ. ದೇಶದ ಪ್ರಜಾಸತ್ತಾತ್ಮಕ ತಳಪಾಯ ಪತನವಾಗುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಮೋದಿ ಆಡಳಿತಕ್ಕೆ ಸುಪ್ರೀಂ ಕೋರ್ಟ್‌ನಿಂದ ಪ್ರಮಾಣ ಪತ್ರ ಸಿಕ್ಕಂತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.