
ಮಂಡ್ಯ: ‘ಮುಂದಿನ ಪೀಳಿಗೆಯೂ ಒಪ್ಪಿಕೊಳ್ಳುವಂತಹ ಸಂವಿಧಾನವನ್ನು ಅಂಬೇಡ್ಕರ್ ಅವರು ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ ಹೇಳಿದರು.
ನಗರದ ಅಂಬೇಡ್ಕರ್ ಮಿನಿ ಸಭಾಂಗಣದಲ್ಲಿ ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ವತಿಯಿಂದ ಸೋಮವಾರ ನಡೆದ ರಮಾಬಾಯಿ ಅಂಬೇಡ್ಕರ್ ಅವರ 128ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಸಾಧನೆಗೆ ಸ್ಫೂರ್ತಿಯಾಗಿ, ಬೆಂಬಲವಾಗಿ ಅವರ ಪತ್ನಿ ರಮಾಬಾಯಿ ನಿಂತಿದ್ದರು. ಮನೆಯ ಜವಾಬ್ದಾರಿ ಸೇರಿದಂತೆ ಅಂಬೇಡ್ಕರ್ ಅವರ ಆರೋಗ್ಯ ಕಾಳಜಿಯನ್ನು ನೋಡಿಕೊಂಡಿದ್ದರು. ವಿಶ್ವವೇ ತಿರುಗಿ ನೋಡುವಂತೆ ಒಂದು ಮಹಾನ್ ಗ್ರಂಥವನ್ನು ಸಂವಿಧಾನದ ರೂಪದಲ್ಲಿ ಅಂಬೇಡ್ಕರ್ ಅವರು ನೀಡಲು ರಮಾಬಾಯಿ ಅವರ ಕೊಡುಗೆಯೂ ಇದೆ ಎಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮತಿ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿ, ‘ಭಾರತದ ವಿಭಜನೆ ಕೃತಿ ಬರೆದ ಅಂಬೇಡ್ಕರ್ ಅವರು ಪುಸ್ತಕವನ್ನು ಪತ್ನಿ ರಮಾಬಾಯಿ ಅವರಿಗೆ ಅರ್ಪಿಸುವ ಮೂಲಕ ಗೌರವ ಕೊಡುತ್ತಾರೆ. ಅಂಬೇಡ್ಕರ್ ಅವರು ಎಷ್ಟೋ ಬಾರಿ ಪತ್ನಿಯವರ ಬಳಿ ಭಾವನಾತ್ಮಕವಾಗಿ ಮಾತನಾಡಿ, ಅವರ ಸಹಕಾರಕ್ಕೆ ಕೃತಜ್ಞತೆ ತಿಳಿಸಿರುವುದನ್ನು ನಾವು ಕಾಣುತ್ತೇವೆ’ ಎಂದು ತಿಳಿಸಿದರು.
ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶರಾವತಿ ಅಶ್ವಥ್, ಸಮಿತಿಯ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಸುಶ್ಮಿತಾ, ಜಿಲ್ಲಾ ಘಟಕದ ಅಧ್ಯಕ್ಷ ವಿ.ಆನಂದ್, ಮೈಸೂರು ವಿಭಾಗೀಯ ಸಂಚಾಲಕ ಕೆ.ಎಂ. ಅನಿಲ್‌ಕುಮಾರ್, ಉಪಾಧ್ಯಕ್ಷೆ ಸುಧಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.