ADVERTISEMENT

ಕೆ.ಆರ್.ಪೇಟೆ: ‘ರಾಜಕೀಯದಿಂದ ಸಂಘ ಮುಕ್ತವಾಗಲಿ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:53 IST
Last Updated 22 ನವೆಂಬರ್ 2025, 4:53 IST
ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025 ಕಾರ್ಯಕ್ರಮ ನಡೆಯಿತು
ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025 ಕಾರ್ಯಕ್ರಮ ನಡೆಯಿತು   

ಕೆ.ಆರ್.ಪೇಟೆ: ರೈತರ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳು ಪ್ರಧಾನ ಪಾತ್ರ ವಹಿಸುತ್ತಿದ್ದು, ಅವುಗಳ ಬಲವರ್ಧನೆಗೆ ಪ್ರತಿಯೊಬ್ಬರೂ ಸಹರಿಸಬೇಕು’ ಎಂದು ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ. ನಾಗೇಂದ್ರಕುಮಾರ್ ಹೇಳಿದರು.

ತಾಲ್ಲೂಕಿನ ಶೀಳನೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿರುವ ಮಾಜಿ ಶಾಸಕ ಎಸ್.ಎಂ.ಲಿಂಗಪ್ಪ ಮಹಾ ವೇದಿಕೆಯಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದಲ್ಲಿ ಸಹಕಾರ ಕ್ಷೇತ್ರದ ಬಲವರ್ಧನೆಗೆ ಜವಹರಲಾಲ್ ನೆಹರೂ ಅವರ ಕೊಡುಗೆ ಅಪಾರವಾಗಿದ್ದು, ಅವರ ದೂರದೃಷ್ಟಿಯ ಫಲವಾಗಿ ಸಹಕಾರ ಕ್ಷೇತ್ರ ಇಂದು ಸಮೃದ್ದಿಯಾಗಿ ಬೆಳೆದಿದೆ. ಸಹಕಾರ ಸಂಘಗಳು ರಾಜಕೀಯ ಮುಕ್ತವಾಗಿದ್ದಾಗ ಮಾತ್ರ ಆರ್ಥಿಕವಾಗಿ ಪ್ರಬಲವಾಗಲು ಸಾಧ್ಯ’ ಎಂದರು.

ADVERTISEMENT

ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ನಿರ್ದೇಶಕ ಶೀಳನೆರೆ ಎಸ್.ಎಲ್. ಮೋಹನ್ ಮಾತನಾಡಿ, ‘ಗ್ರಾಮಾಂತರ ಪ್ರದೇಶದಲ್ಲಿ ಸಹಕಾರ ಸಂಸ್ಥೆಗಳು ರೈತರ ಅಭಿವೃದ್ದಿಗೆ ಶ್ರಮಿಸುತ್ತಿದ್ದು, ಕೃಷಿ ಚಟುವಟಿಕೆಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಮತ್ತು ಔಷಧಗಳನ್ನು ನೀಡುತ್ತಿದ್ದು, ಅದನ್ನು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ, ‘ಈ ಗ್ರಾಮದ ಎಸ್.ಎಂ.ಲಿಂಗಪ್ಪ ಅವರು ದಕ್ಷತೆಯಿಂದ ಸಹಕಾರ ಸಂಸ್ಥೆಗಳನ್ನು ನಡೆಸಿದ್ದುದರಿಂದ ರಾಜ್ಯದಲ್ಲಿಯೇ ತಾಲ್ಲೂಕಿನ ಸಹಕಾರ ಸಂಘಗಳು ಹೆಸರಾಗಿವೆ. ಅವರಲ್ಲಿದ್ದ ಕಾರ್ಯತತ್ಪರತೆ ಎಲ್ಲಾ ಸಹಕಾರ ಸಂಸ್ಥೆಯ ಸದಸ್ಯರಲ್ಲಿ ಇರಬೇಕು’ ಎಂದು ಆಶಿಸಿದರು. ‌‌

ಸಮಾರಂಭದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ಎಸ್.ಅಂಬರೀಶ್ ವಹಿಸಿದ್ದರು. ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ಮನ್‌ಮುಲ್‌ ನಿರ್ದೇಶಕ ಎಂ.ಬಿ.ಹರೀಶ್, ಪ್ರಮುಖರಾದ ಎಸ್.ಎಸ್.ಪುರುಷೋತ್ತಮ್, ಜಾನಕೀರಾಂ, ಎಸ್.ಪಿ.ಸಿದ್ದೇಶ್, ಎಸ್.ಕೆ.ಪ್ರಕಾಶ್, ಬಿ.ಎಂ.ಕಿರಣ್, ಎಂ.ಪಿ.ಲೋಕೇಶ್, ಲತಾಮುರುಳಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.