ADVERTISEMENT

ಕೆ.ಶೆಟ್ಟಹಳ್ಳಿ ಸಂಘದ ಚುನಾವಣೆ ವಿಳಂಬ ಆರೋಪ: ನಿರ್ದೇಶಕರು, ಮುಖಂಡರ ಧರಣಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 3:52 IST
Last Updated 22 ಆಗಸ್ಟ್ 2025, 3:52 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಸಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಂಘದ ನಿರ್ದೇಶಕರು ಹಾಗೂ ಮುಖಂಡರು ಪಟ್ಟಣದ ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಸಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಂಘದ ನಿರ್ದೇಶಕರು ಹಾಗೂ ಮುಖಂಡರು ಪಟ್ಟಣದ ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಂಘದ ನಿರ್ದೇಶಕರು ಹಾಗೂ ಮುಖಂಡರು ಗುರುವಾರ ಪಟ್ಟಣದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

ಇಲ್ಲಿನ ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿ ಎದುರು ಮಧ್ಯಾಹ್ನ 12 ಗಂಟೆಯಿಂದ ಸಂಜೆವರೆಗೂ ಪ್ರತಿಭಟನಾ ಧರಣಿ ನಡೆಯಿತು. ಸಹಕಾರ ಇಲಾಖೆ ಉಪ ನಿಬಂಧಕರು, ಸಹಾಯಕ ನಿಬಂಧಕರು ಹಾಗೂ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಘೋಷಣೆ ಕೂಗಿದರು. ಚುನಾವಣೆ ದಿನಾಂಕವನ್ನು ಇಂದೇ ನಿಗದಿ ಮಾಡಬೇಕು ಎಂದು ಪಟ್ಟು ಹಿಡಿದರು.

‘ಕೆ.ಶೆಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸುವ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ. ಸಹಕಾರ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಂದು ಚುನಾವಣಾ ಪ್ರಕ್ರಿಯೆಯನ್ನು ವಿನಾಕಾರಣ ಮುಂದೂಡಲಾಗುತ್ತಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಿ ಎಂದು ಆ.4ರಂದು ಸಂಘದ 7 ಮಂದಿ ನಿರ್ದೇಶಕರು ಉಪ ನಿಬಂಧಕರಿಗೆ ಪತ್ರ ಕೊಟ್ಟಿದ್ದೇವೆ. ಆದರೆ ಈ ಬಗ್ಗೆ ಯಾವುದೇ ಕ್ರಮ ವಹಿಸುತ್ತಿಲ್ಲ’ ಎಂದು ಮುಖಂಡ ಸುರೇಶ್ ದೂರಿದರು.

ADVERTISEMENT

‘ಸಂಘಕ್ಕೆ 11 ಮಂದಿ ನಿರ್ದೇಶಕರು ನಿಯಮಾನುಸಾರ ಆಯ್ಕೆಯಾಗಿದ್ದು, ಕೋರಂ ಕೊರತೆ ನೆಪ ಹೇಳಿ ಚುನಾವಣೆಯನ್ನು ಮುಂದೂಡಲಾಗುತ್ತಿದೆ. ಹೈಕೋರ್ಟ್‌ ಆದೇಶ ಉಲ್ಲಂಘನೆಯಾಗಿದೆ. ಆ.14ರಂದು ಚುನಾವಣೆ ನಡೆಸುವಂತೆ ಸಹಾಯಕ ನಿಬಂಧಕರು ಕೂಡ ಆದೇಶ ನೀಡಿದ್ದಾರೆ. ಆದರೂ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ’ ಎಂದು ಮುಖಂಡ ಯತೀಶ್ ಅಸಮಾಧಾನ ವ್ಯಕ್ತಪಡಿಸಿದರು.

ಸಹಕಾರ ಅಭಿವೃದ್ಧಿ ಅಧಿಕಾರಿ ಯು.ಕೆ. ಪಾರ್ವತಮ್ಮ ಮಾತನಾಡಿ, ‘ಮೂರು ಸಭೆಗಳಿಗೆ ಸತತವಾಗಿ ಕೋರಂ ಅಭಾವದ ಉಂಟಾದ ಕಾರಣ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಆಡಳಿತಾಧಿಕಾರಿ ಸಂಘದ ಆಡಳಿತ ಮಂಡಳಿಯನ್ನು 6 ತಿಂಗಳ ಕಾಲ ಅಮಾನತ್ತಿನಲ್ಲಿ ಇರಿಸಿದ್ದಾರೆ. ಅಮಾನತು ಆದೇಶ ಹಿಂಪಡೆದು ಚುನಾವಣೆ ನಡೆಸುವಂತೆ ಉಪ ನಿಬಂಧಕರು ಆದೇಶ ಮಾಡಿದರೆ ಚುನಾವಣೆ ನಡೆಸಲಾಗುವುದು’ ಎಂದು ತಿಳಿಸಿದರು.

ಬೋರಪ್ಪ, ನಿಜಲಿಂಗು, ಶ್ರೀಕಂಠಯ್ಯ, ಭೈರೇಗೌಡ, ಪದ್ಮರಾಜ್, ಸಿ. ಜಗದೀಶ್, ಉಮೇಶ್.ಪಿ, ನಂದೀಶಕುಮಾರ್, ಕೆ.ಆರ್‌. ರವಿ, ಸ್ವಾಮಿ, ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.