ADVERTISEMENT

ಮಂಡ್ಯ: 65 ಮಂದಿಗೆ ಕೋವಿಡ್‌ ದೃಢ, ವ್ಯಕ್ತಿ ಸಾವು

1565ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ, 599 ಪ್ರಕರಣ ಸಕ್ರಿಯ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 15:03 IST
Last Updated 31 ಜುಲೈ 2020, 15:03 IST
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್‌ (ಸಾಂದರ್ಭಿಕ ಚಿತ್ರ)   

ಮಂಡ್ಯ: ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 45 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಮೃತಪಟ್ಟಿದ್ಧಾರೆ. ಕೋವಿಡ್‌ನಿಂದ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.

ಆಲಹಳ್ಳಿ ಬಡಾವಣೆಯ ನಿವಾಸಿ ಜುಲೈ 20ರಂದು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತಾಲ್ಲೂಕಿನ ಸುಂಡಹಳ್ಳಿ ಗ್ರಾಮದ ಬಳಿ ಸ್ಥಳ ಗುರುತಿಸಲಾಗಿದ್ದು ಅಲ್ಲಿ ಕೋವಿಡ್‌ ಕಾರ್ಯಸೂಚಿಯನ್ವಯ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಬೆಂಗಳೂರಿನಲ್ಲಿ ಸಾವು:ಭಾರತೀನಗರ ಸಮೀಪದ ದೇವರಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಕೋವಿಡ್‌ನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತದೇಹವನ್ನು ತಂದು ಗ್ರಾಮದ ಹೊರವಲಯದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮೃತವ್ಯಕ್ತಿಯ ಪುತ್ರನಿಗೂ ಕೋವಿಡ್‌ ದೃಢಪಟ್ಟಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೇವರಹಳ್ಳಿ ಗ್ರಾಮದ ಇವರ ಬೀದಿಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ADVERTISEMENT

65 ಮಂದಿಗೆ ದೃಢ: ಶುಕ್ರವಾರ ಹೊಸದಾಗಿ 65 ಮಂದಿಯಲ್ಲಿ ಕೋವಿಡ್‌–19 ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1565ಕ್ಕೆ ಏರಿಕೆಯಾಗಿದೆ.

ಮಂಡ್ಯ ತಾಲ್ಲೂಕಿನ 34, ಮದ್ದೂರು 14, ನಾಗಮಂಗಲ 9, ಕೆ.ಆರ್‌.ಪೇಟೆ 4, ಶ್ರೀರಂಗಪಟ್ಟಣ 3, ಪಾಂಡವಪುರದ ಒಬ್ಬರಲ್ಲಿ ಕೋವಿಡ್‌ ಪತ್ತೆಯಾಗಿದೆ. ಕೋವಿಡ್‌ನಿಂದ ಮುಕ್ತವಾದ 42 ಮಂದಿಯನ್ನು ಶುಕ್ರವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಶ್ರೀರಂಗಪಟ್ಟಣ 17, ಮದ್ದೂರು 11, ಮಂಡ್ಯ 7, ಪಾಂಡವಪುರ 4, ನಾಗಮಂಗಲ, ಮಳವಳ್ಳಿ ತಾಲ್ಲೂಕಿನ ಒಬ್ಬರನ್ನು ಬಿಡುಡಡೆ ಮಾಡಲಾಗಿದೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ 599 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಜಿಲ್ಲೆಯಲ್ಲಿ ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯ 350 ಹಾಸಿಗೆ ಸಾಮರ್ಥ್ಯದಿಂದ 500ಕ್ಕೆ ಏರಿಕೆ ಮಾಡಲಾಗುತ್ತಿದೆ. ಜೊತೆಗೆ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲೂ ರೋಗಿಗಳನ್ನು ದಾಖಲು ಮಾಡಲಾಗಿದೆ. ಮಳವಳ್ಳಿ ತಾಲ್ಲೂಕಿನ ವಡ್ಡರಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಕೆಎಸ್‌ಆರ್‌ಟಿಸಿ ಭವನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಂಡ್ಯದ ಒಕ್ಕಲಿಗರ ಹಾಸ್ಟೆಲ್‌ನಲ್ಲೂ ರೋಗಿಗಳನ್ನು ದಾಖಲು ಮಾಡಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಹೇಳಿದರು.

ಕೋವಿಡ್‌ ಗೆದ್ದ ಕಲ್ಮನೆ ಕಾಮೇಗೌಡ
ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡರು ಕೋವಿಡ್‌ ಗೆದ್ದಿದ್ದಾರೆ. ಅವರ ವರದಿ ನೆಗೆಟಿವ್‌ ಬಂದಿದ್ದು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲು ಸಿದ್ಧರಾಗುತ್ತಿದ್ದಾರೆ.

‘85 ವರ್ಷ ವಯಸ್ಸಿನ ಕಾಮೇಗೌಡರಿಗೆ ಕೋವಿಡ್‌ ಆಸ್ಪತ್ರೆಯಲ್ಲಿ ಯಾವುದೇ ತೊಂದರೆಯಾಗಲಿಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆ ಇಲ್ಲದ ಕಾರಣ ಅವರು ಬೇಗನೆ ರೋಗ ಮುಕ್ತರಾಗಿದ್ದಾರೆ. ಕಾಲಿನ ಗಾಯಕ್ಕೆ ಚಿಕಿತ್ಸೆ ಮುಂದುವರಿಸಲಾಗಿದ್ದು ಸೋಮವಾರ ಬಿಡುಗಡೆ ಮಾಡಲಾಗುವುದು’ ಎಂದು ಡಿಎಚ್‌ಒ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.