ಶ್ರೀರಂಗಪಟ್ಟಣ: ವೈಕುಂಠ ಏಕಾದಶಿ ನಿಮಿತ್ತ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ವೈಷ್ಣವ ದೇವಾಲಯಗಳಿಗೆ ಶುಕ್ರವಾರ ಹೆಚ್ಚಿನ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಪಟ್ಟಣದ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ಪೂಜಾ ವಿಧಿ, ವಿಧಾನಗಳು ಆರಂಭವಾದವು. ಶ್ರೀರಂಗನಾಥಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯಕ್ಕೆ ಬೆಳಿಗ್ಗೆಯಿಂದ ಸಂಜೆ ವರೆಗೂ ಸಹಸ್ರಾರು ಭಕ್ತರು ಭೇಟಿ ನೀಡಿ ಶ್ರೀರಂಗನಾಥಸ್ವಾಮಿಯ ದರ್ಶನ ಪಡೆದರು. ದೇವಾಲಯ ಹೊರಗೂ ಭಕ್ತರ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು.
ಬನ್ನಹಳ್ಳಿ: ತಾಲ್ಲೂಕಿನ ಬನ್ನಹಳ್ಳಿಯ 10ನೇ ಶತಮಾನದ ತಿರುಮಲ ದೇವಾಲಯದಲ್ಲಿ ಮುಂಜಾನೆ 3 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು. ಬೆಳಿಗ್ಗೆ 9 ಗಂಟೆ ವೇಳೆಗೆ ದೇವಾಲಯ ಮುಂದೆ ಭಕ್ತರ ದಂಡೇ ನೆರೆದಿತ್ತು. ಬನ್ನಹಳ್ಳಿ ಮತ್ತು ಆಸುಪಾಸಿನ ಗ್ರಾಮಗಳು ಹಾಗೂ ಮಂಡ್ಯ, ಮೈಸೂರು, ಬೆಂಗಳೂರು ಇತರ ಕಡೆಗಳಿಂದಲೂ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ದೇಗುಲದ ಪ್ರಾಂಗಣದಲ್ಲಿ ನಿರ್ಮಿಸಿದ್ದ ವೈಕುಂಠ ದ್ವಾರ ಪ್ರವೇಶಿಸಿ ಪುನೀತರಾದರು. ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ದೇವರಿಗೆ ಅಭಿಷೇಕ, ಅರ್ಚನೆಗಳು ನಡೆದವು. ಪ್ರಸಾದ ವಿತರಣೆ ನಡೆಯಿತು. ಹಾಡುಗಾರರು ಭಕ್ತಿ ಗೀತೆ, ದೇವರನಾಮ ಪ್ರಸ್ತುತಪಡಿಸಿದರು.
ತಾಲ್ಲೂಕಿನ ಕರಿಘಟ್ಟದ ವೆಂಕಟರಮಣಸ್ವಾಮಿ ದೇವಾಲಯದಲ್ಲಿ, ಅರ್ಚಕ ಅಭಿಷೇಕ್ ಶ್ರೀನಿವಾಸ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆಗಳು ನಡೆದವು. ಆಸಿಪಾಸಿನ ಗ್ರಾಮಗಳು ಮತ್ತು ನಗರ ಪ್ರದೇಶದ ಭಕ್ತರು ಕೂಡ ಆಗಮಿಸಿ ದರ್ಶನ ಪಡೆದರು. ತಾಲ್ಲೂಕಿನ ದರಸಗುಪ್ಪೆ ಗ್ರಾಮದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವೈಕುಂಠ ದ್ವಾರದ ಮಾದರಿಯನ್ನು ನಿರ್ಮಿಸಲಾಗಿತ್ತು. ದಿನ ಪೂರ್ತಿ ಪೂಜೆ, ಪುನಸ್ಕಾರಗಳು ನಡೆದವು. ಪ್ರಸಾದ ವಿತರಣೆ ನಡೆಯಿತು. ಪಟ್ಟಣದ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿರುವ ಶ್ರೀನಿವಾಸ ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.