ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಟೌನ್ ವ್ಯಾಪ್ತಿಯ ಗಂಜಾಂನಲ್ಲಿ ಕುಲಸ್ಥರ ಮಾತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ಏಳು ದಲಿತ ಕುಟುಂಬಗಳಿಗೆ ದಲಿತ ಕುಲದ ಯಜಮಾನರು ಬಹಿಷ್ಕಾರ ಹಾಕಿ ದಂಡ ವಿಧಿಸಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಗಂಜಾಂನ ಅಂಬೇಡ್ಕರ್ ಬೀದಿಯ ಮಹೇಶ್, ಯಶವಂತಕುಮಾರ್ ಇತರರ ಕುಟುಂಬಗಳು ದೇವಾಲಯದ ಕಾರ್ಯಕ್ರಮಗಳಿಗೆ ವಂತಿಕೆ ಹಣ ಕೊಡದೆ ಕುಲದ ಯಜಮಾನರ ಮಾತಿಗೆ ಎದುರು ಮಾತನಾಡಿದ್ದಾರೆ ಎಂದು ಬಹಿಷ್ಕಾರ ಮತ್ತು ದಂಡದ ಶಿಕ್ಷೆ ವಿಧಿಸಲಾಗಿದೆ ಎನ್ನಲಾಗಿದೆ.
‘ಪುರಸಭೆ ಸದಸ್ಯೆ ಗೀತಾ ಮಹೇಶ್ ಅವರ ಕುಟುಂಬಕ್ಕೂ ಬಹಿಷ್ಕಾರ ಹಾಕಿದ್ದು, ದಂಡ ವಿಧಿಸಲಾಗಿದೆ. ಕುಲದಿಂದ ಬಹಿಷ್ಕಾರಕ್ಕೆ ಒಳಗಾಗಿರುವ ಕುಟುಂಬಗಳ ಜತೆ ಯಾವುದೇ ವ್ಯವಹಾರ ನಡೆಸದಂತೆ ಇಡೀ ಕೇರಿಯ ಜನರಿಗೆ ದಲಿತ ಕುಲಸ್ಥರು ಕಟ್ಟಪ್ಪಣೆ ವಿಧಿಸಿದ್ದಾರೆ. ಇದು ದಲಿತರು ದಲಿತರ ಮೇಲೆ ನಡೆಸಿರುವ ದೌರ್ಜನ್ಯ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮಧ್ಯ ಪ್ರವೇಶಿಸಿ ನಮಗೆ ನ್ಯಾಯ ಕೊಡಿಸಬೇಕು’ ಎಂದು ಯಶವಂತಕುಮಾರ್ ಮನವಿ ಮಾಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಗಂಜಾಂನ ಅಂಬೇಡ್ಕರ್ ಬೀದಿಯಲ್ಲಿ, ಶಿವರಾತ್ರಿ ಆಚರಣೆಗೆಂದು ಪ್ರತಿ ಕುಟುಂಬಕ್ಕೆ ₹ 100 ವಂತಿಕೆ ಕೇಳಿದ್ದರು. ಅದನ್ನು ಇನ್ನೂ ಕೊಟ್ಟಿಲ್ಲ ಎಂಬ ಕಾರಣಕ್ಕೆ ಬಹಿಷ್ಕಾರ ಹಾಕಿದ್ದು, ಮನಸೋ ಇಚ್ಛೆ ದಂಡವನ್ನೂ ಹಾಕಿದ್ದಾರೆ. ಮಹೇಶ್ ಎಂಬವರಿಗೆ ₹25 ಸಾವಿರ ದಂಡ ವಿಧಿಸಿದ್ದು, ಅವರು ದಂಡದ ಹಣ ಕೊಟ್ಟಿಲ್ಲ ಎಂಬ ನೆಪ ಹೇಳಿ ಪುರಸಭೆಯಿಂದ ಅವರು ಬಾಡಿಗೆಗೆ ಪಡೆದಿರುವ ಅಂಗಡಿ ಮಳಿಗೆಯನ್ನೂ ಮುಚ್ಚಿಸಿದ್ದಾರೆ. ಕೂಲಿ ಕೆಲಸ ಮಾಡುವ ಮಂಜಣ್ಣ ಎಂಬವರಿಗೆ ₹15 ಸಾವಿರ ದಂಡ ವಿಧಿಸಿದ್ದಾರೆ.
‘ಗಂಜಾಂನ ಅಂಬೇಡ್ಕರ್ ಕಾಲೊನಿಯ ಯಜಮಾನರು ಕೆಲವು ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕುಲಸ್ಥರು ಮತ್ತು ದೂರುದಾರರನ್ನು ಶನಿವಾರ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುವುದು’ ಎಂದು ಟೌನ್ ಪೊಲೀಸ್ ಠಾಣೆ ಸಿಪಿಐ ಬಿ.ಜಿ. ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.