ADVERTISEMENT

6 ರಾಜ್ಯಗಳಲ್ಲಿ ‘ನಂದಿನಿ’ ಕ್ಷೀರಧಾರೆ: ತಿಂಗಳಿಗೆ ₹75 ಕೋಟಿ ವಹಿವಾಟು

ತಿಂಗಳಿಗೆ ₹75 ಕೋಟಿ ವಹಿವಾಟು: ಹಾಲು ಸಂಗ್ರಹದಲ್ಲಿ ಮಂಡ್ಯಕ್ಕೆ 4ನೇ ಸ್ಥಾನ

ಸಿದ್ದು ಆರ್.ಜಿ.ಹಳ್ಳಿ
Published 29 ಡಿಸೆಂಬರ್ 2024, 0:49 IST
Last Updated 29 ಡಿಸೆಂಬರ್ 2024, 0:49 IST
ನಂದಿನಿ ಹಾಲು 
ನಂದಿನಿ ಹಾಲು    

ಮಂಡ್ಯ: ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ‘ನಂದಿನಿ ಹಾಲು’ ಈಗ ರಾಜ್ಯದ ಆಚೆಗೂ ಕಾಲಿರಿಸಿದ್ದು, 6 ರಾಜ್ಯಗಳಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಿಕೊಂಡು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. 

ಹೌದು, ಈಗ ಹಳ್ಳಿಯಿಂದ ದಿಲ್ಲಿವರೆಗೂ ‘ನಂದಿನಿ’ ಕ್ಷೀರಧಾರೆ ಹರಿಯುತ್ತಿದೆ. ‘ರಾಷ್ಟ್ರದ ರಾಜಧಾನಿ’ ದೆಹಲಿಗೆ ಮಂಡ್ಯದಿಂದ ನಂದಿನಿ ಹಾಲು ಪೂರೈಕೆಯಾದರೆ, ‘ವಾಣಿಜ್ಯ ರಾಜಧಾನಿ’ ಮುಂಬೈಗೆ ತುಮಕೂರಿನಿಂದ ಹಾಲು ಸಾಗಣೆಯಾಗುತ್ತಿದೆ.

‘ಮುತ್ತುಗಳ ನಗರ’ ಹೈದರಾಬಾದ್‌ಗೆ ಹಾಸನದಿಂದ, ಚೆನ್ನೈ ಮತ್ತು ಕೇರಳಕ್ಕೆ ಮೈಸೂರಿನಿಂದ, ತಮಿಳುನಾಡಿನ ನೀಲಗಿರಿ ಮತ್ತು ಕೇರಳಕ್ಕೆ ಚಾಮರಾಜನಗರದಿಂದ, ಗೋವಾ ಮತ್ತು ಪುಣೆಗೆ ಬೆಳಗಾವಿಯಿಂದ, ವಿದರ್ಭ ಮತ್ತು ಸೊಲ್ಲಾಪುರಕ್ಕೆ (ಮಹಾರಾಷ್ಟ್ರ) ವಿಜಯಪುರದಿಂದ ನಂದಿನಿ ಹಾಲು ಪೂರೈಕೆಯಾಗುತ್ತಿದೆ. 

ADVERTISEMENT

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆ.ಎಂ.ಎಫ್‌) ‘ನಂದಿನಿ ಬ್ರ್ಯಾಂಡ್‌’ ವಿಸ್ತರಿಸುವ ಉದ್ದೇಶದಿಂದ ರಾಜ್ಯದ ವಿವಿಧ ಹಾಲು ಉತ್ಪಾದಕರ ಒಕ್ಕೂಟಗಳಿಂದ 6 ರಾಜ್ಯಗಳಿಗೆ ನಿತ್ಯ 4.35 ಲಕ್ಷ ಲೀಟರ್‌ ಹಾಲು, 66 ಸಾವಿರ ಲೀಟರ್‌ ಮೊಸರು ಪೂರೈಸುತ್ತಿದೆ. ಇದರಿಂದ ನಿತ್ಯ 2.47 ಕೋಟಿ ವಹಿವಾಟು ನಡೆಸುತ್ತಿದೆ. ತಿಂಗಳಿಗೆ ಸರಾಸರಿ ₹75 ಕೋಟಿ ವಹಿವಾಟು ಇದೆ. 

26 ಲಕ್ಷ ಹಾಲು ಉತ್ಪಾದಕರು:

ರಾಜ್ಯದ 15 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಡಿ, ಗ್ರಾಮೀಣ ಮಟ್ಟದಲ್ಲಿ ಕಾರ್ಯಾಚರಣೆಯಲ್ಲಿರುವ 15,779ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಎಂಎಫ್‌ 26.89 ಲಕ್ಷ ಹಾಲು ಉತ್ಪಾದಕರನ್ನು ಹೊಂದಿದೆ.

‘ಗೋವಿನಿಂದ ಗ್ರಾಹಕರವರೆಗೆ ಗುಣಮಟ್ಟದ ಶ್ರೇಷ್ಠತೆ’ ಎಂಬುದು ಕೆಎಂಎಫ್‌ ಧ್ಯೇಯವಾಕ್ಯ. ಪ್ರಸ್ತುತ ದೇಶದಲ್ಲಿಯೇ ಸಹಕಾರಿ ಹೈನು ಉದ್ಯಮದಲ್ಲಿ ಕೆಎಂಎಫ್‌ ಎರಡನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದಲ್ಲಿ ಹಾಲು ಶೇಖರಣೆ ಹಾಗೂ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ.

ಮಂಡ್ಯಕ್ಕೆ 4ನೇ ಸ್ಥಾನ:

ನಿತ್ಯ ಹಾಲು ಸಂಗ್ರಹಣೆಯಲ್ಲಿ ರಾಜ್ಯದಲ್ಲಿರುವ 15 ಹಾಲು ಒಕ್ಕೂಟಗಳ ಪೈಕಿ ಬೆಂಗಳೂರು (ಪ್ರಥಮ), ಹಾಸನ (ದ್ವಿತೀಯ), ಕೋಲಾರ (ತೃತೀಯ) ಹಾಗೂ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್‌) 4ನೇ ಸ್ಥಾನದಲ್ಲಿದೆ. 

ಮೈಸೂರು 6ನೇ ಸ್ಥಾನ ಮತ್ತು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ 9ನೇ ಸ್ಥಾನದಲ್ಲಿದೆ. 

ರಾಜ್ಯದ ಹೆಮ್ಮೆಯ ನಂದಿನಿ ಹಾಲಿಗೆ ದೆಹಲಿಯಲ್ಲಿ ಉತ್ತಮ ಬೇಡಿಕೆ ಇದೆ. ಪ್ರಬಲ ಪೈಪೋಟಿ ನಡುವೆಯೂ ತನ್ನ ಗುಣಮಟ್ಟದಿಂದ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ
ಬಿ.ಬೋರೇಗೌಡ ಅಧ್ಯಕ್ಷ ಮನ್‌ಮುಲ್‌ ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.