ADVERTISEMENT

‘ಹಾಲಿಗೆ ರಾಸಾಯನಿಕ ಮಿಶ್ರಣ: ಸಿಬಿಐಗೆ ವಹಿಸಿ’

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 4:10 IST
Last Updated 22 ಜನವರಿ 2022, 4:10 IST
ಹಾಲಿಗೆ ರಾಸಾಯನಿಕ ಮಿಶ್ರಣ ಮಾಡಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಕನ್ನಡ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್‌ ಸ್ವಾಮೀಗೌಡ ಅವರಿಗೆ ಮನವಿ ಸಲ್ಲಿಸಿದರು. ಮಂಜುನಾಥ್‌, ಮಹಾಂತಪ್ಪ, ಶ್ರೀಧರ್‌, ಸೌಭಾಗ್ಯ ಇದ್ದರು
ಹಾಲಿಗೆ ರಾಸಾಯನಿಕ ಮಿಶ್ರಣ ಮಾಡಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಕನ್ನಡ ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್‌ ಸ್ವಾಮೀಗೌಡ ಅವರಿಗೆ ಮನವಿ ಸಲ್ಲಿಸಿದರು. ಮಂಜುನಾಥ್‌, ಮಹಾಂತಪ್ಪ, ಶ್ರೀಧರ್‌, ಸೌಭಾಗ್ಯ ಇದ್ದರು   

ಮಂಡ್ಯ: ಮನ್‌ಮುಲ್‌ನಲ್ಲಿ ಹಾಲಿಗೆ ನೀರು ಬೆರೆಸಿರುವ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿರುವಾಗಲೇ ಹಾಲಿಗೆ ರಾಸಾಯನಿಕ ಮಿಶ್ರಣ ಮಾಡಿರುವ ಹಗರಣ ಬೆಳಕಿಗೆ ಬಂದಿದ್ದು, ಅದರ ತನಿಖೆಯನ್ನೂ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕನ್ನಡ ಸೇನೆ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ತಹಶೀಲ್ದಾರ್‌ ಸ್ವಾಮೀಗೌಡ ಅವರಿಗೆ ಕಾರ್ಯಕರ್ತರು ಮನವಿ ಸಲ್ಲಿಸಿದರು.

ಎರಡೂ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.ಹಾಲಿಗೆ ನೀರು ಮಿಶ್ರಣ ಮಾಡಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆಸಿರುವ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿರುವ ನಡುವೆಯೇ ಮನ್‌ಮುಲ್‌ ವ್ಯಾಪ್ತಿಯಲ್ಲಿ ಮತ್ತೊಂದು ಹಗರಣ ಬೆಳಕಿಗೆ ಬಂದಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮದ್ದೂರು ತಾಲ್ಲೂಕಿನ ಕೆ.ಹೊನ್ನಲಗೆರೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಚೌಡೇಶ್ವರಿ ಹಾಲು ಶೇಖರಣಾ ಮಾರ್ಗದ ಮೂಲಕ ಸರಬರಾಜಾಗುವ ಹಾಲಿನಲ್ಲಿ ಉಪ್ಪಿನಂಶ ರಾಸಾಯನಿಕ ಕಲಬೆರಕೆ ಆಗಿರುವುದನ್ನು ಒಕ್ಕೂಟದ ಅಧಿಕಾರಿಗಳೇ ಪತ್ತೆ ಮಾಡಿ ನೋಟೀಸ್‌ ನೀಡಿದ್ದಾರೆ. ಈ ಸಂಘದಿಂದ ನೀಡುತ್ತಿರುವ ಹಾಲು ಸ್ವೀಕರಿಸುವುದನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಇದು ಅಕ್ಷಮ್ಯ ಅಪರಾಧವಾಗಿದ್ದು, ಮನ್‌ಮುಲ್‌ನಲ್ಲಿ ಅಕ್ರಮ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.

ಹಾಲಿಗೆ ಉಪ್ಪಿನಂಶದ ರಾಸಾಯನಿಕ ಕಲಬೆರೆಕೆ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಮಂಡ್ಯ ಜಿಲ್ಲೆ ಕೃಷಿ ಮತ್ತು ಹೈನುಗಾರಿಕೆ ಆಧಾರಿತ ಜಿಲ್ಲೆಯೂ ಹೌದು. ಮೈಷುಗರ್ ಕಾರ್ಖಾನೆ ಆರಂಭವಾಗದೆ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೆ ಪರಿತಪಿಸುವಂತಾಗಿದೆ ಎಂದು ಖಂಡಿಸಿದರು.

ಹಾಲಿನ ಸರಬರಾಜಿಗೆ ಖಾಸಗಿ ಟ್ಯಾಂಕರ್‌ಗಳನ್ನು ಮಂಡ್ಯ ಹಾಲು ಒಕ್ಕೂಟದಲ್ಲಿ ಬಳಸಿ ಬೇಕಾಬಿಟ್ಟಿ ನೀರು ಮಿಶ್ರಣ ಮಾಡುವ ಮೂಲಕ ಪ್ರತಿದಿನ ಮೂರು ಲಕ್ಷ ಲೀಟರ್ ಹಾಲನ್ನು ಕದ್ದು ಮಾರಿಕೊಳ್ಳುತ್ತಿದ್ದ ಬಹುದೊಡ್ಡ ಹಗರಣ ಕಳೆದ ವರ್ಷ ಬೆಳಕಿಗೆ ಬಂದಿತ್ತು. ಅಲ್ಲದೆ, ನಂದಿನಿ ಹಾಲಿನ ಬಗ್ಗೆ ಅನುಮಾನ ಮೂಡುವಂತಾಗಿದ್ದು, ಇದಕ್ಕೆ ಪುಷ್ಟಿ ನೀಡುವಂಥ ಪ್ರಕರಣಗಳ ನಡೆಯುತ್ತಿರುವುದಕ್ಕೆ ಭ್ರಷ್ಟಾಚಾರವೇ ಕಾರಣ. ಇದಕ್ಕೆ ತಕ್ಷಣ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಮನ್‌ಮುಲ್‌ ಹಗರಣಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಈಗ ನಡೆದಿರುವ ಪ್ರಕರಣದ ಸೂಕ್ತ ತನಿಖೆ ನಡೆಬೇಕು. ಎಷ್ಟು ದಿನದಿಂದ ಹಾಲು ಕಲಬೆರೆಕೆ ನಡೆಯುತ್ತಿದೆ, ಎಷ್ಟು ಜನ ಶಾಮೀಲಾಗಿದ್ದಾರೆ ಎಂಬ ಬಗ್ಗೆ ಬಹಿರಂಗಪಡಿಸಬೇಕು. ಡೇರಿಯಲ್ಲಿ ನಡೆದಿರುವ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು. ಕ್ರಮ ಕೈಗೊಳ್ಳದೆ ಇದ್ದರೆ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಸಿ.ಮಂಜುನಾಥ್, ಮಹಾಂತಪ್ಪ, ಎಂ.ಆರ್.ಶ್ರೀಧರ್, ಆರ್‌.ಸೌಭಾಗ್ಯ, ಶಿವಾಲಿ, ಬಿ.ಎಸ್‌.ಮಂಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.