ADVERTISEMENT

ಶ್ರೀರಂಗಪಟ್ಟಣ: ಬಹು ಬಗೆಯ ಸಿರಿಧಾನ್ಯ ಸಂಸ್ಕರಣಾ ಯಂತ್ರ ಅಭಿವೃದ್ಧಿ

ಗಣಂಗೂರು ನಂಜೇಗೌಡ
Published 29 ಫೆಬ್ರುವರಿ 2024, 6:17 IST
Last Updated 29 ಫೆಬ್ರುವರಿ 2024, 6:17 IST
ಶ್ರೀರಂಗಪಟ್ಟಣ ಸಮೀಪದ ಗಂಜಾಂನ ರೈತ ಹಾಗೂ ಉದ್ಯಮಿ ಟಿ. ಮನೋಹರ್‌ ಅವರು ಸಿದ್ದಪಡಿಸಿರುವ ಬಹು ಬಗೆಯ ಸಿರಿಧಾನ್ಯ ಸಂಸ್ಕರಣಾ ಯಂತ್ರ
ಶ್ರೀರಂಗಪಟ್ಟಣ ಸಮೀಪದ ಗಂಜಾಂನ ರೈತ ಹಾಗೂ ಉದ್ಯಮಿ ಟಿ. ಮನೋಹರ್‌ ಅವರು ಸಿದ್ದಪಡಿಸಿರುವ ಬಹು ಬಗೆಯ ಸಿರಿಧಾನ್ಯ ಸಂಸ್ಕರಣಾ ಯಂತ್ರ   

ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಗಂಜಾಂನ ರೈತ ಹಾಗೂ ಉದ್ಯಮಿ ಟಿ. ಮನೋಹರ್‌ ಮೇಕ್‌ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಬಹು ಬಗೆಯ ಸಿರಿಧಾನ್ಯ ಸಂಸ್ಕರಣಾ ಯಂತ್ರವನ್ನು ಸಿದ್ದಪಡಿಸಿದ್ದಾರೆ.

ಸಿರಿಧಾನ್ಯ (ಮಿಲೆಟ್‌) ಗಳಾದ ನವಣೆ, ಸಜ್ಜೆ, ಆರ್ಕಾ, ಕೊರಲೆ, ಬರಗು, ಊದಲು ಧಾನ್ಯಗಳನ್ನು ಒಂದೇ ಯಂತ್ರದಲ್ಲಿ ಸಂಸ್ಕರಿಸುವ ವಿನೂತನ ಯಂತ್ರವನ್ನು ಇವರು ಸಿದ್ದಪಡಿಸಿದ್ದು, ಇದು ದೇಶದಲ್ಲೇ ಮೊದಲ ಎಂಬ ಹೆಗ್ಗಳಿಕೆ ಪಡೆದಿದೆ. ಪೌಷ್ಠಿಕಾಂಶ ನಷ್ಟ ಆಗದಂತೆ ಸಿರಿಧಾನ್ಯಗಳನ್ನು ಈ ಯಂತ್ರದಲ್ಲಿ ಸಂಸ್ಕರಿಸಬಹುದಾಗಿದೆ. ಇವರು ಸಿದ್ದಪಡಿಸಿರುವ ಈ ಯಂತ್ರವನ್ನು ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಮಿಲೆಟ್‌ ರೀಸರ್ಚ್‌ (ಐಐಎಂಆರ್‌) ಸಂಸ್ಥೆ ಖರೀದಿಸಿದೆ. ತೆಲಂಗಾಣದ ಜಾಹೀರಾಬಾದ್‌ನ ‘ಮಿಲೆಟ್‌ ಮ್ಯಾನ್‌’ ಎಂದು ಹೆಸರಾದ ವೀರಾಶೆಟ್ಟಿ ಕೂಡ ಇವರಿಂದ ಈ ಯಂತ್ರವನ್ನು ಖರೀದಿಸಿದ್ದಾರೆ.

ಕರ್ನಾಟಕದಲ್ಲಿ ಸಿರಿಧಾನ್ಯ ಬೆಳೆಯುವ ಚಿತ್ರದುರ್ಗ, ಹಾವೇರಿ, ತುಮಕೂರು ಜಿಲ್ಲೆಗಳು ಮಾತ್ರವಲ್ಲದೆ ಉತ್ತರಪ್ರದೇಶ ಮತ್ತು ಒಡಿಶಾ ರಾಜ್ಯಗಳಿಗೂ ಈ ಯಂತ್ರ ಮಾರಾಟವಾಗುತ್ತಿವೆ. ಅಸ್ಸಾಂ ಮತ್ತು ಮಧ್ಯಪ್ರದೇಶದಿಂದಲೂ ಬೇಡಿಕೆ ಬಂದಿದೆ ಎಂದು ಮನೋಹರ್‌ ಹೇಳುತ್ತಾರೆ.

ADVERTISEMENT

ಸಿರಿಧಾನ್ಯಗಳ ಮೌಲ್ಯ ವರ್ಧನೆ ಮಾಡಿ ಮಾರಾಟ ಮಾಡುವ ಕೋಲಾರ ಜಿಲ್ಲೆ ಕೆಜಿಎಫ್‌ನ ಇಸಾಯಿ ಫುಡ್ಸ್‌ ಮತ್ತು ಕಡಪಾದ ಅವನಿ ಆರ್ಗ್ಯಾನಿಕ್ಸ್‌ ಸಂಸ್ಥೆಗಳು ಕೂಡ ಇವರಿಂದ ಬಹು ವಿಧಧ ಸಿರಿಧಾನ್ಯ ಸಂಸ್ಕರಣೆ ಯಂತ್ರವನ್ನು ಖರೀದಿಸಿವೆ. ಸಿರಿಧಾನ್ಯ ಸಂಸ್ಕರಣಾ ಘಟಕಗಳಿಗೆ ಆತ್ಮ ನಿರ್ಭರ್‌ ಭಾರತ್‌ ಯೋಜನೆಯಡಿ ಸರ್ಕಾರದಿಂದ ಶೇ 50ರಷ್ಟು ಸಹಾಯ ಧನ ಸಿಗುತ್ತಿರುವುದರಿಂದ ಈ ಯಂತ್ರಕ್ಕೆ ಬೇಡಿಕೆ ಕುದುರಿದೆ.

ಮನೋಹರ್‌ ಅವರ ಈ ವಿಶೇಷ ಸಂಶೋಧನೆಗಾಗಿ ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವ ವಿದ್ಯಾನಿಲಯ 2024ನೇ ಸಾಲಿನ ‘ಬೆಸ್ಟ್‌ ಮಿಲೆಟ್‌ ಮಿಷನರಿ ಪ್ರಶಸ್ತಿ’ ನೀಡಿ ಗೌರವಿಸಿದೆ. ಗಂಜಾಂನ ಭವಾನಿ ಇಂಡಸ್ಟ್ರೀಸ್‌ ಹೆಸರಿನ ಘಟಕದಲ್ಲಿ ಹಲವು ವರ್ಷಗಳಿಂದ ಭತ್ತ, ರಾಗಿ, ದ್ವಿದಳ ಧಾನ್ಯ ಸಂಸ್ಕರಣಾ ಯಂತ್ರಗಳನ್ನು ಸಿದ್ದಪಡಿಸುತ್ತಿರುವ ಮನೋಹರ್‌ ಇದೀಗ ಬಹು ಬಗೆಯ ಸಿರಿಧಾನ್ಯಗಳ ಸಂಸ್ಕರಣಾ ಯಂತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ಗಂಜಾಂನ ಭವಾನಿ ಇಂಡಸ್ಟ್ರೀಸ್‌ 3 ಎಚ್‌ಪಿಯಿಂದ 10 ಎಚ್‌ಪಿ ಸಾಮರ್ಥ್ಯದ ವರೆಗೆ ಬಹು ವಿಧದ ಸಿರಿಧಾನ್ಯ ಸಂಸ್ಕರಣಾ ಯಂತ್ರವನ್ನು ಸಂಶೋಧಿಸಿದೆ. ಗೃಹ ಬಳಕೆಗಾಗಿ ಅರ್ಧ ಎಚ್‌ಪಿ ಸಾಮರ್ಥ್ಯದ, ಕಡಿಮೆ ಬೆಲೆಯ ಯಂತ್ರವನ್ನೂ ಸಿದ್ದಪಡಿಸಲಾಗಿದೆ. ಎಲ್ಲ ಬಗೆಯ ಸಿರಿಧಾನ್ಯಗಳನ್ನು ಒಂದೇ ಯಂತ್ರದಲ್ಲಿ ಸಂಸ್ಕರಣೆ ಮಾಡಲು ಸಾಧ್ಯ ಇದ್ದು, ಒಂದು ವರ್ಷದಲ್ಲಿ 50ಕ್ಕೂ ಹೆಚ್ಚು ಯಂತ್ರಗಳು ಮಾರಾಟವಾಗಿವೆ’ ಎಂದು ಮನೋಹರ್‌ ಹೇಳುತ್ತಾರೆ. ಸಂಪರ್ಕಕ್ಕೆ ಮೊ:9448052150.

ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವ ವಿದ್ಯಾನಿಲಯದಿಂದ 2024ನೇ ಸಾಲಿನ ‘ಬೆಸ್ಟ್‌ ಮಿಲೆಟ್‌ ಮಿಷನರಿ ಅವಾರ್ಡ್‌’ ಬಂದಿದ್ದು ಪ್ರಶಸ್ತಿಯ ಜತೆಗೆ ಟಿ. ಮನೋಹರ್
ಒಂದೇ ಯಂತ್ರದಲ್ಲಿ ಸಂಸ್ಕರಣೆಗೆ ಅನುಕೂಲ ಜಿಲ್ಲೆ, ಹೊರರಾಜ್ಯದಿಂದಲೂ ಬೇಡಿಕೆ ಮೌಲ್ಯವರ್ಧನೆಗೊಳಿಸಲು ಮಾರಾಟ ಮಾಡಲು ಉಪಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.