ADVERTISEMENT

ಪಾಂಡವಪುರ: ಧರ್ಮಸ್ಥಳದ ವಿರುದ್ಧ ಆಪಪ್ರಚಾರ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 3:54 IST
Last Updated 22 ಆಗಸ್ಟ್ 2025, 3:54 IST
 ಧರ್ಮಸ್ಥಳದ ವಿರುದ್ಧ ಅಪಪ್ರಚಾರ ವಿರೋಧಿಸಿ ಪಾಂಡವಪುರ ತಾಲ್ಲೂಕು ಆಡಳಿತ ಸೌಧಧ ಎದುರು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಹಾಗೂ ಭಕ್ತರು ಪ್ರತಿಭಟನೆ ನಡೆಸಿದರು
 ಧರ್ಮಸ್ಥಳದ ವಿರುದ್ಧ ಅಪಪ್ರಚಾರ ವಿರೋಧಿಸಿ ಪಾಂಡವಪುರ ತಾಲ್ಲೂಕು ಆಡಳಿತ ಸೌಧಧ ಎದುರು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಹಾಗೂ ಭಕ್ತರು ಪ್ರತಿಭಟನೆ ನಡೆಸಿದರು   

ಪಾಂಡವಪುರ: ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡುವ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳದ ಭಕ್ತ ವೃಂದದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಐದು ದೀಪ ವೃತ್ತದ ಬಳಿ ಜಮಾಯಿಸಿದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಹಾಗೂ ಧರ್ಮಸ್ಥಳ ಕ್ಷೇತ್ರದ ಭಕ್ತರು, ಡಾ.ರಾಜ್‌ಕುಮಾರ್ ವೃತ್ತ, ಹಳೆಯ ಬಸ್‌ ನಿಲ್ದಾಣ, ಡಿಸಿಸಿ ಬ್ಯಾಂಕ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ತಾಲ್ಲೂಕು ಆಡಳಿತ ಸೌಧದಕ್ಕೆ ಮುತ್ತಿಗೆ ಹಾಕಿದರು.

ಅಪಪ್ರಚಾರದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ದ ಕಠಿಣ ಕಾನೂನು ಕ್ರಮವಹಿಸುವಂತೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪವಿತ್ರ ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ವ್ಯವಸ್ಥಿತವಾದ ಪಿತೂರಿ ನಡೆಯುತ್ತಿದ್ದು, ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗುತ್ತಿದ್ದೆ. ಒಬ್ಬ ಅನಾಮಿಕನ ಹೇಳಿಕೆ ಆಧರಿಸಿ ಕ್ಷೇತ್ರದ ಪಾವಿತ್ರ್ಯತೆ ಹಾಳು ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ADVERTISEMENT

ಧರ್ಮಸ್ಥಳಕ್ಕೆ ರ್‍ಯಾಲಿ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಆ.25ರಂದು ಮಂಡ್ಯ ಮತ್ತು ಮೈಸೂರು ಭಾಗದ ಸಾವಿರಾರು ಭಕ್ತರು ನೂರಾರು ಕಾರುಗಳಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ತೆರಳುವ ಸಂಕಲ್ಪ ಮಾಡಲಾಗಿದೆ. ಈ ರ‍್ಯಾಲಿಗೆ ಪಕ್ಷಾತೀತವಾಗಿ ಆಗಮಿಸಬೇಕು. ಅಂದು ಬೆಳಿಗ್ಗೆ 4.30 ಗಂಟೆಗೆ ಕೆಆರ್‌ಎಸ್‌ನಿಂದ ಇಲವಾಲಕ್ಕೆ ಕಾರು ರ‍್ಯಾಲಿ ಹೊರಟು ಅಲ್ಲಿಂದ ಧರ್ಮಸ್ಥಳಕ್ಕೆ ಹೊರಡಲಾಗುವುದು. ಮಂಜುನಾಥನ ಆಶೀರ್ವಾದ ಪಡೆದು ವಿರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ಸೂಚಿಸಲಾಗುವುದು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ ಬಾಬು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಲ್.ಆನಂದ್, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಮಂಗಳ ನವೀನ್, ಕ್ಷೇತ್ರಾಧ್ಯಕ್ಷ ಧನಂಜಯ, ಕಾರ್ಯದರ್ಶಿ ಪುರುಷೋತ್ತಮ್, ಮುಖಂಡರಾದ ಎಚ್.ಎನ್.ಮಂಜುನಾಥ್, ಜೆ.ಶಿವಲಿಂಗೇಗೌಡ, ಶ್ರೀನಿವಾಸ್ ನಾಯ್ಕ, ಎಸ್.ಎನ್.ಟಿ.ಸೋಮಶೇಖರ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎ.ಮಲ್ಲೇಶ್, ಮುಖಂಡ ಎಚ್.ಮಂಜುನಾಥ್, ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.