ಕೆ.ಆರ್.ಪೇಟೆ: ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟ ತಾಲ್ಲೂಕಿನ ಹರಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀತಮಂಗಲ ಗ್ರಾಮದ ನಂಜುಂಡಯ್ಯ ಅವರ ಪುತ್ರ ಎನ್. ರಘು (36) ಅವರ ಅಂಗಾಂಗಗಳನ್ನು ಕುಟುಂಬ ದಾನ ನೀಡಿದೆ. ಅಂಗಾಂಗ ದಾನ ಮೂಲಕ ರಘು ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ. ಅವರ ಕುಟುಂಬ ಕೂಡ ಮಾನವೀಯತೆ ಮೆರೆಯುವ ಮೂಲಕ ಮಾದರಿ ಕೆಲಸ ಮಾಡಿದೆ.
ಜೂನ್ 26ರಂದು ರಘು ನೀತಮಂಗಲ ಗ್ರಾಮದಲ್ಲಿ ನಡೆದು ಹೋಗುವಾಗ ಹಿಂದಿನಿಂದ ಬಂದ ಬೈಕ್ ಗುದ್ದಿ ಗಾಯಗೊಂಡು, ಕೋಮಾ ತಲುಪಿದ್ದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದರೂ ಅವರು ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಪ್ರಜ್ಞೆ ಕೂಡ ಮರಳಿರಲಿಲ್ಲ. ರಘು ಅವರ ಮಿದುಳು ನಿಸ್ಕ್ರಿಯಗೊಂಡಿರುವುದಾಗಿ ವೈದ್ಯರು ಘೋಷಿಸಿದ್ದರು. ಇದರಿಂದ ಕುಟುಂಬದವರು ರಘು ಅವರ ಅಂಗಾಂಗಗಳನ್ನು ದಾನ ನೀಡಿದರು.
ರಘು ಮೊದಲಿನಿಂದಲೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ. ಅಕಾಲಿಕ ಸಾವಿಗೆ ತುತ್ತಾಗಿದ್ದರಿಂದ ಆತನ ದೇಹದ ಅಂಗಾಂಗಗಳನ್ನು ದಾನ ಮಾಡಲು ನಿಶ್ಚಯಿಸಿದೆವು. ರಘು ಹೃದಯ, ಹೃದಯದ ವಾಲ್ವ್‌ಗಳು, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ ಮತ್ತಿತರ ಅಂಗಾಗಗಳನ್ನು ಅಪೊಲೊ ಆಸ್ಪತ್ರೆಗೆ ದಾನ ನೀಡಲಾಯಿತೆಂದು ರಘು ಅವರ ತಂದೆ ನಂಜುಂಡಯ್ಯ, ತಾಯಿ ಬೋರಮ್ಮ, ಪತ್ನಿ ಆಶಾ ರಾಣಿ ಮತ್ತು ರಘು ಸಹೋದರ ಪ್ರದೀಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ರಘು ಅವರಿಗೆ ಅಕ್ಷಯ್ ಮೌರ್ಯ (8) ಸಿದ್ದಾರ್ಥ ಮೌರ್ಯ (5) ಎಂಬ ಇಬ್ಬರು ಪುತ್ರರಿದ್ದಾರೆ.
ಮೃತರ ಅಂತ್ಯಸಂಸ್ಕಾರ ಸ್ವಗ್ರಾಮದಲ್ಲಿ ಮಂಗಳವಾರ ನಡೆಯಿತು. ನೂರಾರು ಮಂದಿ ಭಾಗವಹಿಸಿ ಅಂತಿಮ ದರ್ಶನ ಪಡೆದರಲ್ಲದೆ, ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ರಘು ಮತ್ತು ಆತನ ಕುಟುಂಬದವರನ್ನು ಪ್ರಶಂಸಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.