ADVERTISEMENT

‘ಡಿಜಿಟಲ್‌ ವೇಗ ನಿಯಂತ್ರಣ ಅಳವಡಿಸಿ’

ರಸ್ತೆ ಅಪಘಾತ ನಿಯಂತ್ರಣಕ್ಕೆ ಸುರಕ್ಷತಾ ಕ್ರಮ ಪಾಲಿಸಿ: ಅಭಯ್‌ ಮನೋಹರ್‌ ಸಪ್ರೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 5:04 IST
Last Updated 21 ಡಿಸೆಂಬರ್ 2025, 5:04 IST
ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ-275ರಲ್ಲಿ ರಸ್ತೆ ಸುರಕ್ಷತೆ ಕುರಿತು ಸುಪ್ರೀಂಕೋರ್ಟ್‌ನ ರಸ್ತೆ ಸುರಕ್ಷತಾ ಸಲಹಾ ಸಮಿತಿ ಅಧ್ಯಕ್ಷ ಅಭಯ್‌ ಮನೋಹರ್‌ ಸಪ್ರೆ ಅವರು ಪರಿಶೀಲಿಸಿದರು. ಜಿಲ್ಲಾಧಿಕಾರಿ ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಇದ್ದರು 
ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ-275ರಲ್ಲಿ ರಸ್ತೆ ಸುರಕ್ಷತೆ ಕುರಿತು ಸುಪ್ರೀಂಕೋರ್ಟ್‌ನ ರಸ್ತೆ ಸುರಕ್ಷತಾ ಸಲಹಾ ಸಮಿತಿ ಅಧ್ಯಕ್ಷ ಅಭಯ್‌ ಮನೋಹರ್‌ ಸಪ್ರೆ ಅವರು ಪರಿಶೀಲಿಸಿದರು. ಜಿಲ್ಲಾಧಿಕಾರಿ ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಇದ್ದರು    

ಮಂಡ್ಯ: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ-275ರಲ್ಲಿ ವಾಹನಗಳ ಹೆಚ್ಚಿನ ವೇಗವನ್ನು ನಿಯಂತ್ರಿಸಲು ಡಿಜಿಟಲ್ ವೇಗ ನಿಯಂತ್ರಣಗಳನ್ನು ಅಳವಡಿಸಿ ಎಂದು ಸುಪ್ರೀಂಕೋರ್ಟ್‌ನ ರಸ್ತೆ ಸುರಕ್ಷತಾ ಸಲಹಾ ಸಮಿತಿ ಅಧ್ಯಕ್ಷ ಅಭಯ್‌ ಮನೋಹರ್‌ ಸಪ್ರೆ ಸೂಚನೆ ನೀಡಿದರು. 

ಸರ್ಕಾರದ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯರೊಂದಿಗೆ ಶನಿವಾರ ರಾಷ್ಟ್ರೀಯ ಹೆದ್ದಾರಿ-275ರ ರಸ್ತೆ ಸುರಕ್ಷತಾ ಕ್ರಮಗಳನ್ನು ಪರಿಶೀಲನೆ ನಡೆಸಿ ಅವರು ಕೆಲವು ಸೂಚನೆಗಳನ್ನು ನೀಡಿದರು. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಹೆದ್ದಾರಿಯಲ್ಲಿ ಗಂಭೀರ ರಸ್ತೆ ಅಪಘಾತಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಹೆಚ್ಚಿನ ಕ್ರಮಗಳ ಬಗ್ಗೆ ಮಹತ್ವಪೂರ್ಣ ಚರ್ಚೆಗಳನ್ನು ನಡೆಸಿದರು. 

ವೇಗ ನಿಯಂತ್ರಣ ಮಾನಿಟರಿಂಗ್ ವ್ಯವಸ್ಥೆಗಳಲ್ಲಿನ ಕ್ರಮಗಳನ್ನು ಕಠಿಣಗೊಳಿಸಬೇಕು, ಹಲವು ಅಪಘಾತಗಳು ಸಂಭವಿಸುವ ಪ್ರದೇಶಗಳಲ್ಲಿ, ಸಾಕಷ್ಟು ಚುಟುಕು ಮತ್ತು ಸ್ಪಷ್ಟ ಗಾತ್ರದ ಸೂಚನೆ ಫಲಕಗಳನ್ನು ಅಳವಡಿಸಬೇಕು. ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಮಾಧ್ಯಮ ಟ್ರೈನಿಂಗ್ ಕಾರ್ಯಕ್ರಮಗಳನ್ನು ನಡೆಸಬೇಕು. ಹೆಚ್ಚಿನ ವೇಗ ತಡೆಗಟ್ಟುವ ನಿಟ್ಟಿನಲ್ಲಿ ‘ರೋಡ್‌ ಲೇನ್‌ ಡಿಸಿಪ್ಲಿನ್‌’ ಕ್ರಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು. 

ADVERTISEMENT

ಜಿಲ್ಲಾಧಿಕಾರಿ ಕುಮಾರ, ಸಾರಿಗೆ ಇಲಾಖೆ ಆಯುಕ್ತ ಎ.ಎಂ. ಯೋಗೀಶ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಎಸ್ಪಿ ತಿಮ್ಮಯ್ಯ, ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಎಂ.ಎಸ್. ಒಬಾಲೆ ಮುಂತಾದವರು ಪಾಲ್ಗೊಂಡಿದ್ದರು. 

ರಸ್ತೆ ಅಪಘಾತ ಇಳಿಕೆ: ಮೆಚ್ಚುಗೆ  ಎಐ ಕ್ಯಾಮೆರಾಗಳನ್ನು ಅಳವಡಿಸಿದ ನಂತರ ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷದಲ್ಲಿ ರಾಷ್ಟ್ರೀಯ ಹೆದ್ದಾರಿ-275ರಲ್ಲಿ ರಸ್ತೆ ಅಪಘಾತಗಳು ಕಡಿಮೆಯಾಗಿರುವುದನ್ನು ಪರಿಶೀಲಿಸಿ ಸುಪ್ರೀಂಕೋರ್ಟ್‌ನ ರಸ್ತೆ ಸುರಕ್ಷತಾ ಸಲಹಾ ಸಮಿತಿ ಅಧ್ಯಕ್ಷ ಅಭಯ್‌ ಮನೋಹರ್‌ ಸಪ್ರೆ ಪ್ರಶಂಸಿಸಿದರು.  ಎಐ ಕ್ಯಾಮೆರಾಗಳ ಸ್ಥಿತಿಗತಿಯ ಪರಿಶೀಲನೆ ನಡೆಸಿ ಸುರಕ್ಷತಾ ಕ್ಯಾಮೆರಾಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಹಾಗೂ ಸದರಿ ಕ್ಯಾಮೆರಾಗಳು ಸರಾಗವಾಗಿ ಕಾರ್ಯನಿರ್ವಹಿಸಲು ಇ–ಡಿವೈಸ್‌ಗಳಿಗೆ ತಾಂತ್ರಿಕ ಅಪ್‌ಡೇಟ್‌ ಮಾಡುತ್ತಿರಬೇಕು ಎಂದು ಸೂಚಿಸಿದರು.  ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಮೂಲಕ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಿ  ದೇಶದ ಮುಖ್ಯ ರಸ್ತೆಗಳ ಸುರಕ್ಷತೆಯನ್ನು ಉತ್ತಮಗೊಳಿಸುವಂತೆ ಹಾಜರಿದ್ದ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.