
ಮದ್ದೂರು: ಪಟ್ಟಣದ ಸಂಜಯ ಚಿತ್ರಮಂದಿರದ ಬಳಿಯ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷರು ಮತ್ತು ವ್ಯವಸ್ಥಾಪಕರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ನಿರ್ದೇಶಕರು, ಬ್ಯಾಂಕಿನ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಬ್ಯಾಂಕ್ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ಅವರ ವಿರುದ್ಧ ಘೋಷಣೆ ಕೂಗಿದರು.
ನಿರ್ದೇಶಕ ಸಿದ್ದೇಗೌಡ ಮಾತನಾಡಿ, ‘ಮೇ 6ರಂದು ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಿ ವಿಷಯ 1, ಮತ್ತು 2ಕ್ಕೆ ಒಪ್ಪಿಗೆ ನೀಡಿ, ನಂತರ ವಿಷಯ 3 ರಿಂದ 11ವರೆಗಿನ ವಿಷಯಗಳನ್ನು ತಿರಸ್ಕರಿಸಿದ್ದು ಈ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷರಿಗೆ ನೀಡಿದ್ದು, ಅದಕ್ಕೆ ಅಧ್ಯಕ್ಷರು ನಮ್ಮ ಪತ್ರಕ್ಕೆ ಸಹಿ ಹಾಕಿ ಸಭೆಯನ್ನು ಮುಂದೂಡುತ್ತೇನೆಂದು ಹೇಳಿದ ಮೇಲೆ ನಾವುಗಳು ಸಭೆಯಿಂದ ಹೊರ ಬಂದೆವು ಆದರೆ, ನಂತರ ಅಧ್ಯಕ್ಷ ಮತ್ತು ವ್ಯವಸ್ಥಾಪಕರು ನಡಾವಳಿಯನ್ನು ಬರೆದುಕೊಂಡು ತೀರ್ಮಾನ ಕೈಗೊಂಡಿದ್ದು, ಆಡಳಿತ ಮಂಡಳಿ ನಿರ್ದೇಶಕರಿಗೆ ಅವಮಾನ ಮಾಡಿದ್ದರೆ’ ಎಂದು ಆಕ್ರೋಶ ಹೊರ ಹಾಕಿದರು.
‘ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧರಿಗೆ ಪತ್ರ ಬರೆದಿದ್ದರೂ ಸಹ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಬ್ಯಾಂಕ್ ಈಗಾಗಲೇ ನಷ್ಟದಲ್ಲಿದ್ದು ಅಡಳಿತ ಮಂಡಳಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದರೂ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರು ಬ್ಯಾಂಕಿನ ನಿಯಮಗಳನ್ನು ಗಾಳಿಗೆ ತೂರಿದ್ದಾರೆ’ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ನಿರ್ದೇಶಕರಾದ ಸಿದ್ದರಾಮು, ಗೌರಮ್ಮ, ಕೃಷ್ಣ, ಸವಿತಾ, ಕೃಷ್ಣಪ್ಪ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.