ಮದ್ದೂರು ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ₹1,146 ಕೋಟಿ ಮೊತ್ತದ 87 ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯ ಸೌಲಭ್ಯವನ್ನು ಫಲಾನುಭವಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು.
–ಪ್ರಜಾವಾಣಿ ಚಿತ್ರ
ಮದ್ದೂರು: ‘ಈ ಮದ್ದೂರಿಗೆ ದೊಡ್ಡ ಇತಿಹಾಸವಿದೆ. ಬ್ರಿಟಿಷರ ಆಳ್ವಿಕೆ ಸಮಯದಲ್ಲಿ ಎಸ್.ಎಂ. ಕೃಷ್ಣ ಅವರ ತಂದೆ ಮಲ್ಲಯ್ಯ ಅವರು ಮೈಸೂರು ಆಳ್ವಿಕೆಯಲ್ಲಿ ಜನಪ್ರತಿನಿಧಿಯಾಗಿ ಆಳ್ವಿಕೆ ಮಾಡಿದ್ದರು. ಇದು ದೇಶದ ಸ್ವಾತಂತ್ರ್ಯ ಹೋರಾಟದ ನೆಲ. ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದ ನೆಲ. ಈ ಜಿಲ್ಲೆಯಿಂದ ಅನೇಕ ನಾಯಕರು ಬೆಳೆದು ಬಂದಿದ್ದಾರೆ. ಈ ನೆಲದಲ್ಲಿ ನಾನು ಎಸ್.ಎಂ ಕೃಷ್ಣ ಅವರನ್ನು ನೆನೆಯುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮದ್ದೂರು ಪಟ್ಟಣದಲ್ಲಿ ಸೋಮವಾರ ₹1,146 ಕೋಟಿ ಮೊತ್ತದ 87 ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೃಷ್ಣ ಆವರು ಕೈಗಾರಿಕಾ ಸಚಿವರಾಗಿದ್ದಾಗ ಈ ಭಾಗದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸಿ ಇಲ್ಲಿನ ಜನರಿಗೆ ಉದ್ಯೋಗ ನೀಡಿದ್ದರು. ಅವರ ಕೊಡುಗೆಗಳು ತಾಲ್ಲೂಕಿಗೆ ಮೆರುಗು ನೀಡಿವೆ ಎಂದರು.
‘ನನಗೆ ಕನಕಪುರ ಎಷ್ಟು ಮುಖ್ಯವೋ, ಮಂಡ್ಯದ ಏಳು ಕ್ಷೇತ್ರಗಳು ಅಷ್ಟೇ ಮುಖ್ಯ. ಮದ್ದೂರಿನ ಶಾಸಕ ಉದಯ್ ಅವರ ಬೆನ್ನಿಗೆ ಇಡೀ ಸರ್ಕಾರ ನಿಂತಿದೆ. ಉಳಿ ಪೆಟ್ಟು ಬೀಳದೇ ಕಲ್ಲು ಶಿಲೆಯಾಗುವುದಿಲ್ಲ, ನೇಗಿಲು ಉಳುಮೆ ಮಾಡದೇ ಹೊಲ ಮಟ್ಟವಾಗುವುದಿಲ್ಲ. ಅದೇ ರೀತಿ ಉದಯ್ ಅವರು ನಿಮ್ಮ ಬದುಕು ಹಸನಾಗಿಸಲು ಶ್ರಮಿಸುತ್ತಿದ್ದಾರೆ. ಅವರಿಗೆ ನಿಮ್ಮ ಸಹಕಾರ ಸದಾ ಇರಲಿ’ ಎಂದರು.
‘ಶಾಸಕ ಉದಯ್ ₹2 ಕೋಟಿ ಮೊತ್ತದ ಸ್ವಂತ ನಿವೇಶನವನ್ನು ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಉದಯ್ ಅವರಿಗೆ ನಮನ ಅರ್ಪಿಸುತ್ತೇನೆ’ ಎಂದರು.
ನೀರಾವರಿ ಕಚೇರಿ ಆರಂಭ: ನೀರಾವರಿ ಇಲಾಖೆಯ ಕಚೇರಿಯನ್ನು ನಾನು ಆರಂಭಿಸುತ್ತಿದ್ದೇನೆ. ಮಳವಳ್ಳಿವರೆಗೂ ನೀರು ಹರಿಸಿ, ಮದ್ದೂರಿನ ಕಾಲುವೆಗಳ ಅಭಿವೃದ್ಧಿ ದೃಷ್ಟಿಯಿಂದ ಸುಮಾರು ₹500 ಕೋಟಿಗೂ ಹೆಚ್ಚು ಮೊತ್ತದ ಹಣವನ್ನು ನೀಡಿದ್ದೇವೆ. ಚಲುವರಾಯಸ್ವಾಮಿ ಅವರು ಕೂಡ ಸಾಕ್ಷಿಗುಡ್ಡೆ ಬಿಟ್ಟು ಹೋಗಲು, ರೈತರ ಮಕ್ಕಳಿಗಾಗಿ ಕೃಷಿ ವಿ.ವಿ ತರಲು ಮುಂದಾಗಿದ್ದಾರೆ. ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ವಿವಿಧ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಜಿಲ್ಲೆಯಲ್ಲಿ ಅತಿಹೆಚ್ಚು ಶಾಸಕರು ಗೆದ್ದು, ಕಾಂಗ್ರೆಸ್ ಸರ್ಕಾರದ ರಚನೆಗೆ ಕಾರಣರಾಗಿದ್ದಾರೆ’ ಎಂದರು.
ಜನರ ಬದುಕಿಗಾಗಿ ₹1 ಲಕ್ಷ ಕೋಟಿ: ‘ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈ ಅಧಿಕಾರದಲ್ಲಿದ್ದ ಕಾರಣಕ್ಕೆ ನಿಮಗೆ ಪಂಚ ಗ್ಯಾರಂಟಿ ಯೋಜನೆ ನೀಡಲಾಗಿದೆ. ಬಜೆಟ್ಟಿನ ₹1 ಲಕ್ಷ ಕೋಟಿಯಷ್ಟು ಹಣವನ್ನು ಜನರಿಗಾಗಿ ನೀಡುತ್ತಿದ್ದೇವೆ’ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಪೌರಾಡಳಿತ ಸಚಿವ ರಹೀಮ್ ಖಾನ್, ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್, ಶಾಸಕರಾದ ಪಿ.ರವಿಕುಮಾರ್, ರಮೇಶ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಡಾ ಅಧ್ಯಕ್ಷ ನಹೀಂ, ಮದ್ದೂರು ಪುರಸಭೆ ಅಧ್ಯಕ್ಷೆ ಕೋಕಿಲಾ, ದಡದಪುರ ಶಿವಣ್ಣ, ಜಿಲ್ಲಾಧಿಕಾರಿ ಕುಮಾರ, ಸಿಇಒ ಕೆ.ಆರ್.ನಂದಿನಿ, ಐಜಿಪಿ ಎಂ.ಬಿ.ಬೋರಲಿಂಗಯ್ಯ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಇದ್ದರು.
‘ನೀವು ಅಧಿಕಾರದಲ್ಲಿದ್ದಾಗ ಇಂತಹ ಯಾವುದಾದರೂ ಒಂದು ಯೋಜನೆಯನ್ನು ಜಾರಿಗೆ ತಂದಿದ್ದೀರಾ ಎಂದು ನೀವೆಲ್ಲರೂ ಬಿಜೆಪಿಯವರನ್ನು ಕೇಳಬೇಕು. ಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡಿದ್ದಾರಾ? ಮಾಡಿಲ್ಲ. ಹೀಗಾಗಿ ಅವರು ನಮ್ಮ ಬಗ್ಗೆ ಮಾತನಾಡಲು ನೈತಿಕತೆ ಕಳೆದುಕೊಂಡಿದ್ದಾರೆ. ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಅಚ್ಛೇದಿನ ಬರುತ್ತದೆ ಎಂದಿದ್ದರು. ಅವರು ಹೇಳಿದ್ದ ಅಚ್ಛೇದಿನ್ ಖಾತೆಗೆ ₹15 ಲಕ್ಷದ ವಿಚಾರ ಏನಾಯ್ತು ಎಂದು ನೀವೆಲ್ಲರೂ ಬಿಜೆಪಿ ಹಾಗೂ ಕುಮಾರಸ್ವಾಮಿ ಅವರನ್ನು ಕೇಳಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ ‘ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸುಮಾರು ₹4 ರಿಂದ ₹5 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಮಂಡ್ಯ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ₹112 ಕೋಟಿ ಅನುದಾನ ನೀಡಲಾಗಿದೆ’ ಎಂದರು. ‘ರಾಜ್ಯದ ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಮೆಕ್ಕೆಜೋಳದ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ಅಣೆಕಟ್ಟೆ ಭರ್ತಿಯಾಗಿ ಬಿತ್ತನೆ ಕಾರ್ಯ ಕಾಲಕ್ಕೂ ಮುಂಚಿತವಾಗಿ ಪ್ರಾರಂಭವಾಗಿರುವ ಹಿನ್ನೆಲೆ ಬಿತ್ತನೆ ಬೀಜ ಹಾಗೂ ಗೊಬ್ಬರ ವಿತರಣೆಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ’ ಎಂದು ಹೇಳಿದರು.
ಮದ್ದೂರು ಶಾಸಕ ಕೆ.ಎಂ.ಉದಯ ಮಾತನಾಡಿ ‘ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ನಿಜವಾಗಿಯೂ ಮದ್ದೂರನ್ನು ಅಭಿವೃದ್ಧಿಯತ್ತ ಕೊಂಡ್ಯುತ್ತಿದ್ದಾರೆ. ಅನೇಕ ವರ್ಷಗಳಿಂದ ಬೇಡಿಕೆ ಇದ್ದ ಕೆಮ್ಮಣ್ಣು ನಾಲೆ ಸೂಳೆಕೆರೆ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ’ ಎಂದು ಹೇಳಿದರು. ‘ಮದ್ದೂರು ನಗರ ಪ್ರದೇಶದಲ್ಲಿ ವಿದ್ಯುತ್ ಕೊರತೆ ನೀಗಿಸಲು ಸೋಮನಹಳ್ಳಿಯಲ್ಲಿ 220 ಕೆ.ವಿ ಸಾಮರ್ಥ್ಯದ ₹187 ಕೋಟಿ ವೆಚ್ಚದ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಇದರಿಂದ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ’ ಎಂದರು. 2 ಪಶು ಆಸ್ಪತ್ರೆ ಹಾಗೂ ನೀರಾವರಿ ಇಲಾಖೆಗೆ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ. ಮದ್ದೂರಿನಲ್ಲಿ ಪಾಲಿಟೆಕ್ನಿಕ್ ಹಾಗೂ ಕಾನೂನು ಕಾಲೇಜು ನಿರ್ಮಾಣಕ್ಕೆ ಅನುಮೋದನೆ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಬೇಡಿಕೆ ಇಟ್ಟರು.
ಮದ್ದೂರಿನಲ್ಲಿ 100 ಅಡಿ ರಸ್ತೆಗೆ ಒಪ್ಪಿಗೆ: ಸಿಎಂ
ಮದ್ದೂರು ಪಟ್ಟಣದ ಪೇಟೆ ಬೀದಿಯಲ್ಲಿ 100 ಅಡಿ ರಸ್ತೆ ಮಾಡಲು ಶಾಸಕ ಉದಯ ಅವರ ಬೇಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಉದಯ ಅವರದ್ದು ಕಡಿಮೆ ಮಾತು ಹೆಚ್ಚು ಕೆಲಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಂಸಿಸಿದರು. 2028ರಲ್ಲೂ ನಮ್ಮ ಸರ್ಕಾರವೇ ಆಡಳಿತಕ್ಕೆ ಬರುತ್ತದೆ. ಉದಯ ಅವರೇ ಮದ್ದೂರಿನಲ್ಲಿ ಚುನಾವಣೆಗೆ ನಿಲ್ಲುತ್ತಾರೆ. ಅವರನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು. ಕಾವೇರಿ ನೀರಾವರಿ ನಿಗಮ ಒಂದರಲ್ಲೇ ಎರಡು ವರ್ಷಗಳಲ್ಲಿ ₹560 ಕೋಟಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ನಾಲ್ಕು ವರ್ಷ ಬಿಜೆಪಿ ಸರ್ಕಾರ ಮದ್ದೂರಿನಲ್ಲಿ ಏನು ಮಾಡಿದೆ ಎನ್ನುವುದನ್ನು ಜನತೆಗೆ ತೋರಿಸಿ ಎಂದು ಸವಾಲೆಸೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.