ADVERTISEMENT

ಶ್ರೀರಂಗಪಟ್ಟಣ: ನಿರ್ವಹಣೆ ಇಲ್ಲದೇ ಸೊರಗಿದ ದಸರಾ ಬನ್ನಿ ಮಂಟಪ

ದಸರಾ ಬನ್ನಿಮಂಟಪದ ಮೇಲೆ ಗಿಡ!

ಗಣಂಗೂರು ನಂಜೇಗೌಡ
Published 19 ಸೆಪ್ಟೆಂಬರ್ 2024, 4:50 IST
Last Updated 19 ಸೆಪ್ಟೆಂಬರ್ 2024, 4:50 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ವೃತ್ತದ ಬಳಿಯ ದಸರಾ ಬನ್ನಿ ಮಂಟಪದ ಮೇಲೆ ಗಿಡ ಬೆಳೆದಿರುವುದು
ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ವೃತ್ತದ ಬಳಿಯ ದಸರಾ ಬನ್ನಿ ಮಂಟಪದ ಮೇಲೆ ಗಿಡ ಬೆಳೆದಿರುವುದು   

ಶ್ರೀರಂಗಪಟ್ಟಣ: ಈ ಬಾರಿ ಅ.4ರಿಂದ ಶ್ರೀರಂಗಪಟ್ಟಣ ದಸರಾ ಉತ್ಸವ ನಡೆಸುವುದಾಗಿ ಜಿಲ್ಲಾಡಳಿತ ಘೋಷಿಸಿದ್ದರೂ ಜಂಬೂ ಸವಾರಿ ಆರಂಭವಾಗಲಿರುವ ಪಟ್ಟಣ ಸಮೀಪದ ಕಿರಂಗೂರು ವೃತ್ತದ ಬಳಿಯ ದಸರಾ ಬನ್ನಿ ಮಂಟಪ ಮತ್ತು ಅದರ ಪರಿಸರವನ್ನು ಅಂದಗಾಣಿಸುವ ಕೆಲಸ ಇನ್ನೂ ಆರಂಭವಾಗಿಲ್ಲ.

ಬನ್ನಿ ಮಂಟಪದ ಬಲ ಪಾರ್ಶ್ವದ ಮೇಲ್ಭಾಗದಲ್ಲಿ ಗಿಡಗಳು ಬೆಳೆಯುತ್ತಿವೆ. ಎಡ ಪಾರ್ಶ್ವ ಮತ್ತು ಹಿಂಭಾಗದಲ್ಲಿ ಕೂಡ ಗಿಡಗಳು ಬೆಳೆಯಲಾರಂಭಿಸಿವೆ. ದಸರಾ ಮಂಟಪದ ಸುತ್ತಲೂ ತ್ಯಾಜ್ಯ ಚೆಲ್ಲಾಡುತ್ತಿದೆ. ಮಂಟಪದ ಎಡ ಭಾಗದಲ್ಲಿರುವ ಕೊಳದ ನೀರು ಪಾಚಿ ಕಟ್ಟಿದೆ. ಹತ್ತಿರ ಹೋದರೆ ಗಬ್ಬು ವಾಸನೆ ಮೂಗಿಗೆ ಬಡಿಯುತ್ತಿದೆ.

ದಸರಾ ಬನ್ನಿ ಮಂಟಪದ ಸುತ್ತಲೂ ತಂತಿ ಬೇಲಿ ನಿರ್ಮಿಸಿ ಉದ್ಯಾನವನ ಅಭಿವೃದ್ಧಿಸಲು ಶಾಸಕ ರಮೇಶ ಬಂಡಿಸಿದ್ದೇಗೌಡ 15 ದಿನಗಳ ಹಿಂದೆಯೇ ಅಧಿಕಾರಿಗಳಿಗೆ ಸೂಚಿಸಿದ್ದರು. ಜಿಲ್ಲಾ ಪಂಚಾಯಿತಿ ಸಿಇಒ ಶೇಖ್‌ ತನ್ವೀರ್‌ ಆಸಿಫ್‌ ಕೂಡ ಇಲ್ಲಿಗೆ ಭೇಟಿ ನೀಡಿ ದಸರಾ ಉತ್ಸವಕ್ಕೆ ಸಿದ್ದತೆ ಆರಂಭಿಸುವಂತೆ ತಿಳಿಸಿದ್ದರು. ಆದರೆ ಇದುವರೆಗೆ ತೃಣ ಮಾತ್ರವೂ ಕೆಲಸ ಆಗಿಲ್ಲ.

ADVERTISEMENT

‘ಬನ್ನಿ ಮಂಟಪದ ಮೇಲೆ ಬೆಳೆಯುತ್ತಿರುವ ಗಿಡಗಳ ಬೇರುಗಳು ಆಳಕ್ಕೆ ಇಳಿದರೆ ಚಾವಣಿ ಮತ್ತು ಚುರಕಿ ಗಾರೆಯಲ್ಲಿ ಬಿರುಕು ಮೂಡುವ ಅಪಾಯವಿದೆ. ದಸರಾ ಉತ್ಸವ ಸಮೀಪಿಸಿದಾಗ ಮಾತ್ರ ಈ ಮಂಟ‍ಪಕ್ಕೆ ಬಣ್ಣ ಬಳಿಯಲಾಗುತ್ತದೆ. ಅದನ್ನು ಹೊರತುಪಡಿಸಿದರೆ ವರ್ಷ ಪೂರ್ತಿ ಇದು ದಾರಿಹೋಕರ ತಂಗುದಾಣವಾಗುತ್ತದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳೂ ನಡೆಯುತ್ತವೆ. ಅದಕ್ಕೆ ಅವಕಾಶ ನೀಡಬಾರದು’ ಎಂದು ಬಾಬುರಾಯನಕೊಪ್ಪಲಿನ ರೈತ ಮುಖಂಡ ಬಿ.ಎಸ್‌. ರಮೇಶ್‌ ಒತ್ತಾಯಿಸುತ್ತಾರೆ.

ಬನ್ನಿ ಮಂಟಪದ ಸುತ್ತ ತ್ಯಾಜ್ಯ ಚೆಲ್ಲಾಡುತ್ತಿರುವುದು
ಕಿರಂಗೂರು ವೃತ್ತದ ಬಳಿಯ ದಸರಾ ಬನ್ನಿ ಮಂಟಪ ಮತ್ತು ಅದರ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸುವಂತೆ ಕಿರಂಗೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಲಾಗುವುದು
ಎ.ಬಿ.ವೇಣು, ತಾಲ್ಲೂಕು ಪಂಚಾಯಿತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.