ADVERTISEMENT

ಸುಮಲತಾ ಎದುರು ಅಷ್ಟ ದಿಕ್ಪಾಲಕರು

ಪ್ರಮುಖ ರಾಷ್ಟ್ರೀಯ ಪಕ್ಷಗಳ ಹುರಿಯಾಳುಗಳಿಲ್ಲ, ಮೈತ್ರಿ– ಪಕ್ಷೇತರ ಅಭ್ಯರ್ಥಿ ನಡುವೆ ನೇರ ಹಣಾಹಣಿ

ಎಂ.ಎನ್.ಯೋಗೇಶ್‌
Published 2 ಮೇ 2019, 11:09 IST
Last Updated 2 ಮೇ 2019, 11:09 IST
   

ಮಂಡ್ಯ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ಕೆ.ನಿಖಿಲ್‌, ಅಂಬರೀಷ್‌ ಪತ್ನಿ ಸುಮಲತಾ ನಡುವಿನ ನೇರ ಹಣಾಹಣಿಯ ಕಾರಣಕ್ಕೆ ಮಂಡ್ಯ ಕ್ಷೇತ್ರ ದೇಶದ ಗಮನ ಸೆಳೆದಿದೆ. ಒಂದೆಡೆ ಕ್ಷೇತ್ರದ ಎಂಟು ಜೆಡಿಎಸ್‌ ಶಾಸಕರು ಅಷ್ಟ ದಿಕ್ಪಾಲಕರಂತೆ ನಿಖಿಲ್‌ ಗೆಲುವಿಗೆ ತಂತ್ರ ರೂಪಿಸುತ್ತಿದ್ದರೆ, ಇನ್ನೊಂದೆಡೆ ಸುಮಲತಾ ಏಟಿಗೆ ಎದಿರೇಟು ನೀಡುತ್ತಾ ಗಮನ ಸೆಳೆದಿದ್ದಾರೆ.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿ ಇಲ್ಲ. ಮೈತ್ರಿಯಿಂದಾಗಿ ಕಾಂಗ್ರೆಸ್‌ ಪಕ್ಷ ಜೆಡಿಎಸ್‌ಗೆ ಸ್ಥಾನ ಬಿಟ್ಟುಕೊಟ್ಟಿದ್ದರೆ, ಬಿಜೆಪಿಯು ಸುಮಲತಾ ಅವರಿಗೆ ಬೇಷರತ್‌ ಬೆಂಬಲ ನೀಡಿದೆ. ಸುಮಲತಾ ಬೆಂಬಲಿಸುವ ಮೂಲಕ ಬಿಜೆಪಿ ಜಿಲ್ಲೆಯಲ್ಲಿ ನೆಲೆ ಹುಡುಕುತ್ತಿದೆ. ‘ಬಿಜೆಪಿ ಬೆಂಬಲಿತ ಅಭ್ಯರ್ಥಿ’ ಎಂಬ ವಿಚಾರವನ್ನೇ ಮುನ್ನೆಲೆಗೆ ತಂದು ಎಚ್‌.ಡಿ.ಕುಮಾರಸ್ವಾಮಿ ಮಗನ ಪರ ಮತಯಾಚನೆ ಮಾಡುತ್ತಿದ್ದಾರೆ. ಕುಮಾರಸ್ವಾಮಿ– ಸುಮಲತಾ ನಡುವಿನ ಹೋರಾಟ ಎಂದೇ ಬಣ್ಣಿಸಲಾಗುತ್ತಿದೆ.

ಜೆಡಿಎಸ್‌ ಎಂಟು ಶಾಸಕರಲ್ಲಿ ಮೂವರು ಸಚಿವರು. ಒಬ್ಬ ಸಂಸದ, ಮೂವರು ವಿಧಾನ ಪರಿಷತ್‌ ಸದಸ್ಯರಿದ್ದಾರೆ. ಜಿಲ್ಲಾ ಪಂಚಾಯಿತಿ ಸೇರಿ ಸ್ಥಳೀಯ ಸಂಸ್ಥೆಗಳಲ್ಲೂ ಪಕ್ಷ ಅಧಿಕಾರ ಹಿಡಿದಿದೆ. ಜೆಡಿಎಸ್‌ ಭದ್ರಕೋಟೆಯಲ್ಲಿ ಮಗನನ್ನು ಅನಾಯಾಸವಾಗಿ ಗೆಲ್ಲಿಸಿಕೊಳ್ಳುವ ಕನಸು ಕುಮಾರಸ್ವಾಮಿ ಅವರದ್ದಾಗಿತ್ತು. ಕಾಂಗ್ರೆಸ್‌ ಬೆಂಬಲವೂ ಇರುವ ಕಾರಣ ಕಠಿಣ ಸ್ಪರ್ಧೆ ಇರಲಾರದು ಎಂದೇ ನೀರಿಕ್ಷಿಸಿದ್ದರು. ಸುಮಲತಾಗೆ ರೈತಸಂಘದ ಬೆಂಬಲವೂ ಸಿಕ್ಕಿದ್ದು, ಜೆಡಿಎಸ್‌ ಹಾದಿ ಕಠಿಣಗೊಂಡಿದೆ. ಕೈಗೆ ಬಂದ ತುತ್ತು ಬಾಯಿಗೆಟಕಿಸಿಕೊಳ್ಳಲು ಪ್ರಯಾಸಪಡುತ್ತಿದೆ.

ಅತೃಪ್ತರ ಅಸ್ತ್ರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್‌ ಮುಖಂಡರಿಗೆ ಸುಮಲತಾ ಸ್ಪರ್ಧೆ ಒಂದು ರೀತಿಯ ಅಸ್ತ್ರ ಸಿಕ್ಕಂತಾಗಿದೆ. ಮೈತ್ರಿಧರ್ಮ ಪಾಲನೆಯ ಕಟ್ಟುನಿಟ್ಟಿನ ಆದೇಶ ಮೀರಿ ಕೆಲಸ ಮಾಡುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ‘ನಮ್ಮ ವಿರುದ್ಧ ಕ್ರಮ ಕೈಗೊಂಡರೆ ಅದನ್ನು ಆಶೀರ್ವಾದ ಎಂದುಕೊಳ್ಳುತ್ತೇವೆ’ ಎಂದು ಎನ್‌.ಚಲುವರಾಯಸ್ವಾಮಿ ಹೇಳಿರುವುದು ಮೈತ್ರಿ ವಿರುದ್ಧ ಅವರಿಗಿರುವ ಅಸಮಾಧಾನವನ್ನು ಅನಾವರಣಗೊಳಿಸಿದೆ. ಈ ಮೈತ್ರಿ ಬೇಗುದಿ ನೆರೆಹೊರೆ ಜಿಲ್ಲೆಗಳ ಮೇಲೂ ಪರಿಣಾಮ ಬೀರುತ್ತಿದೆ.

ಜಾತಿ ಪ್ರಶ್ನೆ: ‘ಸುಮಲತಾ ಮಂಡ್ಯ ಗೌಡ್ತಿ ಅಲ್ಲ’ ಎಂಬ ಹೇಳಿಕೆ ಮೂಲಕ ಜೆಡಿಎಸ್‌ ಮುಖಂಡರು ನಡೆಸಿದ ಜಾತಿ ಮತಗಳ ಕ್ರೋಡೀಕರಣದ ಪ್ರಯತ್ನಕ್ಕೆ ಗರಿಷ್ಠ ಲಾಭ ಸಿಕ್ಕಿಲ್ಲ. ಆದರೂ, ಒಕ್ಕಲಿಗ ಸಮುದಾಯದ ಅಳಿವು–ಉಳಿವಿನ ಪ್ರಶ್ನೆ, ಕುಮಾರಣ್ಣನನ್ನು ಉಳಿಸಿಕೊಳ್ಳಲು ನಿಖಿಲ್‌ ಗೆಲ್ಲಿಸಬೇಕು ಎಂಬ ಮಾತಿನ ಮೋಡಿಯ ಮೂಲಕ ಪ್ರಚಾರ ನಡೆದಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಮುಖ್ಯಮಂತ್ರಿ ಹರಿಸಿದ ₹ 8 ಸಾವಿರ ಕೋಟಿ ಅನುದಾನ, ಅಭಿವೃದ್ಧಿಯ ವಿಚಾರ ಪ್ರಸ್ತಾಪಿಸಲಾಗುತ್ತಿದೆ.

ಆದರೆ ಕುಟುಂಬ ರಾಜಕಾರಣ, ಸ್ಥಳೀಯ ಜೆಡಿಎಸ್‌ ಮುಖಂಡರಿಗೆ ಅನ್ಯಾಯ, 27 ವರ್ಷಕ್ಕೆ ನಿಖಿಲ್‌ಗೆ ರಾಜಕಾರಣ ಬೇಕಿರಲಿಲ್ಲ ಎಂಬ ಅಭಿಪ್ರಾಯಗಳು ಒಳಏಟು ನೀಡುವ ಸಾಧ್ಯತೆ ಇದೆ. ಜೆಡಿಎಸ್‌ ಮುಖಂಡರಲ್ಲಿರುವ ಅತೃಪ್ತಿ ಬೂದಿಮುಚ್ಚಿದ ಕೆಂಡದಂತಿದೆ. ನಿಖಿಲ್‌ ಪ್ರಚಾರದ ವೇಳೆ ಮಹಿಳೆಯರು ಕೇಳುತ್ತಿರುವ ‘ನಿಮ್ಮ ತಂದೆ ಮಹಿಳಾ ಸಂಘಗಳ ಸಾಲ, ಒಡವೆ ಸಾಲ ಮನ್ನಾ ಮಾಡಿಲ್ಲ. ಈಗ ನಿಮ್ಮನ್ನು ಗೆಲ್ಲಿಸಬೇಕಾ’ ಎಂಬ ಪ್ರಶ್ನೆ ನಿಖಿಲ್‌ಗೆ ಮಗ್ಗುಲ ಮುಳ್ಳಾಗಿವೆ. ದೇವೇಗೌಡರು ಮೊಮ್ಮಗನನ್ನು ತಂದು ನಿಲ್ಲಿಸಿದ್ದಕ್ಕೆ ಕೆಲವರಿಗೆ ಸಿಟ್ಟಿದೆ. ಗುಪ್ತಗಾಮಿನಿಯಂತಿರುವ ಆ ಸಿಟ್ಟು ಏ.18ರ ವರೆಗೂ ಉಳಿದರೆ ನಿಖಿಲ್‌ಗೆ ನಷ್ಟವೇ ಹೆಚ್ಚು.

ಸುಮಲತಾ ಸ್ಪರ್ಧೆ ‘ಸ್ವಾಭಿಮಾನದ ಸಂಕೇತ’ ಎಂಬ ಹೆಸರಿನಲ್ಲಿ ಕೆಲವು ಸಂಘಟನೆಗಳ ಮುಖಂಡರು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಬೆಂಬಲ ನೀಡಿರುವುದರಿಂದ ಪ್ರಗತಿಪರ ಸಂಘಟನೆಗಳು ಅವರ ವಿರುದ್ಧ ಪ್ರಚಾರಕ್ಕೆ ನಿಂತಿವೆ. ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ‘ಬಿಜೆಪಿ ಸೇರುವ ಪ್ರಸ್ತಾವ ಇಲ್ಲ’ ಎಂದಿದ್ದಾರೆ.

ಜೋಡೆತ್ತು ಯತ್ನ: ಜೋಡೆತ್ತು ಎನ್ನುತ್ತಾ ಸುಮಲತಾ ಪರ ಪ್ರಚಾರಕ್ಕಿಳಿದ ನಟರಾದ ಯಶ್‌–ದರ್ಶನ್‌ ಆಕರ್ಷಣೆ ಮತವಾಗಿ ಪರಿವರ್ತನೆಯಾಗುವುದೇ ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಮಗನ ಗೆಲುವಿಗಾಗಿ ಪ್ರತಿಷ್ಠೆಯನ್ನು ಪಣಕ್ಕಿಟ್ಟಿರುವ ಕುಮಾರಸ್ವಾಮಿ ಸಹ ಕೊನೆಯ ಮೂರುದಿನ ಖ್ಯಾತ ಚಿತ್ರನಟರನ್ನು ಕರೆತಂದು ಜನಾಕರ್ಷಣೆ ಮಾಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ಅಂಬರೀಷ್‌ ಸಾವಿನ ಅನುಕಂಪ ಸುಮಲತಾ ಅವರಿಗೆ ಪ್ಲಸ್‌ ಆಗಿದೆ. ಬೇರೆ ತಾಲ್ಲೂಕುಗಳಿಗಿಂತ ಅವರ ಹುಟ್ಟೂರು ದೊಡ್ಡರಸಿನಕೆರೆ ಇರುವ ಮದ್ದೂರು ತಾಲ್ಲೂಕಿನಲ್ಲಿ ಸುಮಲತಾ ಪರ ಅಲೆ ಇದೆ. ಅಂಬರೀಷ್‌ ಅವರಿಗಿದ್ದ ಮಂಡ್ಯ ಪ್ರೀತಿ ಪ್ರಸ್ತಾಪಿಸಿ ಮತಯಾಚನೆ ಮಾಡುತ್ತಿದ್ದಾರೆ. ಅಂಬರೀಷ್‌ ಅವರನ್ನೂ ಸೋಲಿಸಿದ್ದ ಮಂಡ್ಯ ಜನರು ಅನುಕಂಪ, ಅಭಿಮಾನ, ಆಕರ್ಷಣೆಗೆ ಮಣೆ ಹಾಕುತ್ತಾರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮಂಡ್ಯ ಜಿಲ್ಲೆಯನ್ನು ಕಾಡುತ್ತಿರುವ ಸಮಸ್ಯೆಗಳು ಚುನಾವಣಾ ವಿಷಯವಾಗಿಲ್ಲ. ಇಲ್ಲಿಯ ಫಲಿತಾಂಶ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಯ ಅಳಿವು ಉಳಿವನ್ನು ನಿರ್ಧಾರ ಮಾಡುತ್ತದೆ ಎಂಬ ಚರ್ಚೆ ಗರಿಗೆದರಿದೆ. ಈ ಅಬ್ಬರದಲ್ಲಿ ಕ್ಷೇತ್ರದ ಮತದಾನದ ಪ್ರಮಾಣ ಶೇ 90ರಷ್ಟು ಮೀರಲಿದೆ ಎಂದು ಹೇಳಲಾಗುತ್ತಿದೆ.

ಪಕ್ಷಗಳ ಬಲಾಬಲ

8 ಕ್ಷೇತ್ರ= 8 ಜೆಡಿಎಸ್‌

* ಮಂಡ್ಯ– ಎಂ.ಶ್ರೀನಿವಾಸ್‌ (ಜೆಡಿಎಸ್‌)

* ಶ್ರೀರಂಗಪಟ್ಟಣ– ರವೀಂದ್ರ ಶ್ರೀಕಂಠಯ್ಯ (ಜೆಡಿಎಸ್‌)

* ಮದ್ದೂರು– ಡಿ.ಸಿ.ತಮ್ಮಣ್ಣ (ಜೆಡಿಎಸ್‌)

* ನಾಗಮಂಗಲ– ಸುರೇಶ್‌ಗೌಡ (ಜೆಡಿಎಸ್‌)

* ಮೇಲುಕೋಟೆ– ಸಿ.ಎಸ್‌.ಪುಟ್ಟರಾಜು (ಜೆಡಿಎಸ್‌)

* ಮಳವಳ್ಳಿ– ಡಾ.ಕೆ.ಅನ್ನದಾನಿ (ಜೆಡಿಎಸ್‌)

* ಕೆ.ಆರ್‌.ಪೇಟೆ– ಕೆ.ಸಿ.ನಾರಾಯಣಗೌಡ (ಜೆಡಿಎಸ್‌)

* ಕೆ.ಆರ್‌.ನಗರ– ಸಾ.ರಾ.ಮಹೇಶ್‌ (ಜೆಡಿಎಸ್‌)

2018ರ ಉಪ ಚುನಾವಣೆ ಫಲಿತಾಂಶ

ಎಲ್‌.ಆರ್‌.ಶಿವರಾಮೇಗೌಡ (ಜೆಡಿಎಸ್‌)– 5,69,347
ಡಾ.ಸಿದ್ದರಾಮಯ್ಯ (ಬಿಜೆಪಿ)– 2,44,404
ಎಂ.ಹೊನ್ನೇಗೌಡ (ಪಕ್ಷೇತರ)– 17,842

**********

2014ರ ಫಲತಾಂಶ
ಸಿ.ಎಸ್‌.ಪುಟ್ಟರಾಜು (ಜೆಡಿಎಸ್‌)– 5,24,370
ರಮ್ಯಾ (ಕಾಂಗ್ರೆಸ್‌)– 5,18,852
ಬಿ.ಶಿವಲಿಂಗಯ್ಯ (ಬಿಜೆಪಿ)– 86,993

************

ಒಟ್ಟು ಮತದಾರರು–17,10,901

ಪುರುಷರು– 8,54,637
ಮಹಿಳೆಯರು– 8,56,117
ಇತರೆ– 147

ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು– 22

ಪ್ರಮುಖರು

ಕೆ.ನಿಖಿಲ್‌ (ಜೆಡಿಎಸ್‌)

ಸುಮಲತಾ (ಪಕ್ಷೇತರ)

ನಂಜುಂಡಸ್ವಾಮಿ (ಬಿಎಸ್‌ಪಿ)

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಮಂಡ್ಯದ ಜನರ ಕೊಡುಗೆ ಬಲು ದೊಡ್ಡದು. ಅವರ ಋಣ ನಮ್ಮ ಕುಟುಂಬದ ಮೇಲಿದೆ. ಜನಸೇವೆ ಮಾಡಿ ಋಣ ತೀರಿಸುತ್ತೇನೆ
–ಕೆ.ನಿಖಿಲ್‌, ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ

ನಾನು ರಾಜಕಾರಣ ಮಾಡುವುದಿದ್ದರೆ ಅದು ಮಂಡ್ಯದಲ್ಲಿ ಮಾತ್ರ. ಅಂಬರಿಷ್‌ ಮೇಲೆ ಜನರಿಗಿರುವ ಪ್ರೀತಿಗಾಗಿ ಸ್ಪರ್ಧೆ ಮಾಡಿದ್ದೇನೆ. ಪ್ರೀತಿ, ಅಭಿಮಾನವನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ಇದೆ
–ಸುಮಲತಾ, ಪಕ್ಷೇತರ ಅಭ್ಯರ್ಥಿ

ಉಳ್ಳವರ ಅಟ್ಟಹಾಸ ಮಿತಿಮೀರಿದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಬಡತನ, ನಿರುದ್ಯೋಗ ನಿವಾರಿಸುವ, ರೈತರ ಸಮಸ್ಯೆಗಳಿಗೆ ಪರಿಹಾರ ಹುಡುಕುವಂತ ಸಂಸದ ಜಿಲ್ಲೆಗೆ ಬೇಕಾಗಿದ್ದಾರೆ
–ಮಂಜುನಾಥ್‌, ಕೆ.ಆರ್‌.ಪೇಟೆ

ಮಂಡ್ಯದಲ್ಲಿ ನಡೆಯುತ್ತಿರುವ ಚುನಾವಣೆಯನ್ನು ಇಡೀ ದೇಶವೇ ನೋಡುತ್ತಿದೆ. ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಯಾರಾದರೂ ಗೆಲ್ಲಲಿ, ಯಾವುದೇ ಗಲಾಟೆ, ಗೊಂದಲ ಇಲ್ಲದಂತೆ ಚುನಾವಣೆ ನಡೆಯುವಂತಾಗಲಿ
–ರೋಜಾ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.