ADVERTISEMENT

ದಕ್ಷಿಣ ಪದವೀಧರರ ಕ್ಷೇತ್ರ| ಹಕ್ಕು ಚಲಾಯಿಸಿದ ಶೇ 69.88ರಷ್ಟು ಪದವೀಧರರು

ಮಧ್ಯಾಹ್ನದ ನಂತರ ಬಿರುಸು ಪಡೆದುಕೊಂಡ ಮತದಾನ, ಜಿಲ್ಲೆಯಾದ್ಯಂತ ಶಾಂತಿಯುತ ಚುನಾವಣೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 14:23 IST
Last Updated 13 ಜೂನ್ 2022, 14:23 IST
ವಿಧಾನ ಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಅಂಗವಾಗಿ ಮಂಡ್ಯ ವಿವಿ ಮತಗಟ್ಟೆಯಲ್ಲಿ ಹಕ್ಕು ಚಲಾವಣೆ ಮಾಡಲು ಸಾಲುಗಟ್ಟಿ ನಿಂತಿದ್ದ ಮತದಾರರು
ವಿಧಾನ ಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಅಂಗವಾಗಿ ಮಂಡ್ಯ ವಿವಿ ಮತಗಟ್ಟೆಯಲ್ಲಿ ಹಕ್ಕು ಚಲಾವಣೆ ಮಾಡಲು ಸಾಲುಗಟ್ಟಿ ನಿಂತಿದ್ದ ಮತದಾರರು   

ಮಂಡ್ಯ: ವಿಧಾನ ಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಜಿಲ್ಲೆಯ 45 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ನಡೆಯಿತು. ಜಿಲ್ಲೆಯಾದ್ಯಂತ ಸಂಜೆ 5 ಗಂಟೆವರೆಗೂ ಶೇ 69.88ರಷ್ಟು ಮತದಾರರು ಹಕ್ಕು ಚಲಾವಣೆ ಮಾಡಿದರು.

ಬೆಳಿಗ್ಗೆ 8 ಗಂಟೆಗೆ ಮತದಾನ ಬಹಳ ಮಂದಗತಿಯಲ್ಲಿ ಆರಂಭವಾಯಿತು. ಬಹುತೇಕ ಖಾಸಗಿ ಶಾಲೆ, ಕಾಲೇಜುಗಳ ಅಧ್ಯಾಪಕರು ಕರ್ತವ್ಯಕ್ಕೆ ತೆರಳಿದ್ದ ಮತಗಟ್ಟೆಗಳತ್ತ ಸುಳಿಯಲಿಲ್ಲ. ಸರ್ಕಾರಿ ಶಾಲಾ, ಕಾಲೇಜುಗಳ ಮತದಾರರಿಗೆ ಸಾಂದರ್ಭಿಕ ರಜೆ ನೀಡಿದ್ದ ಕಾರಣ ಅವರು ಮತಗಟ್ಟೆಗಳಿಗೆ ಬಂದು ಹಕ್ಕು ಚಲಾವಣೆ ಮಾಡುತ್ತಿದ್ದರು.

ಬೆಳಿಗ್ಗೆ 10 ಗಂಟೆ ವೇಳೆಗೆ ಜಿಲ್ಲೆಯಾದ್ಯಂತ ಕೇವಲ ಶೇ 7.94ರಷ್ಟು ಮತದಾನವಾಗಿತ್ತು. ಮಧ್ಯಾಹ್ನ ಊಟದ ಸಮಯದವರೆಗೂ ಮತದಾನ ನಿಧಾನ ಗತಿಯಲ್ಲೇ ಸಾಗಿತು. ಮಧ್ಯಾಹ್ನ 12 ಗಂಟೆಗೆ 21ರಷ್ಟು ಮತದಾನ ಪೂರ್ಣಗೊಂಡಿತ್ತು. ಮಧ್ಯಾಹ್ನ 2 ಗಂಟೆಗೆ ಮತದಾನದ ಪ್ರಮಾಣ ಶೇ 39.39ಕ್ಕೆ ಏರಿಕೆಯಾಯಿತು. ಜಿಲ್ಲಾಧಿಕಾರಿ ಎಸ್‌.ಅಶ್ವತಿ ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ADVERTISEMENT

ಮಧ್ಯಾಹ್ನದ ನಂತರ ಮತದಾನ ಬಿರುಸು ಪಡೆದುಕೊಂಡಿತು. ಶಾಲಾ, ಕಾಲೇಜಿಗೆ ತೆರಳಿದ್ದ ಪದವೀಧರರು ಮತಗಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ಖಾಲಿ ಇದ್ದ ಮತಗಟ್ಟೆಗಳು ಮತದಾನ ಪ್ರಕ್ರಿಯೆ ಮುಗಿಯುವವರೆಗೂ ತುಂಬಿ ತುಳುಕುತ್ತಿದ್ದವು. ಮತದಾರರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡಿದರು. ಸಂಜೆ 4.15ರವೇಳೆಗೆ ಮತದಾನದ ಪ್ರಮಾಣ ಶೇ 59.24ರಷ್ಟಕ್ಕೆ ಏರಿಕೆಯಾಯಿತು. ಸಂಜೆ 5 ಗಂಟೆಗೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಾಗ ಶೇ 69.88ರಷ್ಟು ಮತದಾನವಾಗಿತ್ತು.

ಮತದಾರರನ್ನು ಸೆಳೆದ ಕಾರ್ಯಕರ್ತರು: ನಗರದ ಮಂಡ್ಯ ವಿವಿ ಆವರಣದಲ್ಲೇ 15 ಮತಗಟ್ಟೆಗಳನ್ನು ತೆರೆಯಲಾಗಿತ್ತು. ನಗರ, ಗ್ರಾಮೀಣ, ಹೋಬಳಿವಾರು ಮತಗಟ್ಟೆಗಳಲ್ಲಿ ಪದವೀಧರರು ಹಕ್ಕು ಚಲಾವಣೆ ಮಾಡಿದರು. ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಟೆಂಟ್‌ ಹಾಕಿಕೊಂಡು ಮತದಾರರಿಗೆ ಮತಪತ್ರ ಹಂಚಿಕೆ ಮಾಡುತ್ತಿದ್ದರು.
ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್‌ ಜಾಮ್‌ ಆಗಿತ್ತು. ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಿವಿಧೆಡೆ ಮತದಾರರ ಹೆಸರು, ತಂದೆ ಹೆಸರು, ಗುರುತಿನ ಚೀಟಿಯಲ್ಲಿ ವ್ಯತ್ಯಾಸವಾಗಿದ್ದ ಕಾರಣ ಮತದಾರರು ಮತ ಚಲಾವಣೆ ಮಾಡಲು ಪರದಾಡಬೇಕಾಯಿತು. ಮತದಾರರ ಪಟ್ಟಿಯಲ್ಲಿ ಮಾಹಿತಿ ತಪ್ಪಾಗಿದ್ದ ಕಾರಣ ಕೆಲ ಪದವೀಧರರು ಮತ ಚಲಾವಣೆ ಮಾಡದೇ ಹಿಂತಿರುಗಿದರು. ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಲು ಎಲ್ಲಾ ಮತಗಟ್ಟೆಗಳಲ್ಲೂ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಅಭ್ಯರ್ಥಿಗಳ ಭೇಟಿ: ಜೆಡಿಎಸ್‌ ಅಭ್ಯರ್ಥಿ ಎಚ್‌.ಕೆ.ರಾಮು, ಕಾಂಗ್ರೆಸ್‌ ಅಭ್ಯರ್ಥಿ ಮಧು ಜಿ ಮಾದೇಗೌಡ, ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್‌ ಅವರು ನಗರದ ಮತಗಟ್ಟೆಗೆ ಭೇಟಿ ನೀಡಿದ್ದರು.

ಎಚ್‌.ಕೆ.ರಾಮು ಮಾತನಾಡಿ ‘ಬೆಳಿಗ್ಗೆ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆದು ಮೈಸೂರಿನ ಕುವೆಂಪುನಗರ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದ್ದೇನೆ. ನಾಲ್ಕೂ ಜಿಲ್ಲೆಗಳಲ್ಲಿ ಜೆಡಿಎಸ್‌ ಪರ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು ಬಹಳ ಸಂತೋಷವಾಗಿದೆ’ ಎಂದು ಹೇಳಿದರು.

ಮಧು ಜಿ ಮಾದೇಗೌಡ ಮಾತನಾಡಿ ‘ಎಲ್ಲೆಡೆ ಕಾಂಗ್ರೆಸ್‌ ಪರವಾದ ಅಭಿಪ್ರಾಯ ವ್ಯಕ್ತವಾಗಿದೆ. ಪಕ್ಷದ ಹಿರಿಯ ಮುಖಂಡರು, ಕಿರಿಯ ಕಾರ್ಯಕರ್ತರು ಹಗಲಿರುಳು ಚುನಾವಣೆಗಾಗಿ ಶ್ರಮಿಸಿದ್ದಾರೆ’ ಎಂದರು.

ಮೈ.ವಿ.ರವಿಶಂಕರ್‌ ಮಾತನಾಡಿ ‘ನಾಲ್ಕೂ ಜಿಲ್ಲೆಗಳಲ್ಲಿ ಹೆಚ್ಚಿನ ಮತದಾನವಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಬಿಜೆಪಿ ಪರ ವ್ಯಾಪಕ ಬೆಂಬಲ ವ್ಯಕ್ತವಾಗಿದೆ’ ಎಂದರು.

****

ಶಾಲು ಬೀಸಿದ ಕಾರ್ಯಕರ್ತರು

ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿ ಕೇಸರಿ ಶಾಲು ಬೀಸಿದರು. ‘ಮೋದಿ ಮೋದಿ’ ಎಂದು ಜೈಕಾರ ಹಾಕಿದರು. ಇದನ್ನು ನೋಡಿದ ಕಾಂಗ್ರೆಸ್‌ ಜೆಡಿಎಸ್‌ ಸದಸ್ಯರು ಕೂಡ ತಮ್ಮ ಪಕ್ಷಗಳ ಧ್ವಜ ಬೀಸಿ ಸಂಭ್ರಮಿಸಿದರು.

ಸಚಿವ ನಾರಾಯಣಗೌಡ ಸ್ಥಳಕ್ಕೆ ಭೇಟಿ ನೀಡಿ ‘ಈ ಬಾರಿ ನಮ್ಮ ಜಿಲ್ಲೆಯಲ್ಲಿ ಉತ್ತಮ ಮತದಾನವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಈಗ ಉತ್ತಮ ಕಾಲ ಬಂದಿದೆ. ಮೈ.ವಿ.ರವಿಶಂಕರ್‌ ಅವರಿಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ’ ಎಂದರು.

ತಾಲ್ಲೂಕುವಾರು ಮತದಾನದ ಪ್ರಮಾಣ

ತಾಲ್ಲೂಕು; ಪುರುಷರು; ಮಹಿಳೆಯರು; ಇತರರು; ಒಟ್ಟು; ಶೇ
ಕೆಆರ್‌ಪೇಟೆ; 1602; 851; 0; 2453; 73.75
ನಾಗಮಂಗಲ; 1264; 933; 0; 2197; 74.25
ಪಾಂಡವಪುರ; 1696; 1142; 0; 2838; 76.60
ಮಂಡ್ಯ; 5848; 4719; 1; 10568; 66.36
ಮದ್ದೂರು; 4216; 3311; 0; 7527; 72.65
ಶ್ರೀರಂಗಪಟ್ಟಣ; 1352; 928; 0; 2280; 68.94
ಮಳವಳ್ಳಿ; 3201; 1989; 0; 5190; 67.23
ಒಟ್ಟು; 19,179; 13877; 1; 33053; 69.88

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.