ADVERTISEMENT

ಕಾಡಾನೆ ದಾಳಿ: ರಾಗಿ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 11:35 IST
Last Updated 7 ನವೆಂಬರ್ 2019, 11:35 IST
ಆನೆ ದಾಳಿಯಿಂದಾಗಿ ಹಾಳಾಗಿರುವ ರಾಗಿ ಬೆಳೆಯೊಂದಿಗೆ ರೈತ ಕೃಷ್ಣ
ಆನೆ ದಾಳಿಯಿಂದಾಗಿ ಹಾಳಾಗಿರುವ ರಾಗಿ ಬೆಳೆಯೊಂದಿಗೆ ರೈತ ಕೃಷ್ಣ   

ಹಲಗೂರು: ಸಮೀಪದ ಬಸವನಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ದಾಳಿ ಮಾಡಿದ್ದರಿಮದ ಅಪಾರ ಮೌಲ್ಯದ ರಾಗಿ ಬೆಳೆ ನಾಶವಾಗಿದೆ.

ಗ್ರಾಮದ ನಾಲ್ಕು ಕಡೆ ಕಾಡಾನೆಗಳು ದಾಳಿ ಮಾಡಿದ್ದು, ಗ್ರಾಮದ ಕೃಷ್ಣ ಬಿನ್ ತಿಮ್ಮೇಗೌಡ, ಜವರೇಗೌಡ ಬಿನ್ ಕುಳ್ಳೇಗೌಡ, ಸುಂದ್ರಮ್ಮ ಕೋಂ ಶಿವಣ್ಣ, ಬೋರೇಗೌಡ ಬಿನ್ ಲಿಂಗೇಗೌಡ, ಸಿದ್ದಪ್ಪ ಮರೀಗೌಡ, ಶಿವಲಿಂಗೇಗೌಡ ಬಿನ್ ಕೊಣೇಗೌಡ, ಹೊನ್ನಮ್ಮ ಕೋಂ ಹೊನ್ನಯ್ಯ ಎಂಬುವವರಿಗೆ ಸೇರಿದ ಜಮೀನುಗಳಿಗೆ ಬುಧವಾರ ರಾತ್ರಿ ಆನೆಗಳು ನುಗ್ಗಿ ರಾಗಿ ಬೆಳೆಯನ್ನು ತಿಂದು, ತುಳಿದು ಹಾಕಿವೆ.

‘ಆರು ತಿಂಗಳಿನಿಂದ ಜಮೀನು ಸ್ವಚ್ಛ ಮಾಡಿ, ಬಿತ್ತನೆ ಮಾಡಿದ್ದೆವು. ಉತ್ತಮ ಫಸಲು ಬೆಳೆದು ರಾಗಿ ಕಾಚಕ್ಕಿ ಆಗಿತ್ತು. ಇಪ್ಪತ್ತು ದಿನಗಳಲ್ಲಿ ರಾಗಿ ಕೊಯ್ಲು ಮಾಡಬೇಕಿತ್ತು. ಜಮೀನಿನಲ್ಲಿ ಮರದ ಮೇಲೆ ಹಟ್ನೆ ಗುಡಿಸಲು ಮಾಡಿಕೊಂಡು ರಾತ್ರಿ ಪೂರ್ತಿ ನಿದ್ರೆ ಮಾಡದೇ ಆನೆಗಳನ್ನು ಕಾಯುತ್ತಿದ್ದೇವೆ. ತಮಟೆ ಶಬ್ದ ಮಾಡಿದರೂ ಆನೆಗಳು ಹೆದರದೇ ಬೆಳೆಯನ್ನು ತಿನ್ನುತ್ತಿವೆ. ಸಾಲ ಮಾಡಿ ಬೆಳೆದ ಫಸಲು ಕೈಗೆ ಬರುವಾಗ, ಬೆಳೆ ಕಾಡಾನೆಗಳ ಪಾಲಾಗುತ್ತಿದೆ’ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.

ADVERTISEMENT

‘ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೋಲಾರ್ ಬೇಲಿ ನಿರ್ಮಿಸಿ ಕೊಡಿ ಎಂದು ಹಲವು ಬಾರಿ ಮನವಿ ಮಾಡಿದ್ದೇವೆ. ಅರಣ್ಯಕ್ಕೆ ರಕ್ಷಣಾ ಬೇಲಿ ಹಾಕಿ ನಮ್ಮ ಗ್ರಾಮದ ಬೆಳೆಯನ್ನು ರಕ್ಷಿಸಬೇಕು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತರು ಅಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.