
ಭಾರತೀನಗರ: ಸಮೀಪದ ದೊಡ್ಡರಸಿನಕೆರೆ ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಏಳೂರಮ್ಮ ದೇವತೆಯ ‘ಸಿಡಿ’ ಹಬ್ಬವು 5 ವರ್ಷಗಳ ಬಳಿಕ ಫೆ.6ರಿಂದ ಫೆ.8ರವರೆಗೆ 3 ದಿನ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಈ ಹಿಂದೆ ಸಿಡಿ ಮರಕ್ಕೆ ಮನುಷ್ಯನನ್ನು ತೂಗು ಹಾಕಿ ರಥೋತ್ಸವ ನಡೆಸಲಾಗುತ್ತಿತ್ತು. ಈಗ ಸಿಡಿ ಕಂಬಕ್ಕೆ ಮನುಷ್ಯನ ರೀತಿ ಇರುವ ಗೊಂಬೆಯನ್ನು ತೂಗು ಹಾಕಲಾಗುತ್ತದೆ. ಸಿಡಿ ರಥವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಎಳೆದುಕೊಂಡು ಏಳೂರಮ್ಮ ದೇವಾಲಯದ ಸನ್ನಿಧಿಯಲ್ಲಿ ಅಂತ್ಯಗೊಳಿಸಲಾಗುತ್ತದೆ. ಫೆ.6ರಂದು ರಥೋತ್ಸವ ಜರುಗಲಿದೆ.
ಏಳೂರಮ್ಮ, ಕಾಳಮ್ಮ ದೇವಿಯರ ಪೂಜೆಗಳು, ಹಿರಿಸತ್ತಿಗೆ, ಚಿಕ್ಕಮ್ಮ ತಾಯಿ ಪೆಟ್ಟಿಗೆ, ಕಾಲಭೈರವೇಶ್ವರ ಬಸಪ್ಪಗಳ ಮೆರವಣಿಗೆ ಕೋಡ ರಥೋತ್ಸವದೊಂದಿಗೆ ಸಾಗಲಿದೆ. ಏಳೂರಮ್ಮ ದೇವತೆಯ ಹಬ್ಬವನ್ನು ಸುತ್ತಮುತ್ತಲ ಏಳು ಗ್ರಾಮದವರೆಲ್ಲ ಸೇರಿ ಜಾತ್ಯತೀತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಚೌಡೇಶ್ವರಿ, ಚಿಕ್ಕಮ್ಮ, ಮಸಣಕಮ್ಮ, ಲಕ್ಷ್ಮಿದೇವಿ ಈ 4 ದೇವಸ್ಥಾನಗಳ ಪುನರ್ ಪ್ರತಿಷ್ಠಾಪನಾ ಕಾರ್ಯವನ್ನು ಕೈಗೊಂಡಿದ್ದ ಹಿನ್ನೆಲೆಯಲ್ಲಿ ಕಳೆದ 5 ವರ್ಷಗಳಿಂದ ಹಬ್ಬವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಎಲ್ಲ ದೇವಾಲಯಗಳು ಉದ್ಘಾಟನೆಗೊಂಡ ಹಿನ್ನೆಲೆಯಲ್ಲಿ 5 ವರ್ಷಗಳ ನಂತರ ಆಚರಿಸಲಾಗುತ್ತಿದೆ.
ಅದ್ದೂರಿ ಕೊಂಡೋತ್ಸವ:
ಫೆ.7ರಂದು ಏಳೂರಮ್ಮ ದೇವಿಯ ದೇವಾಲಯದ ಮುಂದೆ ಕೊಂಡೋತ್ಸವ ನಡೆಯಲಿದೆ. 8ರಂದು ಕಾಲಭೈರವೇಶ್ವರಸ್ವಾಮಿ ದೇವರ ಒಕ್ಕಲಿನವರು ಸಿದ್ಧಭುಕ್ತಿಯನ್ನು ಆಚರಿಸಲಿದ್ದಾರೆ. ಫೆ.6ರಂದು ಬೆಳಿಗ್ಗೆಯಿಂದಲೇ ಗ್ರಾಮದಲ್ಲಿರುವ ದೇವತೆಗಳಿಗೆ ಹೋಮ ಮತ್ತು ಮಹಾಮಂಗಳಾರತಿ ನಡೆಯಲಿದ್ದು, ಸಂಜೆ 5 ಗಂಟೆಗೆ ಒಕ್ಕಲಿಗರ ಮಡೆ ಆಚರಣೆ ನಡೆಯಲಿದೆ. ಸಂಜೆ 6ರಿಂದ 8 ಗಂಟೆಯವರೆಗೆ ಬಂಡಿ ಉತ್ಸವ ಏರ್ಪಡಿಸಲಾಗಿದೆ.
ನಂತರ ತೇರಿನ (ಸಿಡಿಯ) ಜೊತೆಯಲ್ಲಿ ಚಿಕ್ಕತಾಯಮ್ಮ, ಹಿರಿಸತ್ತಿಗೆ, ಉಪಾಸನೆಗಳು ನಡೆಯುತ್ತವೆ. ಹೂ-ಹೊಂಬಾಳೆ ಉತ್ಸವ, ಬಂಡಿ ಉತ್ಸವ, ಕೋಲಾಟ, ಬೈಲಾಟ, ಪೂಜಾಕುಣಿತ, ವೀರಗಾಸೆ ಏರ್ಪಡಿಸಲಾಗಿದೆ.
ಮಡೆ ಉತ್ಸವ:
ರಾತ್ರಿ 11ರಿಂದ 12ರವರೆಗೆ ಅಮ್ಮನವರಿಗೆ ಮಡೆ, ಬಾಯಿಬೀಗ, ರಾತ್ರಿ 1 ಗಂಟೆಗೆ ಮೇಲೆ ದೇವರಹಳ್ಳಿ ಗ್ರಾಮದಿಂದ ಮಡೆ ಉತ್ಸವ ಜರುಗಲಿದೆ. ಫೆ.7ರಂದು ಬೆಳಿಗ್ಗೆ 7.30ಕ್ಕೆ ಏಳೂರಮ್ಮ, ಕಾಳಮ್ಮ, ಚಿಕ್ಕಮ್ಮ, ಹಿರಿಯಮ್ಮ, ಕಾಲ ಭೈರವೇಶ್ವರಸ್ವಾಮಿ, ಹಾಗೂ ಬಸಪ್ಪಗಳ ಉತ್ಸವದ ಜೊತೆಗೆ ಏಳೂರಮ್ಮ ದೇವಸ್ಥಾನದಲ್ಲಿ ಕೊಂಡೋತ್ಸವ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಚಿಕ್ಕಮ್ಮ ಮತ್ತು ಹಿರಿಯಮ್ಮನವರ ದೂಳುಮರಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
8ರಂದು ಬೆಳಿಗ್ಗೆ 8 ಗಂಟೆಗೆ ಗಂಗಾಮತಸ್ಥರ ಮಡೆಉತ್ಸವ ಏರ್ಪಡಿಸಲಾಗಿದೆ. ಈ ಗ್ರಾಮದ ಸಣ್ಣಕ್ಕಿರಾಯ ಹಾಗೂ ಕಾಲಭೈರವೇಶ್ವರ ಬಸವಪ್ಪಗಳ ಉತ್ಸವವು ಸಹ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.