ಮಳವಳ್ಳಿ: ಪರಾಗಸ್ಪರ್ಶ, ಬೀಜ ಪ್ರಸರಣ, ಕೀಟ, ಇಲಿ, ಹೆಗ್ಗಣಗಳನ್ನು ನಿಯಂತ್ರಿಸಿ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ರೈತರ ಮಿತ್ರ ಆಗಿರುವ ಪಕ್ಷಿಗಳ ಧಾಮವೊಂದು ತಾಲ್ಲೂಕಿನ ದುಗ್ಗನಹಳ್ಳಿಯಲ್ಲಿ ರೂಪುಗೊಂಡಿದೆ.
ಗ್ರಾಮದ ಮಹದೇಶ್ವರಸ್ವಾಮಿ ದೇವಸ್ಥಾನ ರಸ್ತೆಯ ಬದಿಯ ತಿಪ್ಪೆಗಳ ಮೇಲೆ ಬೆಳೆದಿರುವ ಗೊಬ್ಬಳಿ (ಜಾಲಿ) ಮರಗಳಲ್ಲಿ ಮೂರು ನಾಲ್ಕು ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಗೋವಕ್ಕಿಗಳು (ಕ್ಯಾಟೆಲ್ ಈಗ್ರೆಟ್) ಗೂಡು ಮಾಡಿವೆ. ಜೊತೆಗೆ ಮೂರ್ನಾಲ್ಕು ನೀರುಕಾಗೆ (ಲಿಟ್ಲ್ ಕಾರ್ಮೊರೆಂಟ್) ಮತ್ತು ನಿಶಾ ಬಕ (ನೈಟ್ ಹೆರಾನ್) ಪಕ್ಷಿಗಳು ಗೂಡು ಕಟ್ಟಿ ಮರಿ ಮಾಡುತ್ತಿವೆ. ಅವುಗಳು ಗೂಡು ಕಟ್ಟಲು ಕೊಕ್ಕಿನಲ್ಲಿ ಕಡ್ಡಿ ಹಿಡಿದು ಹಾರಿ ಬರುವುದು, ಮರಿಗಳಿಗೆ ತುತ್ತು ತರುವುದನ್ನು ನೋಡುವುದೇ ಒಂದು ಚೆಂದವಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಪಕ್ಷಿಗಳಿಗೆ ಸಾಕಷ್ಟು ಅನುಕೂಲಕರ ವಾತಾವರಣವಿದೆ. ಹಾಗಾಗಿ ದೂರ ದೂರದ ದೇಶಗಳಿಂದಲೂ ವಲಸೆ ಬಂದು ಮರಿಗಳನ್ನು ಮಾಡಿ ಹೋಗುತ್ತವೆ. ರಂಗನತಿಟ್ಟು, ಕೊಕ್ಕರೆ ಬೆಳ್ಳೂರು ಪ್ರಸಿದ್ಧ ಪಕ್ಷಿಧಾಮಗಳಾಗಿದ್ದು, ಅಲ್ಲದೇ ಅಲ್ಲಲ್ಲಿ ಗುಂಪು ಗುಂಪಾಗಿ ಸಾವಿರಾರು ಪಕ್ಷಿಗಳು ಗೂಡು ಕಟ್ಟಿ ಮರಿ ಮಾಡುತ್ತವೆ. ಜನರಲ್ಲಿನ ತಪ್ಪು ತಿಳಿವಳಿಕೆಯಿಂದ ಪಕ್ಷಿಗಳು ಸಂಕಟ ಎದುರಿಸುತ್ತಿವೆ.
ಹಲಗೂರು ಸರ್ಕಾರಿ ಬಸ್ ನಿಲ್ದಾಣದ ಎದುರು ದೇವಸ್ಥಾನದ ಹಿಂಭಾಗದ ಮರಗಳಲ್ಲಿ ಸಾವಿರಾರು ಬೂದುಬಕಗಳು (ಗ್ರೇ ಹೆರಾನ್) ಗೂಡು ಕಟ್ಟುತ್ತಿದ್ದವು. ಆದರೆ ದೇವಸ್ಥಾನದ ಮೇಲ್ಭಾಗದಲ್ಲಿ ಗಲೀಜು ಮಾಡುತ್ತವೆ ಎಂದು ಆ ಮರಗಳನ್ನು ಕಡಿದು ಹಾಕಿದ್ದರು. ಗುಳಘಟ್ಟ ಗ್ರಾಮದಲ್ಲೂ ನಾನಾ ಕಾರಣಗಳಿಂದ ಅಲ್ಲಿಂದ ಗೋವಕ್ಕಿಗಳ ಗೂಡುಗಳನ್ನು ಜನರು ನಾಶ ಮಾಡಿದ್ದರು. ಇಂಥ ಅನೇಕ ಘಟನೆಗಳು ನಿರಂತರವಾಗಿ ನಡೆಯುತ್ತಿವೆ.
ಪಕ್ಷಿಗಳಿಲ್ಲದ ದಿನ ಮನುಕುಲದ ಅವನತಿಯಾಗುತ್ತದೆ ಎಂದು ಪರಿಸರ ಮತ್ತು ಪಕ್ಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಸಾಯನಿಕ ಗೊಬ್ಬರ ಕ್ರಿಮಿನಾಶಕ ಔಷಧಗಳು, ಅರಣ್ಯ ನಾಶ, ಅರಣ್ಯ ಒತ್ತುವರಿ, ನಗರದ ಬೆಳವಣಿಗೆಯು ಪಕ್ಷಿಗಳ ಬದುಕಿಗೆ ಕುತ್ತು ತರುತ್ತಿದೆ. ಕೆಲವು ಪಕ್ಷಿಗಳು ತಮ್ಮ ಉಳಿವಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿರುವ ವೇಳೆಯಲ್ಲಿಯೇ ಮಳವಳ್ಳಿಯ ದುಗ್ಗನಹಳ್ಳಿಯಲ್ಲಿ ಒಂದು ಪುಟ್ಟ ಪಕ್ಷಿಧಾಮ ರೂಪುಗೊಂಡಿರುವುದು ಪರಿಸರ ಪ್ರೇಮಗಳಲ್ಲಿ ಸಂತಸ ಮೂಡಿಸಿದೆ.
ಇಲ್ಲಿನ ಕೆಲ ಜನರಿಗೆ ಈ ಸೌಂದರ್ಯವನ್ನು ಸವಿಯಲು ಪುರುಸೊತ್ತಿಲ್ಲವೋ, ಆಸಕ್ತಿ ಇಲ್ಲವೋ ತಿಳಿಯದು. ಯಾವಾಗ ಮರಗಳನ್ನು ಕಡಿದು ಬಿಡುವರೇನೋ ಎಂಬ ಆತಂಕ ಎದುರಾಗಿದೆ. ಸರ್ಕಾರ, ಪಕ್ಷಿ ಮತ್ತು ಪರಿಸರ ಪ್ರಿಯರು ಇಂತಹ ಪುಟ್ಟ, ಪುಟ್ಟ ಪಕ್ಷಿಧಾಮಗಳನ್ನು ಉಳಿಸುವ ಮೂಲಕ ಪಕ್ಷಿಗಳನ್ನು ಕಾಪಾಡಬೇಕಿದೆ. ಇಲ್ಲವಾದಲ್ಲಿ ಅವನತಿಯ ಹಾದಿ ತೀರಾ ಹತ್ತಿರದಲ್ಲೇ ಇದೆ ಎನ್ನುವ ಸಂಕಟ ಕಾಡುತ್ತಿದೆ. ಹೀಗಾಗಿ ತಾಲ್ಲೂಕು ಆಡಳಿತ ರಕ್ಷಣೆಯ ನಿರೀಕ್ಷೆಯಲ್ಲಿ ಪಕ್ಷಿ ಪ್ರೇಮಿಗಳಿದ್ದಾರೆ.
ಗೋವಕ್ಕಿಯ ವಿಶೇಷ
ಇದಕ್ಕೆ ಸ್ಥಳೀಯವಾಗಿ ‘ಬಿಳಿ ಕೊಕ್ಕರೆ’ ಎಂಬ ಹೆಸರಿದೆ. ವೈಜ್ಞಾನಿಕ ಹೆಸರು (ಬುಬುಲ್‌ಕಸ್ ಐಬಿಸ್). ಹಸು ಎಮ್ಮೆ ಮೇಯುವಾಗ ರೈತರು ಉಳುಮೆ ಮಾಡುವಾಗ ಮೇಲೇಳುವ ಕೀಟಗಳನ್ನು ಗುಂಪು ಗುಂಪಾಗಿ ಹೆಕ್ಕಿ ತಿನ್ನುತ್ತವೆ. ದೇಶದಲ್ಲಿ ನವೆಂಬರ್‌ನಿಂದ ಮಾರ್ಚ್ ದಕ್ಷಿಣ ಭಾರತದಲ್ಲಿ ಪಕ್ಷಿಗಳು ಗೂಡು ಕಟ್ಟುತ್ತವೆ. ಮೇ ಮಧ್ಯದಿಂದ ಜನವರಿ ತಿಂಗಳವರೆಗೂ ಅವುಗಳು ಮರಿ ಮಾಡುತ್ತವೆ.
‘ಈಗಾಗಲೇ ದುಗ್ಗನಹಳ್ಳಿಯಲ್ಲಿ ಕೆಲವು ಗೂಡು ಕಟ್ಟಿ ಕಾವು ಕೊಡುತ್ತಿವೆ. ಗುಂಪು ಗುಂಪಾಗಿ ಗೂಡು ಮಾಡುವ ಇವು ಕಡ್ಡಿಗಳನ್ನು ಜೋಡಿಸಿ ತೆಳುವಾದ ಗೂಡು ಕಟ್ಟಿ ತೆಳು ನೀಲಿ ಬಣ್ಣದ ಮೂರರಿಂದ ಐದು ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆ ಇಡುವ ಸಮಯದಲ್ಲಿ ಬಿಳಿ ಬಣ್ಣದಿಂದ ಕಿತ್ತಳೆ ಬಣ್ಣಕ್ಕೆ ಬದಲಾಗುತ್ತವೆ. ಗಂಡು ಹೆಣ್ಣು ಎರಡೂ ಎಲ್ಲ ಹಂತಗಳಲ್ಲೂ ಸಮಭಾಗಿಗಳಾಗಿ ಕೆಲಸ ಮಾಡುತ್ತವೆ’ ಎನ್ನುತ್ತಾರೆ ಪ್ರಗತಿಪರ ಚಿಂತಕ ಹಾಗೂ ಪಕ್ಷಿಗಳ ಪ್ರೇಮಿ ಎಂ.ವಿ. ಕೃಷ್ಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.