ADVERTISEMENT

ಪಾಂಡವಪುರ: ಬೇಬಿಬೆಟ್ಟದಲ್ಲಿ ಸ್ಫೋಟಕ ವಸ್ತು ಪತ್ತೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 3:37 IST
Last Updated 17 ಜುಲೈ 2021, 3:37 IST
ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದ ಸ.ನಂ.1ರಲ್ಲಿ ಗಣಿಗಾರಿಕೆಯ ಸ್ಫೋಟಕ ವಸ್ತುಗಳ ಪತ್ತೆಯಾಗಿರುವುದು.
ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದ ಸ.ನಂ.1ರಲ್ಲಿ ಗಣಿಗಾರಿಕೆಯ ಸ್ಫೋಟಕ ವಸ್ತುಗಳ ಪತ್ತೆಯಾಗಿರುವುದು.   

ಪಾಂಡವಪುರ (ಮಂಡ್ಯ): ಕೆಆರ್‌ಎಸ್ ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಬೇಬಿ ಬೆಟ್ಟದ ಸರ್ವೇ ನಂ.1ರಲ್ಲಿ ಗಣಿಗಾರಿಕೆಯನ್ನು ಜಿಲ್ಲಾಡಳಿತ ಸಂಪೂರ್ಣವಾಗಿ ನಿಷೇಧಿಸಿದ್ದರೂ ಶುಕ್ರವಾರ ಸ್ಫೋಟಕಗಳು ಪತ್ತೆಯಾಗಿವೆ.

ಬೇಬಿಬೆಟ್ಟದಲ್ಲಿನ ಆಶೀರ್ವಾದ ಕ್ರಷರ್ ಮಾಲೀಕರಿಗೆ ಸೇರಿದ ಕ್ವಾರಿಯೊಂದರ ಸಮೀಪ ಕಂಡು ಬಂದ ಸುಮಾರು 40 ಜಿಲಿಟನ್‌, ಡಿಟೋನೇಟರ್‌ ಹಾಗೂ ಮೆಗ್ಗರ್ ಬ್ಲಾಸ್ಟ್‌ಗೆ ಬಳಸಲಾಗುವ ವಾಹಕ (ವೈರ್‌)ಗಳನ್ನು ಕುರಿಗಾಹಿಗಳು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಆ ಕ್ವಾರಿ ಸ್ಥಳಕ್ಕೇ ಸುಮಲತಾ ಇತ್ತೀಚೆಗೆ ಭೇಟಿ ನೀಡಿದ್ದರು.

ಅವರ ಭೇಟಿ ಹಿನ್ನೆಲೆಯಲ್ಲಿ ಸ್ಫೋಟಕಗಳನ್ನು ಎಸೆದಿರಬಹುದು ಅಥವಾ ಅಕ್ರಮವಾಗಿ ಗಣಿಗಾರಿಕೆ ನಡೆಸುವ ಸಲುವಾಗಿ ಬಚ್ಚಿಟ್ಟಿರಬಹುದು. ನಾಲ್ಕೈದು ದಿನಗಳಿಂದ ಮಳೆಯಲ್ಲಿ ತೊಯ್ದಿರುವ ಎಲ್ಲಾ ಸ್ಫೋಟಕಗಳು ಜೀವಂತವಾಗಿದ್ದು ದನಕುರಿ ಮೇಯಿಸುವವರು ಬೀಡಿ, ಸಿಗರೇಟು ಸೇದಿ ಎಸೆದ ಬೆಂಕಿ ತಗುಲಿದ್ದರೆ ಅನಾಹುತ ಸಂಭವಿಸುತ್ತಿತ್ತು ಎನ್ನಲಾಗಿದೆ.

ADVERTISEMENT

ಗಣಿ ಸ್ಫೋಟದ ಶಬ್ದ: ’ಶುಕ್ರವಾರ ಸಂಜೆ ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ಗಣಿ ಸ್ಫೋಟದ ಶಬ್ದ ಕೇಳಿ ಬಂದಿತು’ ಎಂದು ಬೇಬಿ ಗ್ರಾಮದ ಜನರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.