ADVERTISEMENT

ರೈತ ಮಂಜೇಗೌಡ ಸಾವು: ಮೂಡನಹಳ್ಳಿಯಲ್ಲಿ ಮಡುಗಟ್ಟಿದ ದುಃಖ

ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 5:38 IST
Last Updated 6 ನವೆಂಬರ್ 2025, 5:38 IST
ಎಂ.ಡಿ. ಮಂಜೇಗೌಡ
ಎಂ.ಡಿ. ಮಂಜೇಗೌಡ   

ಕಿಕ್ಕೇರಿ: ‘ನಮ್ಮದು ಬಡ ಕುಟುಂಬ. ಅಧಿಕಾರಿಗಳು ನಮ್ಮ ಭಾವ ಮಂಜೇಗೌಡರ ಮನವಿಗೆ ಸ್ಪಂದಿಸಿದ್ದರೆ ಅವರು ಆತ್ಮಹತ್ಯೆಯ ಮೊರೆ ಹೋಗುತ್ತಿರಲಿಲ್ಲ. ನಮ್ಮ ಕುಟುಂಬ ಬೀದಿಗೆ ಬಿದ್ದಿದೆ. ಕೃಷಿ ಬಿಟ್ಟರೆ ಬೇರೆ ಆಧಾರವಿಲ್ಲ’ ಎಂದು ಮೃತರ ಸಹೋದರ ಅಣ್ಣಿಸ್ವಾಮಿ ಪತ್ನಿ ಮಹಾದೇವಿ ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಮೂಡನಹಳ್ಳಿ ಗ್ರಾಮದಲ್ಲಿ ರೈತ ಮಂಜೇಗೌಡರ ನಿಧನದಿಂದ ದುಃಖ ಮನೆ ಮಾಡಿತ್ತು. ಸ್ನೇಹಿತ ಮಂಜೇಗೌಡನನ್ನು ನೆನೆದು ರೈತ ಮುಖಂಡರು ಕಣ್ಣೀರು ಹಾಕಿದರು. ‘ಮೃತರ ಕುಟುಂಬಕ್ಕೆ ಸರ್ಕಾರ ಹೆಚ್ಚಿನ ನೆರವು ನೀಡಬೇಕು. ರೈತರ ಸಮಸ್ಯೆಗಳಿಗೆ ಅಧಿಕಾರಿಗಳೂ ಸ್ಪಂದಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು. 

‘ಮಂಜೇಗೌಡರ ಅಜ್ಜಿ ಹೊಂಬಮ್ಮ (ಬೋರೇಗೌಡರ ಪತ್ನಿ) ಬಹಳ ಹಿಂದೆ 20 ಗುಂಟೆ ಜಮೀನು ಖರೀದಿಸಿದ್ದರು. ಈ ಜಾಗವನ್ನು ಸರ್ಕಾರ ಭೂಸ್ವಾಧೀನ ಮಾಡಿಕೊಂಡು, ನಿವೇಶನ ಮಾಡಿ ಬಡವರಿಗೆ ಹಂಚಿಕೆ ಮಾಡಿತ್ತು. ಈ ಜಾಗಕ್ಕೆ ಪರ್ಯಾಯವಾಗಿ ಪರಿಹಾರವನ್ನು ನೀಡಿರಲಿಲ್ಲ’ ಎಂದು ಕುಟುಂಬಸ್ಥರು ಆರೋಪಿಸಿದರು.

ADVERTISEMENT

‘ಗ್ರಾಮದ ಸಮೀಪ ಇರುವ ಸರ್ಕಾರಿ ಬೀಳು ಜಾಗದಲ್ಲಿ ಕೃಷಿ ಮಾಡಲು ಮಂಜೇಗೌಡ ಮುಂದಾಗಿದ್ದರು. ಇದನ್ನು ಅಧಿಕಾರಿಗಳು ತಡೆದಿದ್ದರು. ಈ ಎಲ್ಲ ಸಮಸ್ಯೆಗಳ ನೋವಿಂದ ಬಳಲುತ್ತಿದ್ದರು. ಸಾಕಷ್ಟು ಬಾರಿ ಕೆ.ಆರ್. ಪೇಟೆ ತಹಶೀಲ್ದಾರ್ ಕಚೇರಿಗೆ ಮನವಿ ಮಾಡಲಾಗಿತ್ತು. ಮನವಿಗೆ ಅಧಿಕಾರಿಗಳು ಸ್ಪಂದಿಸದ ಕಾರಣ ಮಂಡ್ಯ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಳ್ಳಲು ಮಂಗಳವಾರ ತೆರಳಿದ್ದರು’ ಎಂದು ಕುಟುಂಬದವರು ತಿಳಿಸಿದರು.

ಕಿಕ್ಕೇರಿ ಸಮೀಪದ ಮೂಡನಹಳ್ಳಿ ರೈತ ಎಂ.ಡಿ. ಮಂಜೇಗೌಡರ ಮನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.