
ಕೆ.ಆರ್.ಪೇಟೆ: ‘ಕಂದಾಯ ಇಲಾಖೆಯ ನೌಕರರು ಸರ್ಕಾರದ ನಿಯಮಗಳನ್ನು ಪಾಲಿಸದೇ ಇರುವುದರಿಂದ ದಲ್ಲಾಳಿಗಳ ಮೂಲಕವೇ ರೈತರು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ತಾಲ್ಲೂಕು ಕಚೇರಿಯಲ್ಲಿ ಉದ್ಭವಿಸಿದೆ. ಯಾವ ದಾಖಲೆಗಳನ್ನು ಸರಿಪಡಿಸಿಕೊಡಲು ಎಷ್ಟೆಷ್ಟು ಹಣ ನೀಡಬೇಕು ಎಂಬುದನ್ನು ತಿಳಿಸಿ ಪುಣ್ಯ ಕಟ್ಟಿಕೊಳ್ಳಿ’ ಎಂದು ರೈತ ಮುಖಂಡ ಮುದುಗೆರೆ ರಾಜೇಗೌಡ ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು.
ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಹಶೀಲ್ದಾರ್ ಎಸ್.ಯು. ಅಶೋಕ್ ನೇತೃತ್ವದಲ್ಲಿ ನಡೆದ ರೈತರ ಕುಂದು–ಕೊರತೆಗಳ ಪರಿಶೀಲನಾ ಸಭೆಯಲ್ಲಿ ಅವರು ಮೇಲಿನಂತೆ ಹೇಳಿದರು.
‘ತಾಲ್ಲೂಕು ಕಚೇರಿ ಸೇವಾ ಕೇಂದ್ರವಾಗುವ ಬದಲು ‘ವ್ಯಾಪಾರಿ ಕೆಂದ್ರ’ವಾಗಿ ಪರಿವರ್ತನೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರೈತರೇ ಪ್ರಭುಗಳು ಎಂದು ಭಾಷಣ ಮಾಡುತ್ತೀರಿ. ಆದರೆ ಪ್ರಭುಗಳ ಮೇಲೆ ನೌಕರರ ದಬ್ಬಾಳಿಕೆ ನಡೆಯುತ್ತಿದೆ. ಕುಂದು–ಕೊರತೆಗಳ ಪರಿಶೀಲನಾ ಸಭೆಯಲ್ಲಿ ರೈತರು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ನೀತಿ ಪಾಠ ಹೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಾಚಿಕೆಗೇಡು’ ಎಂದು ಕಿಡಿಕಾರಿದರು.
‘ಪಟ್ಟಣದ ಎಪಿಎಂಸಿಗೆ ಸೇರಿದ 19 ಗುಂಟೆ ವ್ಯಕ್ತಿಯೊಬ್ಬರ ಹೆಸರಿಗೆ ಖಾತೆಯಾಗಿದ್ದು, ಖಾತೆ ಮಾಡಿದ ಸಿಬ್ಬಂದಿಯನ್ನು ಪತ್ತೆ ಹಚ್ಚಿ ಆತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ. ಆಸ್ತಿಯನ್ನು ಅಳತೆ ಮಾಡಿ ಆರ್‌ಟಿಸಿ ಇಂಡೀಕರಣ ಮಾಡಿಕೊಟ್ಟು ಸರ್ಕಾರಿ ಆಸ್ತಿಯನ್ನು ಸಂರಕ್ಷಿಸಿ’ ಎಂದರು.
‘ತಾಲ್ಲೂಕಿನ ತೇಗನಹಳ್ಳಿ ಬಳಿ ವ್ಯಕ್ತಿಯೊಬ್ಬರು ಸರ್ಕಾರಿ ಕೆರೆಯನ್ನೇ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ದೂರು ನೀಡಿದರೂ ಅಕ್ರಮ ತಡೆಗಟ್ಟಲು ಆಗಿಲ್ಲ. ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಬಳಿ ಸರ್ಕಾರಿ ನಾಲೆಯನ್ನು ಕೆಲವರು ಮುಚ್ಚಿ ಹಾಕಿದ್ದು, ನೀರು ಹರಿದು ಹೋಗದಂತೆ ತಡೆಯೊಡ್ಡಿದ್ದಾರೆ. ಇವರ ವಿರುದ್ಧ ಕ್ರಮಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇದುವರೆಗೂ ಮುಚ್ಚಿರುವ ನಾಲೆಯನ್ನು ತೆರವುಗೊಳಿಸಿಲ್ಲ. ಹೇಮಾವತಿ ನಾಲೆಗಳ ಮೇಲೆ ರಕ್ಷಣಾ ತಡೆಗೋಡೆಗಳನ್ನು ನಿರ್ಮಿಸಬೇಕೆಂಬ ಮನವಿಗೂ ಸ್ಪಂದಿಸಿಲ್ಲ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಿಂಭಾಗದ ರೈತರ ಜಮೀನಿಗೆ ಹೋಗಲು ರಸ್ತೆ ನಿರ್ಮಾಣವಾಗಿಲ್ಲ’ ಎಂದು ಗಮನ ಸೆಳೆದರು.
ಸಹಾಯಕ ಭೂಮಾಪನಾ ಅಧಿಕಾರಿ ಸಿದ್ದಯ್ಯ, ಉಪ ತಹಸೀಲ್ದಾರ್ ರವಿ, ವಿವಿಧ ಹೋಬಳಿಯ ಶಿರಸ್ತೇದಾರರುಗಳಾದ ಚಂದ್ರಕಲಾ, ನರೇಂದ್ರ, ರಾಜಮೂರ್ತಿ, ಜಯಸಿಂಹ, ಜ್ಞಾನೇಶ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಮಂದಗೆರೆ ಜಯರಾಂ, ಲಕ್ಷ್ಮೀಪುರ ಜಗದೀಶ್, ಕರೋಟಿ ತಮ್ಮಯ್ಯ, ಮುದ್ದುಕುಮಾರ್, ನಾಗೇಗೌಡ, ಚೌಡೇನಹಳ್ಳಿ ಕೃಷ್ಣೇಗೌಡ, ನಗರೂರು ಕುಮಾರ್, ಮರಡಹಳ್ಳಿ ರಾಮೇಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.