ADVERTISEMENT

ಮಂಡ್ಯ ಬಂದ್‌ಗೆ ವಿವಿಧ ಸಂಘಟನೆಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 13:04 IST
Last Updated 27 ಜುಲೈ 2020, 13:04 IST

ಮಂಡ್ಯ: ‘ಜುಲೈ 29ರಂದು ನಡೆಯಲಿರುವ ಮಂಡ್ಯ ಬಂದ್‌ಗೆ ವಿವಿಧ ಪ್ರಗತಿಪರ ಸಂಘಟನೆ ಮುಖಂಡರು, ಮಹಿಳಾ ಸಂಘಟನೆ ಸದಸ್ಯರು, ವರ್ತಕರು, ಪರಿಸರವಾದಿಗಳು ಬೆಂಬಲ ನೀಡಲಿದ್ದಾರೆ’ ಎಂದು ಕಾವೇರಿ-ಕೆಆರ್‌ಎಸ್‌ ಉಳಿವಿಗಾಗಿ ಜನಾಂದೋಲನ ಸಮಿತಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ ಹೇಳಿದರು.

‘ಇಡೀ ದಿನ ಸಾಂಕೇತಿಕವಾಗಿ ಬಂದ್ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ವರ್ತಕರು, ಪೆಟ್ರೋಲ್‌ ಬಂಕ್‌ ಮಾಲೀಕರು ಒಪ್ಪಿದ್ದಾರೆ. ಜಲಾಶಯದ ಸುತ್ತಮುತ್ತಲಿನ ಪರಿಸರ ಅತ್ಯಂತ ಸೂಕ್ಷ್ಮವಾಗಿದ್ದು ಅದನ್ನು ರಕ್ಷಣ ಮಾಡಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಿಷೇಧಾಜ್ಞೆ ನಡುವೆಯೂ ಕೆಆರ್‌ಎಸ್‌ ಜಲಾಶಯದ ಸುತ್ತಮುತ್ತ ರಾತ್ರಿಯ ವೇಳೆ ಗಣಿಗಾರಿಕೆ ನಡೆಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇದರಿಂದ 84 ವರ್ಷ ಹಳೆಯದಾದ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆ ಎದುರಾಗಿದೆ. ಮೆಗ್ಗರ್‌ ಬಳಸಿ ಕಲ್ಲು ಸ್ಫೋಟ ಮಾಡುತ್ತಿರುವ ಕಾರಣ ಭೂಕಂಪದ ತೀವ್ರತೆಗೆ ಸಮನಾದ ಗಂಭೀರ ಸಮಸ್ಯೆ ಎದುರಾಗಿದೆ. 20 ಕಿ.ಮೀ ವ್ಯಾಪ್ತಿಯ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ 2018ರಲ್ಲೇ ವರದಿ ನೀಡಿದೆ’ ಎಂದರು.

ADVERTISEMENT

‘ಕಾವೇರಿ ನಿರಾವರಿ ನಿಗಮ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಅರಣ್ಯ ಇಲಾಖೆ, ಕಂದಾಯ, ಕಾರ್ಮಿಕ, ಸಾರಿಗೆ ಇಲಾಖೆಗಳ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿತ್ತು. ಮುಖ್ಯಮಂತ್ರಿ ಹಾಗೂ ಸಚಿವರಿಗೂ ಮನವಿ ಮಾಡಲಾಗಿತ್ತು. ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ಬಾರದ ಕಾರಣ ಬಂದ್‌ ನಡೆಸಲು ನಿರ್ಧರಿಸಲಾಗಿದೆ’ ಎಂದರು.

ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಕನ್ನಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ, ಆರ್‌ಐ ಕಾರ್ಯಕರ್ತ ಕೆ.ಆರ್.ರವೀಂದ್ರ, ಕೃಷ್ಣ, ಕೋಣನಹಳ್ಳಿ ಹನುಮಂತು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.