
ಮಳವಳ್ಳಿ: ನಾಲಾ ಆಧುನೀಕರಣದಿಂದಾಗಿ ವಿಶ್ವೇಶ್ವರಯ್ಯ ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸದಿರುವ ಅಧಿಕಾರಿಗಳ ನಿರ್ಧಾರ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ(ಮೂಲ ಸಂಘಟನೆ)ದ ಕಾರ್ಯಕರ್ತರು ತಾಲ್ಲೂಕಿನ ಟಿ.ಕಾಗೇಪುರ ಕಾವೇರಿ ನೀರಾವರಿ ನಿಗಮದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ವಿವಿಧ ಗ್ರಾಮಗಳ ರೈತರೊಂದಿಗೆ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ತಾಲ್ಲೂಕು ಘಟಕದ ಅಧ್ಯಕ್ಷ ದೇವಿಪುರ ಬಸವರಾಜು ಹಾಗೂ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಸಿ.ಮಹೇಶ್ ನೇತೃತ್ವದಲ್ಲಿ ಜಮಾಯಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ‘ಕೆಆರ್‌ಎಸ್ ಜಲಾಶಯ ತುಂಬಿದ್ದರೂ ನಾಲಾ ಆಧುನೀಕರಣ ನೆಪದಲ್ಲಿ ನೀರು ಹರಿಸದಿರುವುದು ಸರಿಯಲ್ಲ. ರೈತರ ಬಗ್ಗೆ ಕಾಳಜಿ ಇಲ್ಲದ ರಾಜಕೀಯ ಪಕ್ಷಗಳು ನಡೆಯಿಂದ ರೈತರ ಬದುಕು ನಾಶವಾಗುತ್ತಿದೆ. ತುರುಗನೂರು, ಹೆಬ್ಬಕವಾಡಿ. ನಿಡಘಟ್ಟ ನಾಲಾ ವ್ಯಾಪ್ತಿಯ ನೂರಾರು ಎಕರೆಯ ಕಬ್ಬು, ತೆಂಗು, ರಾಗಿ, ರೇಷ್ಮೆ ಸೇರಿದಂತೆ ಇತರೆ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಯಾವುದೇ ಪೂರ್ವಭಾವಿ ಸಭೆ ನಡೆಸದಿರುವುದು ಖಂಡನೀಯ.ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ರಾಮಲಿಂಗೇಗೌಡ ಮಾತನಾಡಿ, ‘ಕಾಮಗಾರಿ ನಡೆಯುವ ಬಗ್ಗೆ ರೈತರಿಗೆ ಯಾವುದೇ ಮಾಹಿತಿಯನ್ನು ನೀಡದ ಹಿನ್ನೆಲೆಯಲ್ಲಿ ರೈತರು ಬೆಳೆಗಳನ್ನು ಹಾಕಿದ್ದಾರೆ. ನೀರಿಲ್ಲದೇ ಒಣಗಿದ್ದರೇ ನಷ್ಟಕೊಳಗಾದ ರೈತರು ಆತ್ಮಹತ್ಯೆಯ ಹಾದಿ ಹಿಡಿಯಬೇಕಾಗುತ್ತದೆ. ಕೂಡಲೇ ನೀರು ಹರಿಸುವ ಭರವಸೆ ನೀಡಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜು, ರಾಜ್ಯ ಘಟಕದ ಕಾರ್ಯದರ್ಶಿ ಶಿವನಂಜು, ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಸಿ.ಮಹೇಶ್, ಮುಖಂಡರಾದ ಆನಂದ್, ಮಲ್ಲೇಶ್, ಶೋ.ಶಿ.ಪ್ರಕಾಶ್, ಚೌಡಯ್ಯ, ಬಸವರಾಜು, ಜಯರಾಜು, ಚೌಡೇಗೌಡ, ಮಹದೇವಸ್ವಾಮಿ, ಶಿವಕುಮಾರ್, ಜಯರಾಮು ಪಾಲ್ಗೊಂಡಿದ್ದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಕಾವೇರಿ ನೀರಾವರಿ ನಿಗಮದ ಎಇಇ ಭರತೇಶ್ ಕುಮಾರ್ ಮಾತನಾಡಿ ‘ಕಳೆದ ಬಾರಿ ಕಟ್ಟು ನೀರು ಪದ್ಧತಿಯ ಮೂಲಕ ವ್ಯವಸಾಯಕ್ಕೆ ನೀರನ್ನು ನೀಡಿ ಕಾಮಗಾರಿಯನ್ನು ಕೂಡ ಮಾಡಲಾಯಿತು. ಪ್ರಸ್ತುತದಲ್ಲಿ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದಲ್ಲಿ ಉಪ ನಾಲೆಗಳು ಹಾಗೂ ಅದರ ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ಧಿಗೆ ಮುಂದಾಗಿದ್ದೇವೆ. ಇದ್ದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗಲಿದೆ. ಎಲ್ಲರೂ ಸಹಕಾರ ನೀಡಬೇಕು’ ಎಂದು ಹೇಳಿದರು. ಪ್ರಸ್ತುತದಲ್ಲಿ ನಾಟಿ ಮಾಡುವ ಬೆಳೆಗಳಿಗೆ ನೀರು ನೀಡುವುದಿಲ್ಲ. ಆದರೆ ಈಗಾಗಲೇ ಬೆಳೆದಿರುವ ಬೆಳೆಗಳಿಗೆ ಮಾತ್ರ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.