ಮದ್ದೂರು: ರಸಗೊಬ್ಬರದ ಪೂರೈಕೆಯಲ್ಲಿ ಲೋಪ ಸೇರಿದಂತೆ ಕೃಷಿ ಅಧಿಕಾರಿಗಳು ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ ಎಂದು ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಟಿಎಪಿಸಿಎಂಎಸ್‌ನ ಆವರಣದಲ್ಲಿ ಗುರುವಾರ ಕೃಷಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಕಬ್ಬು, ಭತ್ತ, ರಾಗಿ ಬೆಳೆಗಳ ಇಳುವರಿ ಹೆಚ್ಚಿಸುವ ತರಬೇತಿ ಹಾಗೂ ಅರಿವು ಕಾರ್ಯಕ್ರಮದಲ್ಲಿ ಈ ಪ್ರಸಂಗ ನಡೆಯಿತು.
ಕಾರ್ಯಕ್ರಮವು ಆರಂಭವಾಗುತ್ತಿದ್ದಂತೆಯೇ ಕಾರ್ಯಾಗಾರಕ್ಕೆ ಆಗಮಿಸಿದ್ದ ಬೆರಳೆಣಿಕೆಯಷ್ಟಿದ್ದ ರೈತರಲ್ಲಿ ಹಲವರು ಎದ್ದು ನಿಂತು ‘ನೀವು ರೈತರಿಗೆ ಯಾವುದೇ ಉಪಯುಕ್ತ ಮಾಹಿತಿ ನೀಡುತ್ತಿಲ್ಲ, ಅನುಕೂಲ ಮಾಡಿಕೊಡುತ್ತಿಲ್ಲ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದು ದೂರಿದರು.
ಉಪಯುಕ್ತ ಕಾರ್ಯಕ್ರಮವಿದ್ದರೂ ರೈತರಿಗೆ ಮುಂಚಿತವಾಗಿ ಏಕೆ ಮಾಹಿತಿ ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಸರಿಯಾಗಿ ಮಾಹಿತಿ ನೀಡಿದ್ದರೆ ಕುರ್ಚಿಗಳು ಖಾಲಿ ಇರುತ್ತಿರಲಿಲ್ಲ. ರೈತರಿಗೋಸ್ಕರ ಕಾರ್ಯಕ್ರಮ ಆಯೋಜಿಸಿದಿದ್ದೀರ, ಆದರೆ ಸೊಸೈಟಿ ಕಾರ್ಯದರ್ಶಿಗಳು, ರಸಗೊಬ್ಬರ ಹಾಗೂ ಕೀಟ ನಾಶಕ ಅಂಗಡಿಯವರೇ ಹೆಚ್ಚಾಗಿದ್ದಾರೆ ಎಂದು ಆಕ್ರೋಶಗೊಂಡರು.
ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಅವರು ನಮ್ಮ ಜಿಲ್ಲೆಯವರೇ ಆಗಿದ್ದರೂ ತಾಲ್ಲೂಕಿನಲ್ಲಿ ಯೂರಿಯಾ ಸೇರಿದಂತೆ ಅಗತ್ಯ ರಸಗೊಬ್ಬರಗಳ ಕೊರತೆಯಿದೆ. ರೈತರು ಏನಾದರೂ ಕೇಳಿದರೆ ಉಡಾಫೆ ಉತ್ತರ ನೀಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್ ಮಾತನಾಡಿ, ಇಲ್ಲಿನ ಸ್ಥಳೀಯ ಕೃಷಿ ಅಧಿಕಾರಿಗಳಿಂದ ಯಾವುದರಲ್ಲಿ ಲೋಪವಾಗಿದೆ ಎಂಬ ಮಾಹಿತಿ ಪಡೆಯುತ್ತೇನೆ ಎಂದು ಹೇಳಿ ರೈತರನ್ನು ಸಮಾಧಾನಪಡಿಸಿದ ಬಳಿಕ ಕಾರ್ಯಕ್ರಮ ಮುಂದುವರೆಯಿತು.
ಉಪ ಕೃಷಿ ನಿರ್ದೇಶಕ ಮುನೇಗೌಡ, ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ, ಟಿಎಪಿಸಿಎಂಎಸ್‌ನ ಅಧ್ಯಕ್ಷ ಮಹದೇವು, ಪಶುಸಂಗೋಪನಾ ಇಲಾಖೆಯ ಅಧಿಕಾರಿ ರವಿಶಂಕರ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್, ಅಧಿಕಾರಿಗಳಾದ ರೂಪಾ, ಗವಾಸ್ಕರ್ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.