ADVERTISEMENT

ಮಂಡ್ಯ | ಅಂತ್ಯಕ್ರಿಯೆಗೆ ಜಾಗವಿಲ್ಲ, ಸ್ಮಶಾನದಲ್ಲಿ ಅವಕಾಶವಿಲ್ಲ!

ಸಂಸ್ಕಾರಕ್ಕೆ ನಗರವಾಸಿಗಳಿಂದಲೇ ವಿರೋಧ, ಮೃತಪಟ್ಟವರ ತವರಿಗೆ ಸಾಗಿಸುವ ಅನಿವಾರ್ಯತೆ

ಎಂ.ಎನ್.ಯೋಗೇಶ್‌
Published 24 ಜುಲೈ 2020, 3:01 IST
Last Updated 24 ಜುಲೈ 2020, 3:01 IST
ಮೊಬೈಲ್‌ ಬೆಳಕಿನಲ್ಲಿ ರಹಸ್ಯವಾಗಿ ಅಂತ್ಯಕ್ರಿಯೆ ನೆರವೇರಿಸುತ್ತಿರುವುದು
ಮೊಬೈಲ್‌ ಬೆಳಕಿನಲ್ಲಿ ರಹಸ್ಯವಾಗಿ ಅಂತ್ಯಕ್ರಿಯೆ ನೆರವೇರಿಸುತ್ತಿರುವುದು   

ಮಂಡ: ಕೋವಿಡ್‌–19ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ನಗರದ ಸ್ಮಶಾನಗಳ ಬಳಿ ವಾಸಿಸುವ ಜನರು ಅವಕಾಶ ನೀಡುತ್ತಿಲ್ಲ. ಇಲ್ಲಿಯವರೆಗೂ ನಗರದಲ್ಲಿ ಪ್ರತ್ಯೇಕ ಜಾಗ ಗುರುತಿಸದ ಕಾರಣ ಮೃತದೇಹಗಳ ಅಂತ್ಯಕ್ರಿಯೆ ಕಗ್ಗಂಟಾಗಿ ಪರಿಣಮಿಸಿದೆ.

ನಗರದಲ್ಲಿ ವಾಸಿಸುವ ತಿಳಿವಳಿಕೆಯುಳ್ಳವರು, ವಿದ್ಯಾವಂತರೇ ಕೋವಿಡ್‌ ಮೃತದೇಹಗಳ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆಳವಾಡ ಗುಂಡಿ ತೋಡಿ ಮೃತದೇಹ ಹೂಳುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸರ್ಕಾರವೇ ಸ್ಪಷ್ಟಪಡಿಸಿದ್ದರೂ ಸ್ಥಳೀಯ ನಿವಾಸಿಗಳು ಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ಧಾರೆ. ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಪಕ್ಷಗಳು ಮುಖಂಡರು ಗುಂಪುಕಟ್ಟಿಕೊಂಡು ಬಂದು ಅಂತ್ಯಕ್ರಿಯೆ ತಡೆಯುತ್ತಿದ್ದಾರೆ.

ಮದ್ದೂರು, ಲೀಲಾವತಿ ಬಡಾವಣೆಯ ವ್ಯಕ್ತಿಯೊಬ್ಬರ ಮೃತದೇಹವನ್ನು ನಗರದ ಯತ್ತಗದಹಳ್ಳಿ ಬಳಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಜನರು ಬರುವುದಕ್ಕೂ ಮೊದಲೇ ಸಿಬ್ಬಂದಿ ತರಾತುರಿಯಲ್ಲಿ ಅಂತ್ಯಸಂಸ್ಕಾರ ಮುಗಿಸಿದ್ದರು. ನಂತರ ಸ್ಥಳಕ್ಕೆ ಬಂದ 500ಕ್ಕೂ ಹೆಚ್ಚು ಜನರು ತಹಶೀಲ್ದಾರ್‌ ವಿರುದ್ಧ ಮುಗಿಬಿದ್ದರು. ಮತ್ತೊಮ್ಮೆ ಇಲ್ಲಿಗೆ ಬಂದರೆ ಕಲ್ಲು ತೂರುವುದಾಗಿ ಎಚ್ಚರಿಕೆ ನೀಡಿದರು. ಈ ಘಟನೆಯಾದ ನಂತರ ಅಧಿಕಾರಿಗಳು ಯತ್ತಗದಹಳ್ಳಿಗೆ ಮೃತದೇಹ ಕೊಂಡೊಯ್ಯುವುದನ್ನು ನಿಲ್ಲಿಸಿದ್ದಾರೆ. ಈಗಲೂ ಅಲ್ಲಿ ಒಂದು ಗುಂಪು ಕಾಯುತ್ತಿದ್ದು ಅಂತ್ಯಕ್ರಿಯೆ ತಡೆಗೆ ಸಿದ್ಧವಾಗಿದೆ.

ADVERTISEMENT

ನಗರದ ಷುಗರ್‌ಟೌನ್‌ ಸ್ಮಶಾನಕ್ಕೆ ಪಾಂಡವಪುರ ತಾಲ್ಲೂಕಿನ ವ್ಯಕ್ತಿಯೊಬ್ಬರ ಮೃತದೇಹವನ್ನು ಕೊಂಡೊಯ್ಯಲಾಗಿತ್ತು. ಆದರೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಅಲ್ಲಿ ಸಂಸ್ಕಾರ ನಡೆಸಲು ಸಾಧ್ಯವಾಗಲಿಲ್ಲ. ಅನಿವಾರ್ಯವಾಗಿ ಪಾಂಡವಪುರ ಬಳಿಯ ಮೃತ ವ್ಯಕ್ತಿಯ ಜಮೀನಿನವರೆಗೂ ಮೃತದೇಹ ಕೊಂಡೊಯ್ಯಬೇಕಾಯಿತು. ಗ್ರಾಮದಲ್ಲೂ ವಿರೋಧ ವ್ಯಕ್ತವಾದ ಕಾರಣ ಅಧಿಕಾರಿಗಳು ಪೊಲೀಸ್‌ ಭದ್ರತೆಯಲ್ಲಿ ಸಂಸ್ಕಾರ ನೆರವೇರಿಸಬೇಕಾಯಿತು.

ಅದೇ ರೀತಿ ಸಂತೇಮಾಳದ ಬಳಿ ಇರುವ ಸ್ಮಶಾನದಲ್ಲೂ ಅಂತ್ಯಕ್ರಿಯೆಗೆ ಜನರು ಅಡ್ಡಿ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯ ನಿವಾಸಿಗಳೊಂದಿಗೆ ಅಧಿಕಾರಿಗಳು ಸಭೆ ನಡೆಸಿದರೂ ಅಂತ್ಯಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದೇ ಜನರು ತಿಳಿಸಿದ್ದಾರೆ. ಗುತ್ತಲು, ಶಂಕರನಗರ, ಕಲ್ಲಹಳ್ಳಿ, ಆಲಹಳ್ಳಿ ಸೇರಿದಂತೆ ಹಲವು ಬಡಾವಣೆಗಳಲ್ಲಿರುವ ಸ್ಮಶಾನಗಳಲ್ಲಿ ಅಂತ್ಯ ಸಂಸ್ಕಾರಕ್ಕೆ ಅಡ್ಡಿ ವ್ಯಕ್ತಪಡಿಸುತ್ತಿದ್ದು ಅಧಿಕಾರಿಗಳಿಗೆ ತಲೆನೋವಾಗಿದೆ.

‘ನಾವು ಸ್ವಯಂಪ್ರೇರಿತವಾಗಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದೇವೆ. ತಹಶೀಲ್ದಾರ್‌, ನಗರಸಭೆ ಎಂಜಿನಿಯರ್‌ ನಮ್ಮ ಜೊತೆಯಲ್ಲಿ ಇರುತ್ತಾರೆ. ಆದರೆ ಸ್ಥಳೀಯರು ನಮ್ಮ ಮೇಲೆ ಹಲ್ಲೆ ಮಾಡಲು ಬರುತ್ತಿದ್ದಾರೆ. ಇದರಿಂದಾಗಿ ಅಂತ್ಯಕ್ರಿಯೆಗೆ ತೆರಳಲು ಭಯವಾಗುತ್ತದೆ. ವಿದ್ಯಾವಂತರು, ತಿಳಿದವರೇ ಅಂತ್ಯಕ್ರಿಯೆ ವಿರೋಧಿಸುತ್ತಿರುವುದು ಸರಿಯಲ್ಲ’ ಎಂದು ಅಂತ್ಯಕ್ರಿಯೆ ನಡೆಸುವ ತಂಡದ ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.

ದುದ್ದ ಬಳಿಯೂ ಅಡ್ಡಿ: ತಾಲ್ಲೂಕು ಆಡಳಿತದ ವತಿಯಿಂದ ದುದ್ದ ಬಳಿ ಇರುವ ಅರಣ್ಯ ಪ್ರದೇಶದಲ್ಲಿ ಕೋವಿಡ್‌ ಮೃತದೇಹಗಳ ಅಂತ್ಯಕ್ರಿಯೆಗೆ 5 ಎಕರೆ ಜಾಗ ಗುರುತಿಸಲಾಗಿತ್ತು. ಜೆಸಿಬಿ ಜೊತೆ ತೆರಳಿ ಜಾಗ ಮಟ್ಟ ಮಾಡುವ ಕಾಮಗಾರಿಯೂ ನಡೆದಿತ್ತು. ಆದರೆ ಸ್ಥಳೀಯರು ಪ್ರತಿಭಟನೆ ನಡೆಸಿ ಕಾಮಗಾರಿ ತಡೆದ ಕಾರಣ ಅಧಿಕಾರಿಗಳು ಆ ಜಾಗವನ್ನು ಕೈಬಿಟ್ಟರು.

ನಗರ ವ್ಯಾಪ್ತಿಯಲ್ಲಿ 15 ಸ್ಮಶಾನಗಳಿದ್ದು ಬಹುತೇಕ ಕಡೆ ಸಂಸ್ಕಾರಕ್ಕೆ ವಿರೋಧ ವ್ಯಕ್ತವಾಗಿದೆ. ಪ್ರತ್ಯೇಕ ಜಾಗ ಗುರುತಿಸಬೇಕು ಎಂಬ ಒತ್ತಡ ಹೆಚ್ಚಾಗಿದೆ.

ಮೊಬೈಲ್‌ ಬೆಳಕಲ್ಲಿ ರಹಸ್ಯ ಸಂಸ್ಕಾರ!
ಬುಧವಾರ ಕೋವಿಡ್‌ನಿಂದ ಮೃತಪಟ್ಟ ಮಹಿಳೆಯೊಬ್ಬರ ಮೃತದೇಹವನ್ನು ನಗರದ ಸ್ಮಶಾನವೊಂದರಲ್ಲಿ ರಹಸ್ಯವಾಗಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

‘ರಾತ್ರಿ 8ರ ನಂತರ ಯಾರಿಗೂ ತಿಳಿಯದ ರೀತಿಯಲ್ಲಿ ಮೃತದೇಹ ಕೊಂಡೊಯ್ದೆವು. ಆಂಬುಲೆನ್ಸ್‌ ಹೈಡ್‌ಲೈಟ್‌ ಸ್ಥಗತಗೊಳಿಸಿ ಸ್ಮಶಾನ ತಲುಪಿದೆವು. ನಂತರ ಮೊಬೈಲ್‌ ಬೆಳಕು ಹಾಗೂ ಮೃತವ್ಯಕ್ತಿಯ ಸಂಬಂಧಿಕರ ಬೈಕ್‌ಗಳ ಹೆಡ್‌ಲೈಟ್‌ ಹಾಕಿಸಿ ಸಂಸ್ಕಾರ ಮಾಡಿದೆವು. ಇದು ಸ್ಥಳೀಯರಿಗೆ ತಿಳಿಯದ ಕಾರಣ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ’ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

*
ಮೃತಪಟ್ಟ ವ್ಯಕ್ತಿಗಳ ತಾಲ್ಲೂಕು ವ್ಯಾಪ್ತಿಯಲ್ಲಿ ಸ್ಮಾಶಾನ ಗುರುತಿಸಲಾಗಿದ್ದು ಅಲ್ಲೇ ಅಂತ್ಯಸಂಸ್ಕಾರ ನೆರವೇರಿಸಲು ಸೂಚನೆ ನೀಡಲಾಗಿದೆ.
–ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.