ADVERTISEMENT

ಪ್ರವಾಹ ಭೀತಿ: ಕಾವೇರಿ ನದಿಗೆ ಇಳಿಯದಂತೆ ಸೂಚನೆ

ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಳ; ಹೊರಹರಿವು ಒಂದು ಲಕ್ಷ ಕ್ಯುಸೆಕ್‌ಗೆ ಹೆಚ್ಚಳವಾಗುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 12:25 IST
Last Updated 10 ಆಗಸ್ಟ್ 2020, 12:25 IST
ಶ್ರೀರಂಗಪಟ್ಟಣದ ಕಾವೇರಿಪುರ (ಹಳೆ ಸಂತೆಮಾಳ)ಕ್ಕೆ ತಹಶೀಲ್ದಾರ್‌ ಎಂ.ವಿ. ರೂಪಾ ಹಾಗೂ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಭಾನುವಾರ ಭೇಟಿ ನೀಡಿ ನದಿಗೆ ಇಳಿಯದಂತೆ ಜನರಿಗೆ ಸೂಚನೆ ನೀಡಿದರು
ಶ್ರೀರಂಗಪಟ್ಟಣದ ಕಾವೇರಿಪುರ (ಹಳೆ ಸಂತೆಮಾಳ)ಕ್ಕೆ ತಹಶೀಲ್ದಾರ್‌ ಎಂ.ವಿ. ರೂಪಾ ಹಾಗೂ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಭಾನುವಾರ ಭೇಟಿ ನೀಡಿ ನದಿಗೆ ಇಳಿಯದಂತೆ ಜನರಿಗೆ ಸೂಚನೆ ನೀಡಿದರು   

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಅಣೆಕಟ್ಟೆಯ ನೀರಿನ ಮಟ್ಟ 120 ಅಡಿ ಗಡಿ ದಾಟಿದೆ. ನದಿಗೆ ಹರಿಸುವ ನೀರಿನ ಪ್ರಮಾಣ 1 ಲಕ್ಷ ಕ್ಯುಸೆಕ್‌ ದಾಟುವ ಸಾಧ್ಯತೆ ಇದ್ದು, ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ.

ನದಿ ದಡದ ಗದ್ದೆಗಳು, ಕಟ್ಟಡಗಳು ಈಗಾಗಲೇ ಜಲಾವೃತವಾಗಿವೆ. ನಿಮಿಷಾಂಬಾ ದೇವಾಲಯದ ಮೆಟ್ಟಿಲುಗಳವರೆಗೂ ನೀರು ಬಂದಿದೆ. ಕಾವೇರಿ ನದಿಯಲ್ಲಿ ನೀರಿನ ಸೆಳೆತ ಜೋರಾಗಿದ್ದು, ಪ್ರವಾಹ ಭೀತಿ ಎದುರಾಗಿದೆ. ನದಿ ತೀರದ ವಾಸಿಗಳು ನದಿಗೆ ಇಳಿಯಬಾರದು ಎಂದು ತಹಶೀಲ್ದಾರ್‌ ಎಂ.ವಿ. ರೂಪಾ ಭಾನುವಾರ ಸೂಚಿಸಿದರು.

ಪಟ್ಟಣದ ವೆಲ್ಲೆಸ್ಲಿ ಸೇತುವೆ, ಕಾವೇರಿಪುರ, ಗಂಜಾಂ ನಿಮಿಷಾಂಬ ದೇವಾಲಯ ಇತರೆಡೆ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

‘ಕೆಆರ್‌ಎಸ್‌ ಜಲಾಶಯಕ್ಕೆ ಒಳ ಹರಿವು ಹೆಚ್ಚಾದರೆ ನದಿಯ ಮಟ್ಟ ಮತ್ತಷ್ಟು ಹೆಚ್ಚಲಿದೆ. ಹಾಗಾದರೆ ನದಿ ಅಂಚಿನಲ್ಲಿರುವವರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಸ್ಥಳೀಯ ಮುಖಂಡರು ಜನರಿಗೆ ತಿಳಿ ಹೇಳಬೇಕು’ ಎಂದರು.

‘ಸದ್ಯದ ಪರಿಸ್ಥಿತಿಯಲ್ಲಿ ಕೃಷಿ ಜಮೀನಿಗೆ ಅಲ್ಲಲ್ಲಿ ನೀರು ಹರಿದಿರುವುದನ್ನು ಬಿಟ್ಟರೆ ಬೇರೆ ಸಮಸ್ಯೆ ಉಂಟಾಗಿಲ್ಲ. ಮನೆ ಇತರೆ ಆಸ್ತಿಪಾಸ್ತಿ ನಷ್ಟವಾಗಿಲ್ಲ. ಎಲ್ಲಿಯಾದರೂ ನಷ್ಟ ಆಗಿದ್ದರೆ ವರದಿ ನೀಡುವಂತೆ ಕಂದಾಯ ಇಲಾಖೆ ಸಿಬ್ಬಂದಿಗೆ ಸೂಚಿಸಿದ್ದೇನೆ’ ಎಂದರು. ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಜತೆಗಿದ್ದರು.

ನದಿ ತೀರದಲ್ಲಿ ಜನದಟ್ಟಣೆ: ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನದಿಗೆ 75 ಸಾವಿರ ಕ್ಯುಸೆಕ್‌ ನೀರು ಹರಿಸುತ್ತಿದ್ದು, ಮೈದುಂಬಿ ಹರಿಯುತ್ತಿರುವ ನದಿಯನ್ನು ಜನರು
ಕಣ್ತುಂಬಿಕೊಂಡರು.

ಒಂದು ವರ್ಷದ ಬಳಿಕ ಉಕ್ಕಿ ಹರಿಯುತ್ತಿರುವ ನದಿಯನ್ನು ಕಂಡು ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವವರು ಪಟ್ಟಣದ ಹೊಸ ಸೇತುವೆ ಮೇಲೆ ನಿಂತು ಬೆರಗಿನಿಂದ ನೋಡುತ್ತಿದ್ದಾರೆ.

ನದಿ ತೀರದಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಮೈದುಂಬಿ ಹರಿಯುತ್ತಿರುವ ನದಿ ನೋಡಲು ಗ್ರಾಮೀಣ ಪ‍್ರದೇಶದ ಜನರು ತಂಡ ತಂಡವಾಗಿ
ಧಾವಿಸುತ್ತಿದ್ದಾರೆ.

ಪಟ್ಟಣದ ಸಾಯಿಬಾಬಾ ಅಶ್ರಮ, ಪಶ್ಚಿಮ ವಾಹಿನಿ ಬಳಿ ಕೂಡ ಜನರು ಕಾವೇರಿ ನದಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಪಾನಿಪೂರಿ, ಚುರುಮುರಿ ಮತ್ತು ಹಣ್ಣು ಮಾರುವ ಸಂಚಾರಿ ಅಂಗಡಿಗಳು ನದಿ ತೀರದಲ್ಲಿ ತಲೆ ಎತ್ತಿವೆ.

ಸೇತುವೆಗಳ ಮೇಲೆ ಜನರು ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದು, ಇತರೆ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಪೊಲೀಸರನ್ನು ನಿಯೋಜಿಸಿ, ಜನ ದಟ್ಟಣೆ ಕಡಿಮೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.