ಪಾಂಡವಪುರ: ಪಟ್ಟಣದಲ್ಲಿ 200 ವರ್ಷಗಳಿಗೂ ಹೆಚ್ಚು ಹಳೆಯದಾದ ಫೆಂಚ್ ಸೈನಿಕರ ಮತ್ತು ಅಧಿಕಾರಿಗಳ ಸಮಾಧಿಗಳು ಹಾಗೂ ಮದ್ದಿನ ಮನೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಶಿಥಿಲಾವಸ್ಥೆ ತಲುಪಿವೆ.
ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರನ್ನು ಹೊಡೆದೊಡಿಸಲು ಶ್ರೀರಂಗಪಟ್ಟಣದ ಟಿಪ್ಪುಸುಲ್ತಾನ್ ಫ್ರೆಂಚರ ಸಹಾಯ ಪಡೆಯುತ್ತಾನೆ. ಫ್ರೆಂಚ್ ಸೈನಿಕರು ಬ್ರಿಟಿಷರ ವಿರುದ್ಧ ಹೋರಾಡಲು ಪಾಂಡವಪುರ ಸಮೀಪದ ಕುಂತಿಬೆಟ್ಟದಲ್ಲಿ ನೆಲೆಸುತ್ತಾರೆ. ಈ ಬೆಟ್ಟಕ್ಕೆ ಫ್ರೆಂಚ್ ರಾಕ್ಸ್ ಎಂದೂ ಕರೆಯಲಾಗುತ್ತದೆ. ಪಾಂಡವಪುರದ ಪೂರ್ವ ಹೆಸರು ಫ್ರೆಂಚ್ ರಾಕ್ಸ್ ಎಂದು ಹೆಸರಿದ್ದನ್ನು ಸ್ಮರಿಸಬಹುದು.
ಪಾಂಡವಪುರದಲ್ಲಿ ವಾಸವಾಗಿದ್ದ ಫ್ರೆಂಚ್ ಸೈನಿಕರು ಮತ್ತು ಅಧಿಕಾರಿಗಳು ಯುದ್ಧದಲ್ಲಿ ಮಡಿದ ನಂತರ ಹಾರೋಹಳ್ಳಿ ಬಳಿ ಸಮಾಧಿ ನಿರ್ಮಿಸಲಾಗಿದ್ದು, ಇಂತಹ 25ಕ್ಕೂ ಹೆಚ್ಚು ಸಮಾಧಿ ಇಲ್ಲಿವೆ. ಇದರಲ್ಲಿ ಸೈನಿಕರ ಪತ್ನಿಯರ ಸಮಾಧಿಯೂ ಇದೆ. ಇಲ್ಲಿನ ಒಂದು ಸಮಾಧಿಯು ಶಾಸನದ ಪ್ರಕಾರ 24 ವರ್ಷದ ಒಬ್ಬ ಮಿಲಿಟರಿ ಅಧಿಕಾರಿಯ ಪತ್ನಿಯ ಸಮಾಧಿಯಾಗಿದ್ದು, ಅವರು ಮಗುವಿಗೆ ಜನ್ಮಕೊಡುವ ಸಂದರ್ಭದಲ್ಲಿ ಮರಣ ಹೊಂದಿರುವುದನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಸಮಾಧಿಗಳಿಗೆ ಬಳಸಿರುವ ಕಲ್ಲುಗಳು, ಶಾಸನಗಳನ್ನು ಕೆಲವರು ಕಿತ್ತುಕೊಂಡು ಹೋಗಿದ್ದರೆ, ಮತ್ತೆ ಕೆಲವು ದನದ ಕೊಟ್ಟಿಗೆಗಾಗಿ ಮಾರ್ಪಾಡಾಗಿವೆ. ಜಾನುವಾರುಗಳು ಇಲ್ಲಿಯೇ ಮೇಯುತ್ತವೆ.
‘ಇಂತಹ ಅಪರೂಪದ ಶಾಸನಗಳನ್ನು ವಿದೇಶಿಯರ ಸಮಾಧಿಗಳನ್ನು ಸರಿಯಾಗಿ ಸಂರಕ್ಷಣೆ ಮಾಡಿ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಿದರೆ ಫ್ರಾನ್ಸ್‌ನಿಂದ ಬರುವ ಅನೇಕ ಪ್ರವಾಸಿಗರನ್ನು ಇಲ್ಲಿಗೆ ಬರುವಂತೆ ಮಾಡಬಹುದು. ಅದಕ್ಕಿಂತಲೂ ಹೆಚ್ಚಾಗಿ ಇವುಗಳನ್ನು ವಿದೇಶಿಯರ ಸ್ಮಾರಕಗಳನ್ನಾಗಿ ನಾವು ಸಂರಕ್ಷಣೆ ಮಾಡಿದರೆ ಮುಂದಿನ ಪೀಳಿಗೆಗೆ ಅದರ ಬಗ್ಗೆ ಹೆಚ್ಚಿನ ಅಭಿಮಾನವಿರುತ್ತದೆ’ ಎನ್ನುತ್ತಾರೆ ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು.
ಪಟ್ಟಣದ ಕೆ.ಆರ್.ಎಸ್. ಮುಖ್ಯ ರಸ್ತೆಯ ಬಿಇಒ ಕಚೇರಿ ಸಮೀಪ ಟಿಪ್ಪು ಕಾಲದ ಮದ್ದುಗುಂಡಗಳನ್ನು ಸಂಗ್ರಹಿಸಿಡುತ್ತಿದ್ದ, ಕಬ್ಬಿಣವನ್ನು ಬಳಸದೆ ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಿರುವ ‘ಮದ್ದುಗುಂಡು ಸಂಗ್ರಹಾಲಯ’ (ಮದ್ದಿನ ಮನೆ) ಇದೆ. ಈಗ ಇದು ಶಿಥಿಲಾವಸ್ಥೆಯಲ್ಲಿದ್ದು, ದನಕರು ಕಟ್ಟುವ, ಹುಲ್ಲಿನ ಬಣವೆ ಸಂಗ್ರಹದ ಸ್ಥಳವಾಗಿದೆ.
ಈ ಹಿಂದೆ ಪಾಂಡವಪುರ ಉಪ ವಿಭಾಗಾಧಿಕಾರಿಯಾಗಿ ಕೆಲಸ ಮಾಡಿದ್ದ ಎಚ್.ಎಲ್.ನಾಗರಾಜು ಅವರು ಸ್ಥಳ ಪರಿಶೀಲನೆ ನಡೆಸಿ, ಇವುಗಳ ಸಂರಕ್ಷಣೆಗಾಗಿ ಮೈಸೂರಿನಲ್ಲಿರುವ ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕ ಗವಿಸಿದ್ದಯ್ಯ ಅವರಿಗೆ ಪತ್ರ ಬರೆದಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ.
ಶ್ರೀರಂಗಪಟ್ಟಣದಲ್ಲಿರುವ ಇದೇ ರೀತಿಯ ಮದ್ದಿನ ಮನೆಗಳನ್ನು ಕೇಂದ್ರ ಪುರಾತತ್ವ ಸರ್ವೇಕ್ಷಣಾಲಯ ಸಂರಕ್ಷಿತ ಸ್ಮಾರಕವೆಂದು ಘೋಷಣೆ ಮಾಡಿ ಸಂರಕ್ಷಿಸಿದೆ. ಆದರೆ ಪಾಂಡವಪುರದ ಮದ್ದುಗುಂಡು ಸಂಗ್ರಹಾಲಯ ಅನಾಥವಾಗಿ ಬಿದ್ದಿದೆ. ಮದ್ದಿನ ಮನೆ ಸಂರಕ್ಷಣೆ ಮತ್ತು ಸುರಕ್ಷತೆಯನ್ನು ಪುರಾತತ್ವ ಇಲಾಖೆಯ ಹೊಣೆಗಾರಿಕೆಯಾಗಿದೆ. ಅದನ್ನು ಸಂರಕ್ಷಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
‘ತನ್ನ ಪ್ರಾಚೀನ ಸ್ಮಾರಕ ಅಥವಾ ಪಳಯುಳಿಕೆಗಳನ್ನು ಒಂದು ಸಮಾಜ ತನ್ನ ಪರಂಪರೆ ಮತ್ತು ಸಂಸ್ಕೃತಿಯ ಅಂಗ, ಮತ್ತು ಅಪೂರ್ವ ಸಾಕ್ಷ್ಯ ಎಂದು ತಿಳಿಯಬೇಕು. ನಮ್ಮಲ್ಲಿ ಇಂತಹ ತಿಳಿವಳಿಕೆಯ ಕೊರತೆ ಇರುವುದರಿಂದಲೇ ಅದೆಷ್ಟೋ ಪ್ರಾಚೀನ ಪಳಯುಳಿಕೆಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸಿ ಕಾಪಾಡಿಕೊಂಡು ಹೋಗುವ ಕೆಲಸ ಆಗಿಲ್ಲ. ಫ್ರೆಂಚ್ ಸೈನಿಕರ ಸಮಾಧಿಗಳು ಹಾಗೂ ಮದ್ದಿನ ಮನೆಯ ಸಮಸ್ಯೆ ಬಹಳ ಹಳೆಯದ್ದು, ಈಗಲಾದರೂ, ಸಂಬಂಧಪಟ್ಟ ಇಲಾಖೆಯು ಸಂರಕ್ಷಿಸುವ ಕ್ರಮವಹಿಸಬೇಕಿದೆ’ ಎಂದು ಒತ್ತಾಯಿಸುತ್ತಾರೆ ಸಾಹಿತಿ ಚಿಕ್ಕಮರಳಿ ಬೋರೇಗೌಡ.
ಪಾಂಡವಪುರದಲ್ಲಿರುವ ಫ್ರೆಂಚ್ ಸೈನಿಕರ ಅಧಿಕಾರಿಗಳ ಸಮಾಧಿ ಹಾಗೂ ಮದ್ದಿನ ಮನೆಯನ್ನು ಸಂರಕ್ಷಿಸುವ ಸಂಬಂಧ ಪುರಸಭೆ ಮುಖ್ಯಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಪರಿಶೀಲಿಸಿ ಕ್ರಮವಹಿಸಲು ಸೂಚಿಸಲಾಗುವುದು. ಪುರಾತತ್ವ ಇಲಾಖೆಗೆ ಪತ್ರ ಬರೆದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು.ಕುಮಾರ್, ಜಿಲ್ಲಾಧಿಕಾರಿ
ಆಂಗ್ಲೋ–ಮೈಸೂರು ಯುದ್ಧದ ಕಾಲದಲ್ಲಿ ಟಿಪ್ಪು ಸಹಾಯಕ್ಕಾಗಿ ಫ್ರೆಂಚ್ ಸೈನ್ಯ ಹಿರೋಡೆಗೆ ಬಂದು ಕುಂತಿಬೆಟ್ಟದಲ್ಲಿ ತಂಗಿತ್ತು. ಇದಕ್ಕಾಗಿ ನಮ್ಮ ತಾಲ್ಲೂಕಿಗೆ ಫ್ರೆಂಚ್ ರಾಕ್ಸ್ ಎಂಬ ಹೆಸರು ಬಂತು. ಈ ಫ್ರೆಂಚ್ ರಾಕ್ಸ್ ನೆನಪಿಗಾದರೂ ಪಟ್ಟಣದ ಹಾರೋಹಳ್ಳಿ ಬಳಿ ಇರುವ ಫ್ರೆಂಚ್ ಸೈನಿಕ ಸಮಾಧಿಯನ್ನು ಸಂರಕ್ಷಣೆ ಮಾಡಬೇಕಿದೆ.ಪ್ರೊ.ವೆಂಕಟಪ್ಪ ಇತಿಹಾಸ ಪ್ರಾಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.