ADVERTISEMENT

ಗಾಂಧಿ ನಿಂದನೆ, ಅಸಹನೆ ಸರಿಯೇ: ಮ.ರಾಮಕೃಷ್ಣ ಪ್ರಶ್ನೆ

ಕುವೆಂಪು ಜಯಂತಿ ಅಂಗವಾಗಿ ಗಮಕ ವ್ಯಾಖ್ಯಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 4:23 IST
Last Updated 28 ಡಿಸೆಂಬರ್ 2025, 4:23 IST
ಮಂಡ್ಯ ನಗರದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಎಂ.ಎಲ್‌.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಕುವೆಂಪು ಜಯಂತಿ ಅಂಗವಾಗಿ ಶುಕ್ರವಾರ ಆರಂಭವಾದ ಗಮಕ–ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಸಾಹಿತಿ ಮ.ರಾಮಕೃಷ್ಣ ಮಾತನಾಡಿದರು 
ಮಂಡ್ಯ ನಗರದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಎಂ.ಎಲ್‌.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಕುವೆಂಪು ಜಯಂತಿ ಅಂಗವಾಗಿ ಶುಕ್ರವಾರ ಆರಂಭವಾದ ಗಮಕ–ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಸಾಹಿತಿ ಮ.ರಾಮಕೃಷ್ಣ ಮಾತನಾಡಿದರು    

ಮಂಡ್ಯ: ‘ಗಾಂಧೀಜಿ ಅವರನ್ನು ಮಹಾತ್ಮ ಅಲ್ಲ ಎನ್ನುವುದನ್ನು ವಾಟ್ಸ್‌ಆ್ಯಪ್‌ನಲ್ಲಿ ಹೇಳಲಾಗುತ್ತಿದೆ. ಹಣದ ನೋಟಿನಲ್ಲಿಯೂ ಗಾಂಧಿ ಅವರ ಚಿತ್ರ ಬದಲಿಸಲು ಹೊರಟಿದ್ದು, ಈಗಾಗಲೇ ನರೇಗಾ ಹೆಸರಲ್ಲಿ ಗಾಂಧಿ ಹೆಸರು ತೆಗೆದು ಹಾಕಲಾಗಿದೆ. ಗಾಂಧಿ ಅವರನ್ನು ಒಪ್ಪಿಕೊಳ್ಳದ ಮನಸ್ಥಿತಿಗೆ ಹೋಗುತ್ತಿರುವುದು ಸರಿಯಲ್ಲ’ ಎಂದು ಸಾಹಿತಿ ಮ.ರಾಮಕೃಷ್ಣ ವಿಷಾದಿಸಿದರು.

ನಗರದ ಕೆ.ವಿ. ಶಂಕರಗೌಡ ಭವನದಲ್ಲಿ ಕರ್ನಾಟಕ ಸಂಘ, ಎಂ.ಎಲ್‌.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಕುವೆಂಪು ಜಯಂತಿ ಅಂಗವಾಗಿ ಶುಕ್ರವಾರ ಆರಂಭವಾದ ಗಮಕ–ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿ ಅವರನ್ನು ಇನ್ನೂ ಬೇಗನೇ ಕೊಲ್ಲಬೇಕಿತ್ತು ಎಂಬ ಮಾತುಗಳನ್ನು ಹೇಳುವುದನ್ನು ನಾನು ಕೇಳಿದ್ದೇನೆ. ಒಂದು ಸುಳ್ಳನ್ನು ಹತ್ತು ಬಾರಿ ಅಲ್ಲ ನೂರು ಬಾರಿ ಹೇಳಿದರೆ ಅದು ನಿಜವಾಗಿ ಬಿಡುತ್ತದೆ. ಹಾಗೆ ಮುಂದುವರಿದು ನೋಡಿದರೆ ಗಾಂಧೀಜಿ ಅವರ ನಿಂದನೆ ಮಾಡುವುದು ಹೆಚ್ಚಳವಾಗುತ್ತಿದೆ. ಅದಕ್ಕೆ ಸಾಕ್ಷಿ ಎಂದರೆ ಅವರನ್ನು ‘ಚರಕಾಸುರ’ ಎಂಬುದನ್ನು ಹಾಸ್ಯ ಪದವಾಗಿ ಹೇಳಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ADVERTISEMENT

ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌ ಮಾತನಾಡಿ, ಕುವೆಂಪು ಅವರು ಕನ್ನಡ ನಾಡಿನ ಮೇರು ಕವಿಯಾಗಿದ್ದಾರೆ. ಅವರ ಬರವಣಿಗೆಯು ಎಲ್ಲರ ಜೀವನದಲ್ಲಿಯೂ ಬೆಳಕು ತರುವಂತಹದ್ದಾಗಿದೆ. ಗಮಕ ವ್ಯಾಖ್ಯಾನದಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದು ತಿಳಿಸಿದರು.

ಶ್ರೀರಾಮಾಯಣ ದರ್ಶನಂ ಬೆಳಗಿಸಿದ ಸ್ತ್ರೀ ಪಾತ್ರಗಳು ಕುರಿತು ತುಮಕೂರು ಲಕ್ಷ್ಮಿ ಜಯಪ್ರಕಾಶ್‌ ಗಮಕ ವಾಚಿಸಿದರೆ, ಶುಭಶ್ರೀ ಪ್ರಸಾದ್‌ ಅವರು ವ್ಯಾಖ್ಯಾನಿಸಿದರು.

ಕುವೆಂಪು ಬಗ್ಗೆಯೂ ಅಪಪ್ರಚಾರ 

ಗಾಂಧೀಜಿ ಹಾಗೂ ಕುವೆಂಪು ಅವರು ನಮ್ಮೊಡನೆ ಇಲ್ಲದೇ ಇರಬಹುದು ಆದರೆ ಅವರು ಬದುಕು ನಡೆಸಿದ ರೀತಿ ಎಲ್ಲರಿಗೂ ಇಷ್ಟವಾಗುತ್ತದೆ. ಗಾಂಧೀಜಿ ಅವರು ಅವತ್ತಿನ ಕಾಲಘಟ್ಟದಲ್ಲಿಯೇ ಆರೋಪಕ್ಕೆ ಒಳಗಾಗಿದ್ದರೆ. ಕುವೆಂಪು ಅವರು ಬದುಕಿರುವ ಕಾಲದಲ್ಲಿ ಹಾಗೂ ನಂತರದಲ್ಲಿ ಅಪಪ್ರಚಾರಕ್ಕೆ ತುತ್ತಾಗಿದ್ದರು. ‘ಕುವೆಂಪು ಅವರು ಕವಿಯೇ ಅಲ್ಲ ಅವರು ಕವಿಯಾದರೆ ನಾನು ಕವಿಯಲ್ಲ’ ಎಂಬುದನ್ನು ಕನ್ನಡದ ದೊಡ್ಡ ಕವಿಯೊಬ್ಬರು ಹೇಳಿದ್ದರು. ಇದರ ಹೊರತಾಗಿಯೂ ಕುವೆಂಪು ಸಾಹಿತ್ಯ ಜನಮಾನಸದಲ್ಲಿ ಇಂದಿಗೂ ಹಸಿರಾಗಿದೆ’ ಎಂದು ಹೇಳಿದರು.  ಕುವೆಂಪು ಕೃತಿಗಳ ಬಗ್ಗೆ ಸಾಹಿತ್ಯ ವಲಯದಲ್ಲಿಯೇ ದೊಡ್ಡದೊಡ್ಡ ಆರೋಪಗಳು ಬಂದವು. ದೊಡ್ಡಕವಿ ಜಿ.ಎಸ್‌. ಶಿವರುದ್ರಪ್ಪ ಅವರು ಹೇಳಿರುವಂತೆ ‘ನೀವು ಕಲಿಸಿದ್ದೀರಿ ತಲೆ ಎತ್ತಿ ನಡೆಯುವುದನ್ನು ಯಾವ ಆರೋಪಗಳಿಗೂ ಜಗ್ಗದೆ’ ಕುವೆಂಪು ಅವರ ಪರವಾಗಿ ಬರೆದಿದ್ದರು ಎಂದು ಮೆಲುಕು ಹಾಕಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.