
ಮಂಡ್ಯ: ‘ಮಹಾತ್ಮ ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೆ, ಡಾ.ಬಿ.ಆರ್. ಅಂಬೇಡ್ಕರ್ ಅವರು ದೇಶದ ಸಮಾನತೆಗಾಗಿ ಹೋರಾಡಿದ್ದಾರೆ. ಅವರ ಚಿಂತನೆ ನಿಲುವು, ಆದರ್ಶವನ್ನು ಇಂದಿನ ಯುವ ಪೀಳಿಗೆಗಳು ಪಾಲಿಸಬೇಕು’ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಹೇಳಿದರು.
ಮಂಡ್ಯ ವಿಶ್ವವಿದ್ಯಾಲಯ, ಮಂಡ್ಯ ಗಾಂಧಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಗಣಕ ವಿಜ್ಞಾನ ವಿಭಾಗದ ವತಿಯಿಂದ ಮಂಡ್ಯ ವಿಶ್ವವಿದ್ಯಾಲಯದ ಆಡಳಿತ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಗಾಂಧಿ ವಿಚಾರಧಾರೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿ ಆಶಯದಂತೆ ಹೆಣ್ಣು ಮಕ್ಕಳು ಸ್ವತಂತ್ರ ಮತ್ತು ಸಮಾನತೆಯಿಂದ ಬದುಕುತ್ತಿದ್ದಾರೆ. ಗಂಡು ಮಕ್ಕಳನ್ನು ಮೀರಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮೆರೆಯುತ್ತಿದ್ದಾರೆ. ಸ್ವಚ್ಛತೆ, ಶ್ರಮ, ಕೃಷಿ, ಆಹಾರ, ಆರೋಗ್ಯ ಹಾಗೂ ಜೀವನ ಮೌಲ್ಯಗಳ ಬಗ್ಗೆ ಗಾಂಧೀಜಿ ಮಾತನಾಡಿದ್ದಾರೆ. ಸರಳತೆಯೇ ಜಗತ್ತಿನ ಸಾರ ಎಂದ ಅವರು ಸಶಸ್ತ್ರ ಹಿಡಿಯದೆ, ರಕ್ತಪಾತವಿಲ್ಲಿದೆ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ಶಿಕ್ಷಣ ಎಂಬುದು ಕೇವಲ ಉದ್ಯೋಗಕ್ಕಾಗಿ ಸೀಮಿತವಾಗಿರುವುದಲ್ಲ ಶಿಕ್ಷಣದಿಂದ ಅರಿವು, ಜ್ಞಾನ, ಜೀವನದ ಮೌಲ್ಯ ಎಲ್ಲವೂ ತಿಳಿಯಲು ಸಾಧ್ಯ. ವಿದ್ಯಾರ್ಥಿಗಳಾದ ನೀವು ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು, ಪ್ರಶ್ನಿಸುವುದರ ಜತೆಗೆ ಕೇಳಿಸಿಕೊಳ್ಳುವ ಆಸಕ್ತಿಯನ್ನು ಸಹ ಮೈಗೂಡಿಸಿಕೊಳ್ಳಬೇಕು. ವಿಷಯಗಳನ್ನು ಸಂಪೂರ್ಣವಾಗಿ ಕೇಳಿಸಿಕೊಂಡಾಗ ಮಾತ್ರ ವಿಷಯದ ಆಳವಾಗಿ ಮಾಹಿತಿ ಅರ್ಥೈಸಿಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಗಾಂಧೀಜಿ ಚಿಂತನೆಗಳ ಪ್ರಸ್ತುತತೆ ಕುರಿತು ಬೆಂಗಳೂರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ನಿರ್ದೇಶಕ ಜಿ.ಬಿ.ಶಿವರಾಜು ಹಾಗೂ ರಾಜ್ಯ ಸಂಪನ್ಮೂಲ ಕೇಂದ್ರ ನಿವೃತ್ತ ನಿರ್ದೇಶಕ ಎಸ್.ತುಕಾರಾಂ ಉಪನ್ಯಾಸ ನೀಡಿದರು.
ಗಾಂಧಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜಕಿ ಸುಮಾರಾಣಿ ಶಂಭು, ಉಪ ಕುಲಸಚಿವ ಎಂ.ವೈ. ಶಿವರಾಮು, ಮೌಲ್ಯಮಾಪನ ಕುಲಸಚಿವ ಜಿ. ವಿ ವೆಂಕಟರಮಣ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಜಿ. ವಿ ಪ್ರೇಮ್ ಸಿಂಗ್ ಹಾಜರಿದ್ದರು.
ಗಾಂಧೀಜಿ ಆದರ್ಶ ಸದಾ ಕಾಲಕ್ಕೆ ಅನ್ವಯವಾಗುವಂಥದ್ದು. ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಸಬಲೀಕರಣವಾಗಬೇಕು ಎಂದು ಆಶಿಸಿದ್ದರು
– ಪ್ರೊ.ಕೆ. ಶಿವಚಿತ್ತಪ್ಪ ಕುಲಪತಿ ಮಂಡ್ಯ ವಿವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.