
ಮಂಡ್ಯ: ‘ಜಿಲ್ಲೆಯಲ್ಲಿ ಪ್ರತಿ 1000 ಪುರುಷರಿಗೆ ಕೇವಲ 935 ಹೆಣ್ಣು ಮಕ್ಕಳ ಲಿಂಗಾನುಪಾತ ಇದೆ. ಅಧಿಕಾರಿಗಳು ಲಿಂಗಾನುಪಾತವನ್ನು ಸರಿದೂಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಯಿ ಕಾರ್ಡ್ ಇದ್ದವರಿಗೆ ಮಾತ್ರ ಸ್ಕ್ಯಾನಿಂಗ್ ಮಾಡಿ, ಕಾನೂನು ಬಾಹಿರವಾಗಿ ಸ್ಕ್ಯಾನಿಂಗ್ ಮಾಡಬಾರದು. ಇದರಿಂದ ಹೆಣ್ಣು ಭ್ರೂಣ ಹತ್ಯೆಗಳು ಹೆಚ್ಚಾಗುತ್ತವೆ ಎಂದು ಹೇಳಿದರು.
‘ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಸ್ಕ್ಯಾನಿಂಗ್ ಮಾಡುತ್ತಿರುವವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮವನ್ನು ಅವರ ಮೇಲೆ ಕೈಗೊಳ್ಳಿ. ಅಧಿಕಾರಿಗಳು ಜಿಲ್ಲೆಯಲ್ಲಿ ಇರುವ ಸ್ಕ್ಯಾನಿಂಗ್ ಸೆಂಟರ್ ಗಳಿಗೆ ನಿರ್ದಿಷ್ಟ ಅವಧಿಯಲ್ಲಿ ಭೇಟಿ ನೀಡಿ ಪರಿಶೀಲಿಸಿ’ ಎಂದು ಸೂಚಿಸಿದರು.
ಜಿಲ್ಲೆಯ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ಪ್ರಮಾಣ ಕಡಿಮೆ ಇದೆ. ಸದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ಪ್ರಮಾಣ ಕಡಿಮೆಯಾಗಲೂ ಕಾರಣವೇನು ಎಂದು ಪರಿಶೀಲನೆ ನಡೆಸಿ. ಜಿಲ್ಲೆಯಲ್ಲಿ ಶೇ 69ರಷ್ಟು ಡೆಲಿವರಿ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿವೆ ಎಂದರು.
ನಿಮೋನಿಯವನ್ನು ನಿರ್ಮೂಲನೆ ಮಾಡಲು ಮತ್ತು ಅದರ ಕುರಿತು ಅರಿವು ಮೂಡಿಸಲು ನ.12ರಿಂದ 28 ಫೆಬ್ರವರಿ 2026ರವರೆಗೆ ಎಸ್.ಎ.ಎ.ಎನ್.ಎಸ್. ಅಭಿಯಾನ ರೂಪಿಸಲಾಗಿದೆ. 0-5 ವರ್ಷದೊಳಗಿನ ಮಕ್ಕಳ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದರು.
ಜಿಲ್ಲಾಧಿಕಾರಿ ಕುಮಾರ ಅವರು ಅಭಿಯಾನದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಸಭೆಯಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಕೆ.ಪಿ ಅಶ್ವಥ್, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಎಂ.ಎನ್. ಆಶಾಲತಾ, ಡಾ.ಬೆಟ್ಟಸ್ವಾಮಿ, ನಿವೃತ್ತ ಡಿ.ಹೆಚ್.ಒ ಡಾ.ಟಿ.ಎನ್. ಮರೀಗೌಡ ಇದ್ದರು.
‘ದಡಾರ ನಿರ್ಮೂಲನೆಗೆ ಕ್ರಮವಹಿಸಿ’
ಮಂಡ್ಯ ಜಿಲ್ಲೆಯಲ್ಲಿ ದಡಾರ ರುಬೆಲ್ಲಾ ನಿರ್ಮೂಲನೆಗೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕುಮಾರ ಅವರು ಹೇಳಿದರು. ಮಕ್ಕಳನ್ನು ದಡಾರ ರುಬೆಲ್ಲಾ ಕಾಯಿಲೆಯಿಂದ ರಕ್ಷಿಸಲು ಸದರಿ ವರ್ಷದ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ 11520 ಮಕ್ಕಳಿಗೆ ಸಂಪೂರ್ಣ ಲಸಿಕೆ ನೀಡುವ ಮೂಲಕ ಶೇ 100ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.
ದಡಾರ ರುಬೆಲ್ಲಾ 1ನೇ ಡೋಸ್ ಲಸಿಕೆಯನ್ನು 11580 ಮಕ್ಕಳಿಗೆ ನೀಡಲಾಗಿದೆ ಹಾಗೂ ಎರಡನೇ ಡೋಸ್ ಲಸಿಕೆಯನ್ನು 11520 ಮಕ್ಕಳಿಗೆ ನೀಡಲಾಗಿದೆ. ಮಂಡ್ಯ ಹಾಗೂ ನಾಗಮಂಗಲದಲ್ಲಿ ಎರಡನೇ ಡೋಸ್‌ನಿಂದ ಹೆಚ್ಚು ಮಕ್ಕಳು ಹೋರಗುಳಿದಿದ್ದಾರೆ. ಅವರಿಗೆ ಲಸಿಕೆ ನೀಡಿಸಿ ಎಂದು ಹೇಳಿದರು. ಜಿಲ್ಲೆಯಲ್ಲಿ ಸದರಿ ವರ್ಷ 174 ಮಕ್ಕಳಲ್ಲಿ ದದ್ದು ಜ್ವರ ಕಾಣಿಸಿಕೊಂಡಿದ್ದು ಪರಿಶೀಲನೆ ನಡೆಸಿದಾಗ 7 ದಡಾರ ಹಾಗೂ 2 ರುಬೆಲ್ಲಾ ಪ್ರಕರಣಗಳು ದೃಢಪಟ್ಟಿವೆ. ಸದರಿ ವರ್ಷ ತೀವ್ರವಾದ ಫ್ಲಾಸಿಡ್ ಪಾರ್ಶ್ವವಾಯು 12 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.