
ಮಂಡ್ಯ: ಜೀವ ಪಣಕ್ಕಿಟ್ಟು ಸ್ವಿಗ್ಗಿ, ಝೋಮೆಟೊ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಪಘಾತ ವಿಮೆ ಕಲ್ಪಿಸಲು ನೂತನ ಯೋಜನೆ ಜಾರಿಗೆ ತಂದಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ರಾಜ್ಯ ಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ‘ಮಂಡ್ಯ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘16ರಿಂದ 18ಗಂಟೆ ರಸ್ತೆಯಲ್ಲಿ ಸಂಚರಿಸಿ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಯುವಕರು ಮತ್ತು ಕಾರ್ಮಿಕರು ಅಪಘಾತದಲ್ಲಿ ಮರಣ ಹೊಂದಿದರೆ ₹5 ಲಕ್ಷ, ಅಂಗವೈಕಲ್ಯವಾದರೆ ₹2 ಲಕ್ಷ, ಆಸ್ಪತ್ರೆ ಚಿಕಿತ್ಸೆಗೆ ಗರಿಷ್ಠ ₹1 ಲಕ್ಷದವರೆಗೂ ಪರಿಹಾರ ನೀಡಲಾಗುವುದು. ಕುಟುಂಬದ ಜವಬ್ದಾರಿ ನಿರ್ವಹಿಸುವ ಯುವಕರ ಜೀವ ಅಮೂಲ್ಯವಾಗಿದ್ದು, ಹಾಗಾಗಿ ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಬೇಕು’ ಎಂದು ಸಲಹೆ ನೀಡಿದರು.
‘101 ಅಸಂಘಟಿತ ಕಸುಬು ಮಾಡುವವರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಿ ಲಕ್ಷಾಂತರ ಜನರಿಗೆ ಕಾರ್ಮಿಕ ಕಾರ್ಡ್ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೃಷಿ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರೆಂದು ಪರಿಗಣಿಸಲಾಗುವುದು. ಸಿನಿಮಾ ಯಶಸ್ವಿಯಾಗಲು ಸಿನಿಮಾರಂಗದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಶ್ರಮವು ಪ್ರಮುಖವಾಗಿದ್ದು, ಸಿನಿಮಾ ಕ್ಷೇತ್ರದ ಕಾರ್ಮಿಕರಿಗೆ ಅನುಕೂಲವಾಗಲು ನೂತನ ಸೌಲಭ್ಯ ಯೋಜನೆ ತರಲು ಕಾರ್ಮಿಕ ಇಲಾಖೆ ಮುಂದಾಗಿದೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ, ಕರ್ನಾಟಕ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮಂಡಳಿಯ ಜಂಟಿ ಕಾರ್ಮಿಕ ಆಯುಕ್ತ ಎಸ್.ಬಿ. ರವಿಕುಮಾರ್, ಪ್ರಚಾರ ಮತ್ತು ಅಂಕಿ ಅಂಶ ಶಾಖೆ ಉಪ ಕಾರ್ಮಿಕ ಆಯುಕ್ತ ಸೋಮಣ್ಣ, ಮೈಸೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಎಲ್.ಲಲಿತಾಬಾಯಿ, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕಾರ್ಮಿಕ ಅಧಿಕಾರಿ ಎಂ.ಸವಿತಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.